ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಿಕಿತ್ಸೆಗೆ ಸ್ಪಂದಿಸದ ಬಾಬಾ: ಪುಟ್ಟಪರ್ತಿಯಲ್ಲಿ ಕಟ್ಟೆಚ್ಚರ (Sathya Sai Baba | Health condition | Organs failure | Security)
PR
ದೇವ ಮಾನವ ಸತ್ಯಸಾಯಿ ಬಾಬಾ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಅವರ ಕೆಲವು ಅಂಗಗಳು ನಿಷ್ಕ್ರಿಯವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಘೋಷಿಸಿರುವುದರೊಂದಿಗೆ, ಪುಟ್ಟಪರ್ತಿಯ ಸುತ್ತಮುತ್ತ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿದ್ದು, ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದೆ.

ಬಾಬಾ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅವರಿಗೆ ಚಿಕಿತ್ಸೆಯನ್ನೇ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ವೈದ್ಯಾಧಿಕಾರಿಗಳಲ್ಲಿ ಗೊಂದಲ ಏರ್ಪಟ್ಟಿದೆ ಎನ್ನಲಾಗುತ್ತಿದೆ. ಭಕ್ತಾದಿಗಳಲ್ಲಿಯೂ ಆತಂಕ ಹೆಚ್ಚಾಗಿದ್ದು, ಆಸ್ಪತ್ರೆಯ ಸುತ್ತ ಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಬಾಬಾ ಅವರ ಯಕೃತ್‌ ನಿಷ್ಕ್ರಿಯವಾಗಿದ್ದು, ರಕ್ತದೊತ್ತಡ ತುಂಬಾ ಕಡಿಮೆಯಾಗಿದೆ. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪುಟ್ಟಪರ್ತಿಯ ಸತ್ಯ ಸಾಯಿ ಸೂಪರ್‌ ಸ್ಷೆಷಾಲಿಟಿ ಆಸ್ಪತ್ರೆ ವೈದ್ಯರು ಗುರುವಾರ ಹೇಳಿದ್ದಾರೆ. ಬಾಬಾ ಅವರ ಚಿಕಿತ್ಸೆಗಾಗಿ ಅಮೆರಿಕದ ವೈದ್ಯರ ತಂಡ ಅತ್ಯಾಧುನಿಕ ಉಪಕರಣಗಳೊಂದಿಗೆ ಧಾವಿಸುತ್ತಿದೆ.

ಹೃದ್ರೋಗ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 86 ವರ್ಷದ ಸತ್ಯ ಸಾಯಿ ಬಾಬಾ ಅವರನ್ನು ಕಳೆದ ಮಾರ್ಚ್ 28 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅನಂತಪುರ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್
ಬಾಬಾ ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂದು ವೈದ್ಯಾಧಿಕಾರಿಗಳು ಬುಧವಾರ ಸಂಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಧಾವಿಸುತ್ತಿರುವ ಭಕ್ತಾದಿಗಳು, ಅವರ ಆರೋಗ್ಯ ಸುಧಾರಣೆಗಾಗಿ ಪೂಜೆ, ಪ್ರಾರ್ಥನೆ ನಡೆಸುತ್ತಿದ್ದಾರೆ. ಬಾಬಾ ಆರೋಗ್ಯ ಸ್ಥಿತಿಯ ಬಗ್ಗೆ ಸರಕಾರವಾಗಲೀ, ಟ್ರಸ್ಟ್ ಆಗಲೀ ಸೂಕ್ತ ಮಾಹಿತಿ ನೀಡದೆ ಮುಚ್ಚಿಡುತ್ತಿದೆ ಎಂದು ಆರೋಪಿಸಿ ಕೆಲವು ಭಕ್ತರು ದಾಂಧಲೆಯನ್ನೂ ನಡೆಸಿರುವುದು ಇಲ್ಲಿ ಸ್ಮರಣಾರ್ಹ.

ರಾಜ್ಯ ಸರಕಾರವು ಪರಿಸ್ಥಿತಿಯ ಬಗ್ಗೆ ತೀವ್ರ ನಿಗಾ ವಹಿಸಿದ್ದು, ಅನಂತಪುರ ಜಿಲ್ಲೆ ಹಾಗೂ ಪುಟ್ಟಪರ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಶಾಂತಿನಿಲಯಂ ಆಶ್ರಮದ ಸುತ್ತ 4 ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ಸಂಪತ್ತು ಲೂಟಿ
ಸತ್ಯ ಸಾಯಿ ಬಾಬಾ ಅವರ 30 ಸಾವಿರ ಕೋಟಿ ರೂ. ಆಸ್ತಿಯನ್ನು ನೋಡಿಕೊಳ್ಳುತ್ತಿರುವ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್‌ನ ಉತ್ತರಾಧಿಕಾರಕ್ಕಾಗಿ ನಡೆಸುತ್ತಿರುವ ಕಚ್ಚಾಟದ ಬಗ್ಗೆ ರಾಜ್ಯ ಸರಕಾರ ಆತಂಕಗೊಂಡಿದೆ.

ಇದೇ ವೇಳೆ, ಪುಟ್ಟಪರ್ತಿಯಲ್ಲಿರುವ ಸಾಯಿ ಬಾಬಾ ಅವರ ಸಂಪತ್ತು, ಬಂಗಾರವನ್ನೆಲ್ಲಾ ಕೊಳ್ಳೆ ಹೊಡೆಯಲು ಆರಂಭಿಸಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ. ಚಿನ್ನವನ್ನು ಸೂಟ್‌ಕೇಸುಗಳಲ್ಲಿ ಬೇರೆಡೆ ಸಾಗಿಸಲಾಗುತ್ತಿದೆ ಎಂಬ ಕುರಿತಾಗಿ ಊಹಾಪೋಹಗಳು ಕೇಳಿಬರುತ್ತಿವೆ.

ಟ್ರಸ್ಟ್ ಸಭೆ...
ಸತ್ಯಸಾಯಿ ಟ್ರಸ್ಟ್‌ನ ಸದಸ್ಯರಾದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎನ್‌.ಭಗವತಿ ಹಾಗೂ ಇಂದೂಲಾಲ್‌ ಶಾ ಅವರು ಪುಟ್ಟಪರ್ತಿಗೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ. ಬಾಬಾ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಪುಟ್ಟಪರ್ತಿಯಲ್ಲಿ ಸತ್ಯಸಾಯಿ ಸೆಂಟ್ರಲ್‌ ಟ್ರಸ್ಟ್‌ ಸಭೆ ನಡೆಯುತ್ತಿದ್ದು, ಟ್ರಸ್ಟ್‌ನ 9 ಜನ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಇದೇ ವೇಳೆ, ಬಾಬಾ ಅವರ ಆರೋಗ್ಯ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಸಚಿವೆ ಗೀತಾ ರೆಡ್ಡಿ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದು, ಟ್ರಸ್ಟ್ ಸದಸ್ಯರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಇವನ್ನೂ ಓದಿ