ಕಪ್ಪು ಹಣದ ಮೇಲೆ ನಿದ್ದೆ ಮಾಡ್ತಿದೀರಾ? ಕೇಂದ್ರಕ್ಕೆ ಸುಪ್ರೀಂ
ನವದೆಹಲಿ, ಶುಕ್ರವಾರ, 22 ಏಪ್ರಿಲ್ 2011( 09:11 IST )
ಅಧಿಕಾರಕ್ಕೆ ಬಂದಾಗಿನಿಂದ ಕಾಮನ್‌ವೆಲ್ತ್, 2ಜಿ ಸ್ಪ್ರೆಕ್ಟ್ರಂ ಸೇರಿದಂತೆ ಒಂದಿಲ್ಲೊಂದು ಪ್ರಕರಣಗಳಲ್ಲಿ ಛೀಮಾರಿಗೊಳಗಾಗಿರುವ ಕೇಂದ್ರ ಸರಕಾರಕ್ಕೆ ಸುಪ್ರೀಂ ಮತ್ತೆ ಛಡಿಯೇಟು ನೀಡಿದೆ. ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ಕುರಿತು ತನಿಖೆ ನಡೆಸುವಲ್ಲಿ ವಿಳಂಬ ನೀತಿ ಅನುಸರಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಗುರುವಾರ ಯುಪಿಎ ನೇತೃತ್ವದ ಕೇಂದ್ರ ಸರಕಾರಕ್ಕೆ ತಪರಾಕಿ ನೀಡಿದೆ.
ಕಪ್ಪು ಹಣ ಪ್ರಕರಣದ ಬಗ್ಗೆ ವಿವಿಧ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿವೆ ಎಂದು ಕೇಂದ್ರ ಸರಕಾರ ಹೇಳಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ಈವರೆಗೂ ತನಿಖಾ ಸಂಸ್ಥೆಗಳು ಏನು ಮಾಡುತ್ತಿದ್ದವು? ನಿದ್ರೆಯಲ್ಲಿದ್ದವೇ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
ಪುಣೆಯ ಕುಖ್ಯಾತ ಉದ್ಯಮಿ ಹಸನ್ ಅಲಿ ಸ್ವಿಸ್ ಬ್ಯಾಂಕ್‌ನಲ್ಲಿ 8 ಕೋಟಿ ಡಾಲರ್ ಕಪ್ಪು ಹಣ ಇಟ್ಟಿದ್ದಾರೆ ಎಂದು ಮಾಹಿತಿ ನೀಡಿರುವ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕೋರ್ಟ್, ಕೇವಲ ಒಬ್ಬ ವ್ಯಕ್ತಿ ಮಾತ್ರ ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವುದಾಗಿ ತಿಳಿಸಿದ್ದೀರಿ, ಬೇರಾವ ಭಾರತೀಯರೂ ಸ್ವಿಸ್ ಬ್ಯಾಂಕಿನಲ್ಲಿ ಹಣವನ್ನಿಟ್ಟಿಲ್ಲವೇ? 2009 ರಿಂದಲೂ ಅಧಿಕಾರದಲ್ಲಿರುವ ನಿಮಗೆ ಈ ಬಗ್ಗೆ ಮಾಹಿತಿ ಇಲ್ಲವೇ ಎಂದು ವ್ಯಾಯಾಲಯ ಪ್ರಶ್ನಿಸಿದೆ.
ಹಸನ್ ಅಲಿ ಕಳೆದ ತಿಂಗಳು ಬಂಧಿತನಾಗಿರುವ ಹಸನ್ ಅಲಿ ವಿಚಾರಣೆ ನಡೆಸಲಾಗುತ್ತಿದ್ದು, ಈತ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅಂದಾನ್ ಖಾಸೋಗಿ ಮತ್ತು ಭಯೋತ್ಪಾದಕರ ಗುಂಪಿನೊಂದಿಗೆ ನಂಟು ಹೊಂದಿರುವ ಸಾಧ್ಯತೆಗಳ ಬಗ್ಗೆಯೂ ನ್ಯಾಯಾಲಯದ ಸೂಚನೆ ಅನುಸಾರವಾಗಿ ತನಿಖೆ ಮುಂದುವರಿಯುತ್ತಿದೆ.
ಮಾದಕ ವಸ್ತುಗಳ ಸಾಗಣೆ ಹಾಗೂ ಭಯೋತ್ಪಾದಕ ಕೃತ್ಯಗಳ ಮೂಲಕ ಕಪ್ಪುಹಣವನ್ನು ಸಂಗ್ರಹಿಸಲಾಗುತ್ತಿದೆ ಎಂದು ಕೋರ್ಟ್ ಮತ್ತೆ ಕಳವಳ ವ್ಯಕ್ತಪಡಿಸಿದೆ.
ವಿದೇಶದಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣ ಹೊರತರಲು ಕೇಂದ್ರ ಸರಕಾರವನ್ನೇ ಹೊಣೆಯಾಗಿಸಬೇಕು ಎಂದು ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.