ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಟ್ಟಪರ್ತಿಯಲ್ಲಿ ದೇವಮಾನವ ಸತ್ಯ ಸಾಯಿಬಾಬಾ ಅಸ್ತಂಗತ (Puttaparthi | Satya saibaba | Died)
EVENT
ಪವಾಡ ಪುರುಷ ಸತ್ಯಸಾಯಿಬಾಬಾ ಇಂದು ಬೆಳಿಗ್ಗೆ 7.40 ಗಂಟೆಗೆ ಅಸ್ತಂಗತರಾಗಿದ್ದಾರೆ ಎಂದು ಆಂಧ್ರ ಪ್ರದೇಶದ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜು ರೆಡ್ಡಿ ಹೇಳಿದ್ದಾರೆ.

ಕಳೆದ ಮಾರ್ಚ್ 28 ರಂದು ಅನಾರೋಗ್ಯದ ಕಾರಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸತ್ಯ ಸಾಯಿಬಾಬಾ, ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಂದು ಬೆಳಿಗ್ಗೆ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಮಾರ್ಚ್ 28 ರಿಂದ ಸತ್ಯ ಸಾಯಿಬಾಬಾ, ನ್ಯೂಮೋನಿಯಾ, ಉಸಿರಾಟ ಮತ್ತು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

11 ಗಂಟೆಗೆ ಸಾಯಿಬಾಬಾ ಟ್ರಸ್ಟ್ , ಸತ್ಯ ಸಾಯಿಬಾಬಾ ಅವರ ನಿಧನದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಸತ್ಯ ಸಾಯಿಬಾಬಾ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕೋಟ್ಯಾಂತರ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ, ನಗರದಲ್ಲಿ ಭಕ್ತರು ಸಾಯಿಬಾಬಾ ಅವರ ಆತ್ಮಕ್ಕೆ ಶಾಂತಿ ದೊರೆಯಲು ಪ್ರಾರ್ಥಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಯಿಬಾಬಾ ಅವರ ಪಾರ್ಥಿವ ಶರೀರವನ್ನು ಸಾಯಿ ಕುಲವಂತ್ ಹಾಲ್‌ನಲ್ಲಿ ಇಡಲಾಗಿದ್ದು, ಭಕ್ತರು ಇಂದು ಸಂಜೆ 6 ಗಂಟೆಯಿಂದ ಎರಡು ದಿನಗಳವರೆಗೆ ದರ್ಶನವನ್ನು ಪಡೆಯಬಹುದು ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

ಸಕಲ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲು ಆಂಧ್ರ ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಚಾರಿಟೇಬಲ್ ಟ್ರಸ್ಟ್ ಮೂಲಕ ಜನಪರ ಕಾರ್ಯಗಳನ್ನು ಮಾಡಿದ ಬಾಬಾ, ನೂರಾರು ಗ್ರಾಮಗಳಿಗೆ ಕುಡಿಯುವ ನೀರು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಬಡವರ ಪಾಲಿಗೆ ನಡೆದಾಡುವ ದೇವರಾಗಿದ್ದರು.

ವಿಶ್ವದಾದ್ಯಂತ 140 ರಾಷ್ಟ್ರಗಳಲ್ಲಿ ಶಾಖೆಗಳನ್ನು ಹೊಂದಿದೆ 1400ಕ್ಕೂ ಹೆಚ್ಚಿನ ಸತ್ಯ ಸಾಯಿಬಾಬಾ ಕೇಂದ್ರಗಳಿವೆ. ಲಕ್ಷಾಂತರ ಭಕ್ತರು ಇಂದು ಶೋಕದ ಮಡುವಿನಲ್ಲಿದ್ದಾರೆ ಎಂದು ಸಾಯಿಬಾಬಾ ಟ್ರಸ್ಟ್ ಅದಿಕಾರಿಗಳು ತಿಳಿಸಿದ್ದಾರೆ.

ಸತ್ಯಸಾಯಿಬಾಬಾ ಜನನ
ಶ್ರೀ ಸತ್ಯ ಸಾಯಿಬಾಬಾ ಅವರು 1926 ನವೆಂಬರ್ 23 ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಟಪರ್ತಿಯಲ್ಲಿ ಜನಿಸಿದರು. ತಂದೆ ವೆಂಕಪ್ಪರಾಜು ಮತ್ತು ತಾಯಿ ಈಶ್ವರಮ್ಮ ಅವರ ಪ್ರೀತಿ ಪಾತ್ರದ ಕುಡಿಯಾಗಿದ್ದರು.

ಸತ್ಯನಾರಾಯಣ ಪೂಜೆಯ ಪ್ರಸಾದ ಸೇವಿಸಿದ ನಂತರ ಮಗುವಿನ ಜನನವಾಗಿದ್ದರಿಂದ ಮಗುವಿಗೆ ಸತ್ಯನಾರಾಯಣ ಎಂದು ಹೆಸರಿಡಲಾಗಿತ್ತು. ಪುಟ್ಟಪರ್ತಿಯಲ್ಲಿರುವ ಶಾಲೆಯಲ್ಲಿ ಬಾಬಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಬಾಬಾ ಎಂಡು ವರ್ಷದ ಬಾಲಕನಾಗಿದ್ದಾಗಲೇ ಅಪಾರ ಪ್ರತಿಭಾವಂತರಾಗಿದ್ದರು.

1940 ಮೇ 23 ರಂದು 14 ವರ್ಷ ವಯಸ್ಸಿನಲ್ಲಿ ಬಾಬಾ, ತಾವು ಶಿವಶಕ್ತಿ ಸ್ವರೂಪ ಶಿರಡಿ ಸಾಯಿಬಾಬಾ ಅವತಾರ ಎಂದು ಘೋಷಿಸಿ ಕೈಯಲ್ಲಿರುವ ಹೂವುಗಳನ್ನು ಗಾಳಿಯಲ್ಲಿ ತೂರಿದಾಗ,ಭೂಮಿಗೆ ಬಿದ್ದ ಹೂವುಗಳಿಂದ ತೆಲಗು ಭಾಷೆಯಲ್ಲಿ ಸಾಯಿಬಾಬಾ ಎನ್ನುವ ರೂಪವನ್ನು ಪಡೆದವು.1940ರ ಅಕ್ಟೋಬರ್ 20 ರಂದು ಭಕ್ತರ ಕರೆಯ ಮೇರೆಗೆ ಮನೆಯನ್ನು ತೊರೆಯುತ್ತಿರುವುದಾಗಿ ಹೇಳಿದರು.

ಸತ್ಯಸಾಯಿಬಾಬಾ ತಮ್ಮ 25ನೇ ವರ್ಷದ ಹುಟ್ಟುಹಬ್ಬದ ದಿನದಂದು 1950ರಲ್ಲಿ ಪುಟ್ಟಪರ್ತಿಯಲ್ಲಿ 'ಪ್ರಶಾಂತಿ ನಿಲಯಂ' ಆಶ್ರಮ ಸ್ಥಾಪಿಸಿದರು. ಇಂದು ಆ ಆಶ್ರಮ ಜಗತ್ತಿನಾದ್ಯಂತ ಜ್ಞಾನ ದೇಗುಲವಾಗಿ ಪರಿವರ್ತನೆಗೊಂಡಿದೆ.ದೇಶ ವಿದೇಶಗಳಲ್ಲಿರುವ ಲಕ್ಷಾಂತರ ಭಕ್ತರು ಬಾಬಾ ಅವರ ದರ್ಶನಕ್ಕಾಗಿ ತಮ್ಮ ತನು, ಮನ,ಧನವನ್ನು ಅರ್ಪಿಸಿದ್ದಾರೆ.
ಇವನ್ನೂ ಓದಿ