ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಂಡೋಸಲ್ಫಾನ್‌ ನಿಷೇಧಕ್ಕಾಗಿ ಕೇರಳ ಮುಖ್ಯಮಂತ್ರಿ ನಿರಶನ (Endosulfan Row | V S Achuthanandan | Fast | Kerala)
ರಾಷ್ಟ್ರಾದ್ಯಂತ ಎಂಡೋಸಲ್ಫಾನ್‌ ಕೀಟನಾಶಕ ನಿಷೇಧಿಸುವಂತೆ ಒತ್ತಾಯಿಸಿ ಕೇರಳ ಮುಖ್ಯಮಂತ್ರಿ ವಿ.ಎಸ್‌.ಅಚ್ಯುತಾನಂದನ್‌, ರಾಜಕೀಯ ಮುಖಂಡರು ಹಾಗೂ ನಾಗರಿಕ ಹಕ್ಕು ಹೋರಾಟಗಾರರೊಂದಿಗೆ ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಎಂಡೋಸಲ್ಫಾನ್‌ ನಿಷೇಧ ದಿನಾಚರಣೆ ನಡೆದ ಅಂಗವಾಗಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ.

ಜಿನೇವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಕೀಟನಾಶಕಗಳ ಬಳಕೆಯಿಂದ ವಾತಾವರಣದ ಮೇಲಾಗುತ್ತಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಎಂಡೋಸಲ್ಫಾನ್‌ ನಿಷೇಧಕ್ಕೆ ನಿರ್ಣಯ ಕೈಗೊಳ್ಳಲಾಗಿದ್ದು, ಇದನ್ನು ಕೇಂದ್ರ ಸರಕಾರ ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಚ್ಯುತಾನಂದನ್‌, ಎಂಡೋಸಲ್ಫಾನ್‌ನಿಂದ ದುಷ್ಪರಿಣಾಮ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಕೀಟನಾಶಕ ನಿಷೇಧಿಸುವಂತೆ ಒತ್ತಾಯಿಸಿದರೂ ಕೇಂದ್ರ ಸರಕಾರ ಹಾಗೂ ಪ್ರಧಾನಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಆಪಾದಿಸಿದರು. ಎಂಡೋಸಲ್ಫಾನ್‌ ಸಾರ್ವಜನಿಕರಿಗೆ ಸವಾಲಾಗಿದ್ದು, ನಿಷೇಧ ಅತ್ಯಗತ್ಯ ಎಂದರು.

ಎಂಡೋಸಲ್ಪಾನ್‌ ವಿಷಪೂರಿತವಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರದ ನೇತೃತ್ವದಲ್ಲಿ ರಚಿಸಲಾಗಿದ್ದ ತಜ್ಞರ ತಂಡ ವರದಿ ನೀಡಿದ್ದರೂ ಈ ಬಗ್ಗೆ ಪ್ರಧಾನಿ ಸಹೋದ್ಯೋಗಿಗಳು ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅಚ್ಯುತಾನಂದನ್‌ ಆಪಾದಿಸಿದರು.

ಸಚಿವರಾದ ಎಂ.ಎ.ಬೇಬಿ, ಸಿ.ದಿನಕರನ್‌, ಕವಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸುಗತ ಕುಮಾರಿ, ಸಿಪಿಐ ಮುಖಂಡ ಸಿ.ಕೆ.ಚಂದ್ರಪ್ಪನ್‌, ಎಲ್‌ಡಿಎಫ್‌ ಸಂಚಾಲಕ ವೈಕ್ಕಂ ವಿಶ್ವನ್‌, ಬಿಜೆಪಿ ಮುಖಂಡ ಓ.ರಾಜಗೋಪಾಲ್‌ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಎಂಡೋಸಲ್ಫಾನ್‌ ಬಳಕೆಯಿಂದ ಪ್ರತಿಕೂಲ ಪರಿಣಾಮ ಎದುರಿಸಿದ ಕಾಸರಗೋಡು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸಹ ಸಚಿವರ ನೇತೃತ್ವದಲ್ಲಿ ಎಂಡೋಸಲ್ಫಾನ್‌ ನಿಷೇಧಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಕೇರಳದ ಕಾಸರಗೋಡು ಜಿಲ್ಲೆಯ ಗೋಡಂಬಿ ತೋಟಗಳಲ್ಲಿ ಎಂಡೋಸಲ್ಪಾನ್‌ ಬಳಕೆಯಿಂದಾಗಿ 500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ 2005ರಲ್ಲಿ ಈ ಕೀಟನಾಶಕವನ್ನು ಕೇರಳ ಸರಕಾರ ನಿಷೇಧಿಸಿತ್ತು.

ಎಂಡೋಸಲ್ಫಾನ್‌ನಿಂದ ಆಗಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ದೇಶಾದ್ಯಂತ ಇದರ ನಿಷೇಧಕ್ಕೆ ಕೇರಳ ಕೇಂದ್ರಕ್ಕೆ ಒತ್ತಾಯಿಸಿದೆ. ಕೀಟನಾಶಕದಿಂದಾಗಿ ದುಷ್ಪರಿಣಾಮ ಎದುರಿಸುತ್ತಿರುವವರಿಗೆ ಪುನರ್ವಸತಿಗೆ ಪ್ಯಾಕೇಜ್‌ ಕಲ್ಪಿಸಲು ನೆರವು ನೀಡುವಂತೆ ಆಗ್ರಹಿಸಿದೆ.

ಎಂಡೋಸಲ್ಫಾನ್‌ ನಿಷೇಧಕ್ಕೆ ಆಗ್ರಹಿಸಿ ಕೇರಳದ ಸರ್ವಪಕ್ಷ ನಿಯೋಗ ಪ್ರಧಾನಿ ಮನಮೋಹನ ಸಿಂಗ್‌ ಅವರನ್ನು ಕಳೆದ ವಾರ ಭೇಟಿ ಮಾಡಿತ್ತು.

ಕಾಂಗ್ರೆ‌ಸ್‌ ಆಕ್ಷೇಪ ...
ಈ ಮಧ್ಯೆ, ಉಪವಾಸ ಸತ್ಯಾಗ್ರಹದಲ್ಲಿ ತಮ್ಮನ್ನು ಹೊರಗಿಟ್ಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಕಾಂಗ್ರೆ‌ಸ್‌ ನೇತೃತ್ವದ ಯುಡಿಎಫ್‌, ಬಿಜೆಪಿಯೊಂದಿಗೆ ಸೇರಿ ಉಪವಾಸ ನಡೆಸುತ್ತಿರುವ ಮುಖ್ಯಮಂತ್ರಿ ಈ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದೆ.

ಕರ್ನಾಟಕದಲ್ಲೂ ಎಂಡೋಸಲ್ಫಾನ್‌ ತಾತ್ಕಾಲಿಕವಾಗಿ ನಿಷೇಧಿಸಿದ್ದು, ರಾಷ್ಟ್ರಾದ್ಯಂತ ಕೀಟನಾಶಕವನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದರಲ್ಲದೇ ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ಅವರು ಎಂಡೋಸಲ್ಫಾನ್‌ ಕಂಪನಿಗಳ ಪರವಾಗಿದ್ದಾರೆ ಎಂದು ಆಪಾದಿಸಿದ್ದರು.
ಇವನ್ನೂ ಓದಿ