ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾಗೋಸ್ಕರ ಪ್ರಾರ್ಥಿಸದಿರಿ: ಸಚಿನ್‌ಗೆ ತಸ್ಲೀಮಾ (Taslima Nasreen | Sachin Tendulkar | Sathya Sai Baba | Advise)
ಸಾಯಿಬಾಬಾ ಅವರಿಗೋಸ್ಕರ ಪ್ರಾರ್ಥನೆ ಮಾಡದಿರುವಂತೆ ಖ್ಯಾತ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅವರಿಗೆ ಬಾಂಗ್ಲಾ ಮೂಲದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್‌ ಸಲಹೆ ನೀಡಿದ್ದಾರೆ. ಸಾಯಿ ಬಾಬಾ ಅವರು ತಮ್ಮ ಜನ್ಮದಿನದಂದೇ ಮೃತಪಟ್ಟಿದ್ದರಿಂದ ಬಾಬಾ ಭಕ್ತರಾದ ಸಚಿನ್‌ ಜನ್ಮದಿನ ಆಚರಿಸಿಕೊಂಡಿರಲಿಲ್ಲ.

ವಿವಾದಾತ್ಮಕ ಹೇಳಿಕೆಯ ಮೂಲಕವೇ ಖ್ಯಾತರಾಗಿರುವ ತಸ್ಲೀಮಾ, ಸಾಯಿಬಾಬಾ ಅವರಿಗೆ 86 ವರ್ಷ ವಯಸ್ಸಾಗಿದ್ದು, ಮೃತಪಟ್ಟಿದ್ದಾರೆ. ವಯಸ್ಸಾದವರು ಸತ್ತರೆ ಯಾರೇಕೆ ದುಃಖಿಸಬೇಕು? ಬಾಬಾ ಅವರಿಗಾಗಿ ಸಚಿನ್‌ ಪ್ರಾರ್ಥಿಸಿದ್ದರಿಂದ ತಮಗೆ ಖೇದವಾಗಿದೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಬಾಬಾ ಅವರು 2022ರಲ್ಲಿ ಸಾಯುವುದಾಗಿ ಹೇಳಿಕೊಂಡಿದ್ದರು. ಆದರೆ ಇಷ್ಟುಬೇಗ ಏಕೆ ನಿಧನರಾದರು ಎಂಬುದೇ ಮುಂತಾಗಿ ಟ್ವಿಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಾಯಿ ಬಾಬಾ ಅವರನ್ನು ವ್ಯಂಗ್ಯ ಮಾಡುವ ಟ್ವೀಟ್‌ಗಳನ್ನು ಭಾನುವಾರ ತಸ್ಲೀಮಾ ರೀಟ್ವೀಟ್‌ ಮಾಡುತ್ತಿದ್ದರು.

ಬೆರಳ ಸಂದಿಯಲ್ಲಿ ಅಡಗಿಸಿಟ್ಟಿರುತ್ತಿದ್ದ ಬೂದಿಯ ಕಲ್ಲನ್ನು ಪುಡಿಮಾಡಿ ಅದನ್ನು ಭಸ್ಮವೆಂದು ಶೂನ್ಯದಿಂದ ಸೃಷ್ಟಿಸಿದಂತೆ ಮಾಡಿ ಭಕ್ತರಿಗೆ ನೀಡಲು ಇನ್ಯಾರೂ ಪ್ರಯತ್ನಿಸಲಾರರು ಎನ್ನುತ್ತದೆ ತಸ್ಲೀಮಾ ಅವರ ಇನ್ನೊಂದು ಟ್ವೀಟ್‌.

ಬಾಬಾ ಅವರು ಒಬ್ಬ ಮೋಸಗಾರ ಹಾಗೂ ಕಣ್ಕಟ್ಟು ಮಾಡುವವರಾಗಿದ್ದು, ಬೂದಿ ಸೃಷ್ಟಿಸುವ ಬಾಬಾ ಅವರ ಕೈಯಿಂದ ರಸಗುಲ್ಲಾ ಹಾಗೂ ಕುಂಬಳಕಾಯಿ ಏಕೆ ಬರುತ್ತಿರಲಿಲ್ಲ ಎಂದು ಪ್ರಶ್ನಿಸಿರುವ ತಸ್ಲಿಮಾ, ಸುಮಾರು ಐದಾರು ವರ್ಷದ ಮಗುವಿಗೆ ಕಣ್ಕಟ್ಟಿನ ತರಬೇತಿ ನೀಡಿದರೆ ಮತ್ತೊಂದು ಬಾಬಾನನ್ನು ಸೃಷ್ಟಿಸಬಹುದು ಎಂದು ಕುಟುಕಿದ್ದಾರೆ. ಉತ್ತಮ ಆಟಗಾರರು ಮುಕ್ತವಾಗಿ ಚಿಂತಿಸುವುದಿಲ್ಲ ಎಂದು ಸಚಿನ್‌ ಅವರನ್ನು ಪರೋಕ್ಷವಾಗಿ ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.

ಇಸ್ಲಾಂ ಮೂಲಭೂತವಾದವನ್ನು ತಮ್ಮ ಕೃತಿಯಲ್ಲಿ ಟೀಕಿಸಿದ್ದಕ್ಕಾಗಿ ತಸ್ಲೀಮಾ ನಸ್ರೀನ್‌ ಜೀವ ಬೆದರಿಕೆ ಎದುರಿಸುತ್ತಿದ್ದು,1994ರಲ್ಲಿ ಬಾಂಗ್ಲಾದೇಶ ತೊರೆದಿದ್ದು, ಹಲವಾರು ದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಇವನ್ನೂ ಓದಿ