ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ಸಹಾಯಕ ಮಂಗ್ಳೂರಿನ ಸತ್ಯಜಿತ್ ಮೂಲೆಗುಂಪು? (Sathya Sai Baba Death Row | Satyajit | Sai Central Trust)
ಪುಟ್ಟಪರ್ತಿ ಸತ್ಯ ಸಾಯಿ ಬಾಬಾ ಅವರ ಸಾವಿನ ಘೋಷಣೆ ಮಾಡಲಾದ ಏಪ್ರಿಲ್ 24ರ ಮೊದಲೇ ಅವರು ಸಾವನ್ನಪ್ಪಿದ್ದರೇ ಎಂಬ ಶಂಕೆಗಳ ನಡುವೆಯೇ, ಬಾಬಾ ಅವರ ಕೊನೆಗಾಲದಲ್ಲಿ ಅವರೊಂದಿಗಿದ್ದ ಮತ್ತು ಅವರಿಗೆ ಆಪ್ತರಾಗಿದ್ದ ಮಂಗಳೂರು ಮೂಲದವರಾದ ಸತ್ಯಜಿತ್ ಅವರನ್ನು ಮೂಲೆಗುಂಪು ಮಾಡುವ ಹುನ್ನಾರವೊಂದಕ್ಕೆ ಚಾಲನೆ ದೊರೆತಿದೆ. ಇದನ್ನು ಗುರುವಾರದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳು ಕೂಡ ಬಹುತೇಕ ದೃಢಪಡಿಸಿದ್ದಾರೆ.

ಸಾಯಿ ಸೆಂಟ್ರಲ್ ಟ್ರಸ್ಟ್‌ನ 8 ಮಂದಿ ಟ್ರಸ್ಟಿಗಳು ಗುರುವಾರ ಪುಟ್ಟಪರ್ತಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಸತ್ಯಜಿತ್ ಅವರನ್ನು ಸಾಯಿ ಬಾಬಾ ಅವರೇ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಂಡಿದ್ದಾರೆ. ಅವರಿಗೆ ಯಾವುದೇ ವಿಶೇಷ ಸ್ಥಾನಮಾನವೇನೂ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

ಎಲ್ಲವೂ ಆಸ್ತಿಗಾಗಿ...
ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್‌ನ ಸದಸ್ಯರಲ್ಲಿಯೂ ಭಿನ್ನಾಭಿಪ್ರಾಯಗಳಿದ್ದು, ಸತ್ಯ ಸಾಯಿ ಬಾಬಾ ಅವರ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆತನ ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ತತ್ಪರರಾಗಿದ್ದರೆ, ಅತ್ತ ಆಂಧ್ರ ಪ್ರದೇಶದ ಕಾಂಗ್ರೆಸ್ ಸರಕಾರವು ಕೂಡ ಟ್ರಸ್ಟ್ ಕೈವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಕಣ್ಣು ನೆಟ್ಟಿದೆ.

ಸಾಯಿ ಬಾಬಾ ಅವರ ಅಣ್ಣನ ಮಗ ಮತ್ತು ಟ್ರಸ್ಟಿಗಳಲ್ಲೊಬ್ಬರಾಗಿರುವ ರತ್ನಾಕರ್ ಮೂಲತಃ ಕಾಂಗ್ರೆಸಿಗ. ಅವರನ್ನು ಟ್ರಸ್ಟ್‌ನ ಅಧ್ಯಕ್ಷ ಪಟ್ಟಕ್ಕೇರಿಸುವ ಪ್ರಯತ್ನಗಳೂ ಒಂದೆಡೆಯಿಂದ ನಡೆಯುತ್ತಿದ್ದರೆ, ಬಾಬಾ ಅವರಿಗೆ ಅತ್ಯಂತ ಆಪ್ತರಾಗಿದ್ದ ಸತ್ಯಜಿತ್‌ರನ್ನು ಬಾಬಾ ಆಸ್ತಿಯಿಂದ ದೂರವಿಡುವ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಮಂಗಳೂರಿನ ಕುದ್ರೋಳಿಯವರಾದ ಸತ್ಯಜಿತ್ ಅವರ ಮೂಲ ಹೆಸರು ಯತೀಶ್. ಬಾಬಾ ಅವರಿಂದಲೇ ಸತ್ಯಜಿತ್ ಎಂಬ ನಾಮಕರಣಗೊಂಡಿದ್ದ ಅವರು ಹದಿನೈದು ವರ್ಷಗಳಿಂದಲೂ ಬಾಬಾ ಸೇವೆ ಮಾಡುತ್ತಿದ್ದರು. ಪುಟ್ಟಪರ್ತಿಯ ಕಾಲೇಜಿನಲ್ಲೇ ಓದಿ ಎಂಎಸ್‌ಸಿ ಪದವೀಧರ ಮತ್ತು ಎಂಬಿಎ ಚಿನ್ನದ ಪದಕ ವಿಜೇತರು ಕೂಡ. ಬಾಬಾ ಜತೆಗಿನ ಅವರ ಅನ್ಯೋನ್ಯತೆ ಎಷ್ಟು ಪ್ರಬಲವಾಗಿತ್ತೆಂದರೆ, ಬಾಬಾ ನಂತರ ಅವರೇ ಉತ್ತರಾಧಿಕಾರಿ ಎಂಬ ಮಾತುಕತೆಗಳೂ ಅದಾಗಲೇ ಕೇಳಿಬರತೊಡಗಿದ್ದವು.

ಆದರೆ ಬಾಬಾ ನಿಧನರಾಗುತ್ತಿದ್ದಂತೆಯೇ ಅವರಿಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿದವು. ಮಾತ್ರವಲ್ಲ, ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳಬೇಡಿ, ಅಂತ್ಯಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಡಿ ಎಂಬಿತ್ಯಾದಿ ನಿರ್ಬಂಧನೆಗಳು, ಸೂಚನೆಗಳು ಸರಕಾರದಿಂದಲೇ ದೊರೆಯತೊಡಗಿದವು.

ಮೊದಲೇ ಸಾವನ್ನಪ್ಪಿದ್ದರೇ ಬಾಬಾ?
ಸತ್ಯ ಸಾಯಿ ಬಾಬಾ ಅವರಿಗೆ ಕೊನೆಗಾಲದಲ್ಲಿ ಔಷಧಿಗಳನ್ನು ಸತ್ಯಜಿತ್ ಅವರೇ ನೀಡುತ್ತಿದ್ದರು ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ. ಆದರೆ, ಮಾರ್ಚ್ 28ರಂದು ಸತ್ಯ ಸಾಯಿ ಆಸ್ಪತ್ರೆಯ ಡಾ.ಸಫಾಯಾ ಅವರು ಬಾಬಾ ಚಿಕಿತ್ಸೆಯ ಹೊಣೆ ವಹಿಸಿಕೊಳ್ಳುವ ಮೊದಲು, ಯಾವ ರೀತಿ ಚಿಕಿತ್ಸೆ ನೀಡಲಾಯಿತು ಎಂಬುದರ ಕುರಿತು ವಿವರಗಳು ಲಭ್ಯವಾಗುತ್ತಿಲ್ಲ ಎಂಬ ವರದಿಯೂ ಇದೆ. ಈ ಸಂದರ್ಭ ಜತೆಗಿದ್ದ ಸತ್ಯಜಿತ್ ಮತ್ತು ಇಬ್ಬರು ವೈದ್ಯರಾದ ಡಾ.ಅಯ್ಯರ್ ಮತ್ತು ಡಾ.ಕೃಷ್ಣದಾಸ್ ಅವರಿಗೂ ಜೀವಬೆದರಿಕೆಗಳು ಬಂದಿವೆ. ಬಾಬಾ ಅವರು ಆಸ್ಪತ್ರೆಗೆ ಸೇರಿದಂದಿನಿಂದ ಯಾವತ್ತೂ ಕೂಡ ಬಾಬಾ ಹೇಗಿದ್ದಾರೆ ಎಂಬುದನ್ನು ತೋರಿಸಬೇಕು ಎಂದು ಆಗ್ರಹಿಸಿ ಭಕ್ತಾದಿಗಳು ಆಸ್ಪತ್ರೆ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದು ಇಲ್ಲಿ ಸ್ಮರಣಾರ್ಹ.

ಆಂಧ್ರ ಸರಕಾರದ ಸಚಿವೆ ಗೀತಾ ರೆಡ್ಡಿ ಮತ್ತಿತರರು ಆಸ್ಪತ್ರೆಯಲ್ಲೇ ಮೊಕ್ಕಾಂ ಹೂಡಿದ್ದುದೂ ಇಲ್ಲಿ ಗಮನಿಸಬೇಕಾದ ಅಂಶ. ಟ್ರಸ್ಟಿಗಳು ಯಾರು ಕೂಡ ಬಾಯಿ ಬಿಡುತ್ತಿರಲಿಲ್ಲ. ಡಾ.ಸಫಾಯಾ ಮಾತ್ರ ಆಗಾಗ್ಗೆ ಬಾಬಾ ಆರೋಗ್ಯದ ಬುಲೆಟಿನ್ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದರು. ಶವ ಪೆಟ್ಟಿಗೆಯನ್ನೂ ಮೊದಲೇ ಆರ್ಡರ್ ಮಾಡಲಾಗಿತ್ತೆಂಬ ಆರೋಪಗಳನ್ನೂ ಇದರೊಂದಿಗೆ ಹೋಲಿಸಿ ನೋಡಿದರೆ, ಬಾಬಾ ಸಾವು ಮೊದಲೇ ನಡೆದಿತ್ತು. ಆಸ್ತಿ ಪಾಸ್ತಿ ಹಂಚಿಕೆ ಕುರಿತು ಟ್ರಸ್ಟ್ ಸದಸ್ಯರು, ಸರಕಾರದ ಪ್ರತಿನಿಧಿಗಳ ನಡುವೆ ಮಾತುಕತೆ, ಒಡಂಬಡಿಕೆಗಳು ನಡೆದ ಬಳಿಕವಷ್ಟೇ ಬಾಬಾ ಸಾವು ಘೋಷಿಸಲಾಯಿತು ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದರೊಂದಿಗೆ, ಸತ್ಯ ಸಾಯಿ ಬಾಬಾ ಅವರು ಸಾವಿನಲ್ಲಿ ನಿಗೂಢತೆಯನ್ನೇ ಉಳಿಸಿ ಹೋಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಇವನ್ನೂ ಓದಿ