ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ಚಿಕಿತ್ಸೆಯಲ್ಲಿ ಪ್ರಮಾದ, ಸತ್ಯಜಿತ್‌ಗೆ ಪಟ್ಟ ಇಲ್ಲ: ಟ್ರಸ್ಟ್‌ (Satya Sai Baba | Treatment | Satyajit | Trust | Coffin)
ದೇವ ಮಾನವ ಸತ್ಯ ಸಾಯಿ ಬಾಬಾ ಅವರಿಗೆ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ಪ್ರಮಾದವಾಗಿಲ್ಲ ಎಂದು ಹೇಳಿರುವ ಸತ್ಯಸಾಯಿ ಸೆಂಟ್ರಲ್‌ ಟ್ರಸ್ಟ್‌, ಬಾಬಾ ಅವರ ನಿಧನಕ್ಕೆ ಮೊದಲೇ ಶವಪೆಟ್ಟಿಗೆ ತರಿಸಿಲ್ಲ ಎಂದು ಟ್ರಸ್ಟ್‌ ಸ್ಪಷ್ಟಪಡಿಸಿದೆ.

1972ರಲ್ಲಿ ಟ್ರಸ್ಟ್‌ ರಚನೆಯಾದ ನಂತರ ಗುರುವಾರ ಟ್ರಸ್ಟ್‌ ಸದಸ್ಯರು ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭ ಮಾತನಾಡಿದ ಟ್ರಸ್ಟ್‌ ಪದಾಧಿಕಾರಿ ವೇಣು ಶ್ರೀನಿವಾಸನ್‌, ಮಾ.28ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವವರೆಗೂ ಬಾಬಾ ಅವರ ದೈನಂದಿನ ಚಟುವಟಿಕೆ ಸಹಜವಾಗಿತ್ತು. ಬಾಬಾ ಅವರ ಸಲಹೆಯ ಮೇರೆಗೆ ಚಿಕಿತ್ಸೆ ನಡೆಯುತ್ತಿತ್ತು ಎಂದರು. ಬಾಬಾ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯನ್ನು ತೋರಿಸಬೇಕೆಂಬ ಭಕ್ತಾದಿಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ನೇರ ಪ್ರಸಾರ ಸಾಧುವಲ್ಲ ಎಂದು ಹೇಳಿದರು.

ಸಾವಿನ ಮೊದಲು ಶವಪೆಟ್ಟಿಗೆ ತರಿಸಿಲ್ಲ...
ಬಾಬಾ ಅವರ ನಿಧನಕ್ಕೆ ಮೊದಲೇ ಶವಪೆಟ್ಟಿಗೆ ತರಿಸಲಾಗಿದೆ ಎಂಬ ಆಪಾದನೆಯಲ್ಲಿ ಹುರುಳಿಲ್ಲ, ಬಾಬಾ ನಿಧನದ ನಂತರವೇ ಶವ ಪೆಟ್ಟಿಗೆ ಬಂದಿದೆ ಎಂದು ಪ್ರತಿಪಾದಿಸಿದ ಅವರು, ಅದನ್ನು ಬಾಬಾ ಅವರ ಭಕ್ತರೊಬ್ಬರು ನೀಡಿದ್ದಾರೆ ಎಂದರು.

ಬಾಬಾ ಹೆಸರಲ್ಲಿ ಆಸ್ತಿ ಇಲ್ಲ ...
ಬಾಬಾ ಅವರ ಹೆಸರಿನಲ್ಲಿ ಯಾವುದೇ ಆಸ್ತಿ ಹಾಗೂ ಬ್ಯಾಂಕ್‌ ಖಾತೆ ಇರಲಿಲ್ಲ. ಹೀಗಾಗಿ ಉಯಿಲಿನ ಪ್ರಶ್ನೆಯೇ ಬರುವುದಿಲ್ಲ. ಚರಾಸ್ತಿ, ಎಲ್ಲ ಸ್ಥಿರಾಸ್ತಿಗಳೂ ಟ್ರಸ್ಟ್‌ ಹೆಸರಿನಲ್ಲೇ ಇವೆ, ಬಾಬಾ ಅವರ ಸಮಾಜ ಕಲ್ಯಾಣ ಕಾರ್ಯಕ್ರಮಗಳೆಲ್ಲವನ್ನೂ ಟ್ರಸ್ಟ್‌ ಮುಂದುವರಿಸಲಿದೆ ಎಂದವರು ಹೇಳಿದರು.

ಸತ್ಯಜಿತ್‌ ಅಲ್ಲ, ಟ್ರಸ್ಟ್‌ ಸದಸ್ಯರಿಗೇ ಅಧ್ಯಕ್ಷತೆ...
ಟ್ರಸ್ಟ್‌ನ ಸದಸ್ಯರಲ್ಲೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದು, ಚೆಕ್‌ಗೆ ಸಹಿ ಹಾಕುವ ಅಧಿಕಾರ ಯಾರಿಗೆ ನೀಡಬೇಕು ಎಂಬುದರ ಕುರಿತು ಟ್ರಸ್ಟ್‌ನ 8 ಜನ ಸದಸ್ಯರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಸಾಯಿ ಬಾಬಾ ಅವರೇ ಟ್ರಸ್ಟ್‌ ಸದಸ್ಯರನ್ನು ನೇಮಿಸಿದ್ದರು. ಸತ್ಯಜಿತ್‌ ಅವರನ್ನು ಆಪ್ತ ಸಹಾಯಕರನ್ನಾಗಿಯೂ ಅವರೇ ನೇಮಿಸಿಕೊಂಡಿದ್ದರಾದರೂ, ಟ್ರಸ್ಟ್‌ಗೆ ಸೇರಿಸಿಕೊಂಡಿರಲಿಲ್ಲ ಎಂದ ಅವರು, ಟ್ರಸ್ಟ್‌ನ ಸದಸ್ಯರಲ್ಲೊಬ್ಬರೇ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಿದರು.

ಟ್ರಸ್ಟ್‌ನ ಎಲ್ಲ ವ್ಯವಹಾರಗಳೂ ಪಾರದರ್ಶಕವಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಟ್ರಸ್ಟ್‌ ಹೆಸರಿಗೆ ಮಸಿ ಬಳಿಯಲು ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬಾಬಾ ನಿಧನರಾಗಿದ್ದರೂ, ಅವರ ಆಶಯದಂತೆ ಸಮಾಜ ಸೇವಾ ಕಾರ್ಯಗಳು ಮುಂದುವರಿಯುತ್ತವೆ. ಟ್ರಸ್ಟ್‌ನಲ್ಲಿ ಆಂಧ್ರಪ್ರದೇಶ ರಾಜ್ಯ ಸರಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಈ ಬಗ್ಗೆ ನಾವು ಕೂಡಾ ಸರಕಾರದ ನೆರವನ್ನು ಕೇಳುವುದಿಲ್ಲ ಎಂದು ಟ್ರಸ್ಟ್‌ ಸದಸ್ಯರು ಹೇಳಿದರು.
ಇವನ್ನೂ ಓದಿ