ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜೀವಭಯ; ಪಾತಕಿ ದಾವೂದ್ ಕರಾಚಿಯಿಂದ ಪರಾರಿ (Pakistan | Dawood Ibrahim | Chhota Shakeel | Karachi | 1993 Mumbai attacks)
PTI
ಒಸಾಮಾ ಬಿನ್ ಲಾಡೆನ್ ಹತ್ಯೆ ನಂತರ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಸೇರಿದಂತೆ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಜಾಗತಿಕ ಒತ್ತಡ ಪಾಕಿಸ್ತಾನದ ಮೇಲೆ ಹೆಚ್ಚುತ್ತಿರುವ ನಡುವೆಯೇ ತನ್ನ ಜೀವಕ್ಕೂ ಕುತ್ತು ಬರಬಹುದೆಂಬ ಭೀತಿಯಿಂದ ಭೂಗತಪಾತಕಿ ದಾವೂದ್ ಇಬ್ರಾಹಿಂ ತನ್ನ ನಿಕಟವರ್ತಿ ಛೋಟಾ ಶಕೀಲ ಜತೆ ಕರಾಚಿ ತೊರೆದು ಪರಾರಿಯಾಗಿರುವುದಾಗಿ ಮಾಧ್ಯಮವೊಂದು ವರತಿ ಮಾಡಿದೆ.

ಮೇ 1ರಂದು ರಾತ್ರಿ ಅಮೆರಿಕ ವಿಶೇಷ ಸೇನಾಪಡೆ ಕಾರ್ಯಾಚರಣೆ ನಡೆಸಿ ಒಸಾಮಾ ಬಿನ್ ಲಾಡೆನ್ ಹತ್ಯೆಗೈದ ನಂತರ ಭೀತಿಗೊಳಗಾಗಿರುವ ದಾವೂದ್ ಹಾಗೂ ನಿಕಟವರ್ತಿ ಛೋಟಾ ಶಕೀಲ್ ಐಎಸ್ಐ ನಿರ್ದೇಶನದ ಮೇರೆಗೆ ಕರಾಚಿ ತೊರೆದು ಸೌದಿ ಅರೇಬಿಯಾಕ್ಕೆ ಕಾಲ್ಕಿತ್ತಿರುವುದಾಗಿ ವರದಿ ತಿಳಿಸಿದೆ.

ದಾವೂದ್ ಮತ್ತು ಛೋಟಾ ಶಕೀಲ್ ಕರಾಚಿಯಿಂದ ಪರಾರಿಯಾಗಿದ್ದರೂ ಕೂಡ ದಾವೂದ್ ಕುಟುಂಬ ಕರಾಚಿಯಲ್ಲಿಯೇ ಠಿಕಾಣಿ ಹೂಡಿರುವ ಬಗ್ಗೆ ಭಾರತದ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದೆ.

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿಯಾಗಿರುವ ದಾವೂದ್ ಇಬ್ರಾಹಿಂನನ್ನು ಹಸ್ತಾಂತರಿಸುವಂತೆ ಭಾರತ ಹಲವಾರು ಬಾರಿ ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿತ್ತು. ಆದರೆ ಹಾರಿಕೆಯ ಸಮಜಾಯಿಷಿ, ಪ್ರತಿಕ್ರಿಯೆ ನೀಡುವ ಮೂಲಕ ದಾವೂದ್‌ಗೆ ಪರೋಕ್ಷವಾಗಿ ಬೆಂಬಲ ನೀಡಿತ್ತು.

ಇದೀಗ ಅಲ್ ಖಾಯಿದಾ ವರಿಷ್ಠ ಲಾಡೆನ್‌ನನ್ನು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕದ ಪಡೆಗಳು ಹತ್ಯೆಗೈದ ನಂತರ, ಮುಂಬೈ ದಾಳಿಕೋರರು ಹಾಗೂ ಸರಣಿ ಬಾಂಬ್ ಸ್ಫೋಟದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚತೊಡಗಿದೆ.

ಆ ನಿಟ್ಟಿನಲ್ಲಿ ಇಂಟರ್‌ಪೋಲ್ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ದಾವೂದ್ ಹೆಸರು ಇದ್ದು, ಕರಾಚಿ ಮನೆ ತೊರೆದು ರಹಸ್ಯ ಸ್ಥಳಕ್ಕೆ ತೆರಳುವಂತೆ ಐಎಸ್ಐ ಸೂಚಿಸಿದೆಯಂತೆ. ಅಷ್ಟೇ ಅಲ್ಲ ಮೊಬೈಲ್ ಬಳಸದಂತೆಯೂ ತಾಕೀತು ಮಾಡಿದೆ ಎನ್ನಲಾಗಿದೆ.
ಮುಂಬೈ ಸರಣಿ ಸ್ಫೋಟದ ರೂವಾರಿ, ಭೂಗತಲೋಕದ ಡಾನ್ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಒಪ್ಪಿಸುವಂತೆ ಪಾಕಿಸ್ತಾನದ ಮೇಲೆ ಅಮೆರಿಕ ಮತ್ತು ಭಾರತ ಒತ್ತಡ ಹೇರುವ ಮುನ್ಸೂಚನೆ ಅರಿತು ದಾವೂದ್‌ ಮತ್ತು ಛೋಟಾ ಶಕೀಲ್‌ಗೆ ಕರಾಚಿ ತೊರೆಯುವಂತೆ ಹೇಳಿರುವುದಾಗಿ ವರದಿ ವಿವರಿಸಿದೆ.

ಭೂಗತಪಾತಕಿ ದಾವೂದ್ ಮತ್ತು ಛೋಟಾ ಶಕೀಲ್ ಪ್ರಯಾಣ ಮಾರ್ಗದ ಬಗ್ಗೆ ಭಾರತೀಯ ಗುಪ್ತಚರ ಇಲಾಖೆಗೂ ಸಂಪೂರ್ಣ ಮಾಹಿತಿ ಇರುವುದಾಗಿಯೂ ವರದಿ ತಿಳಿಸಿದೆ. ದಾವೂದ್ ಕರಾಚಿಯ ಎಕ್ಸ್‌ಪ್ರೆಸ್ ಹೈವೇಯ ಮೂಲಕವೇ ತನ್ನ ಅಂಗರಕ್ಷಕರೊಂದಿಗೆ ಬುಲೆಟ್ ಫ್ರೂಪ್ ಕಾರಿನಲ್ಲಿ ತೆರಳಿರುವುದಾಗಿ ಹೇಳಿದೆ. ಸುಮಾರು 15 ಗಂಟೆಗಳ ಪ್ರಯಾಣದ ನಂತರ ಕಾಬೂಲ್ ರಾವಾಶ್ ವಿಮಾನ ನಿಲ್ದಾಣ ತಲುಪಿದ ಡಾನ್ ಹಾಗೂ ಛೋಟಾ ಶಕೀಲ್ ಅಲ್ಲಿಂದ ಸೌದಿ ಅರೇಬಿಯಾಕ್ಕೆ ಹೋಗಿರುವುದಾಗಿ ಗುಪ್ತಚರ ಇಲಾಖೆ ಮೂಲವೊಂದು ತಿಳಿಸಿದೆ.
ಇವನ್ನೂ ಓದಿ