ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರದ್ವಾಜ್ ವರದಿಗೆ ಯುಪಿಎ ಮೌನವೇ ಮದ್ದು: ಸಿಎಂ ಸೇಫ್? (Karnataka Crisis | Governor's report | HR Bharadwaj | Yeddyurappa)
ರಾಜ್ಯಪಾಲರು ಕರ್ನಾಟಕದಲ್ಲಿ ಹಾಕಿರುವ ಬಾಂಬ್ ಈ ಬಾರಿಯೂ ಠುಸ್ ಆಗಲಿದೆ ಎಂಬ ಬಗೆಗೆ ಸುಳಿವು ದೊರಕಿದೆ. ರಾಷ್ಟ್ರಪತಿ ಆಳ್ವಿಕೆ ಹೇರುವ ಕುರಿತಾದ ರಾಜ್ಯಪಾಲರ ಶಿಫಾರಸನ್ನು ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರಕಾರವು ಈ ಬಾರಿಯೂ ತಿರಸ್ಕರಿಸುವ ಸಾಧ್ಯತೆಗಳಿಲ್ಲದಿದ್ದರೂ, ಅದರ ಬಗ್ಗೆ ಮೌನವಾಗಿರುವ ಮೂಲಕ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಗಳೇ ಹೆಚ್ಚು ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯಪಾಲರು ದೆಹಲಿಗೆ ಕಳುಹಿಸಿರುವ 'ವಿಶೇಷ ವರದಿ'ಯಲ್ಲಿನ ಕೆಲವೊಂದು ಸಾಂವಿಧಾನಿಕ ಸಮಸ್ಯೆಗಳ ಕುರಿತಾಗಿ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರಿಗೆ 'ಸಲಹೆ' ಕಳುಹಿಸಿದ್ದು, ಆ ಬಳಿಕ ರಾಷ್ಟ್ರಪತಿ ಭವನವು ರಾಜ್ಯಪಾಲರ ಶಿಫಾರಸುಳ್ಳ ಫೈಲನ್ನು ನಾರ್ತ್ ಬ್ಲಾಕ್‌ಗೆ ಮರಳಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ರಾಷ್ಟ್ರಪತಿಯವರು ರಾಜಭವನದಿಂದ ಮತ್ತಷ್ಟು ಸ್ಪಷ್ಟನೆ ಬಯಸಿದ್ದಾರೆಯೇ ಎಂಬ ಅಂಶ ಇನ್ನೂ ಸ್ಪಷ್ಟವಾಗಿಲ್ಲ.

ಈ ನಡುವೆ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಬೆಂಗಳೂರಿನಲ್ಲಿ ಒಂದೇ ವೇದಿಕೆಯಲ್ಲಿ ಪರಸ್ಪರ ಕೈ ಕುಲುಕುತ್ತಾ, ನಗುತ್ತಾ ಮಾತನಾಡುತ್ತಿದ್ದುದು ಕಂಡುಬಂದಿದ್ದು, ಮುಖ್ಯಮಂತ್ರಿಯನ್ನು ರಾಜ್ಯಪಾಲರು ಹಾಡಿ ಹೊಗಳಿದ್ದಾರೆ. ಅವರಿಗೆ ಭರ್ಜರಿ ಬಹುಮತವಿದೆ, ದಿನಕ್ಕೆ 16-17 ಗಂಟೆ ದುಡಿಯುತ್ತಾರೆ, ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದೆಲ್ಲಾ ಹೊಗಳಿರುವುದು ನೋಡಿದರೆ, ರಾಜ್ಯಪಾಲರು ತಣ್ಣಗಾದಂತೆ ಕಾಣಿಸುತ್ತಿದೆ. ಅಂತೆಯೇ ಮುಖ್ಯಮಂತ್ರಿ ಮತ್ತು ತಾವು ಒಳ್ಳೆಯ ಸ್ನೇಹಿತರು ಅಂತಲೂ ಹೇಳಿದ್ದಾರೆ. ಸಾಯಂಕಾಲ ಮುಖ್ಯಮಂತ್ರಿ ಮತ್ತು ಸಚಿವರ ನಿಯೋಗವೊಂದು ರಾಜಭವನಕ್ಕೆ ತೆರಳಿ, ಜೂ.2ರಿಂದ ವಿಧಾನಸಭಾ ಅಧಿವೇಶನ ಕರೆಯುವಂತೆ ಕೋರಿಕೆ ಸಲ್ಲಿಸಿದ್ದು, ಕೇಂದ್ರದಿಂದ ಸೂಚನೆ ಬಂದ ಬಳಿಕ ಈ ಪತ್ರವನ್ನು ಪರಿಗಣಿಸುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ.

ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ
ಭಾರದ್ವಾಜ್ ಶಿಫಾರಸಿನಂತೆ ಕ್ರಮ ಕೈಗೊಂಡರೆ, ಅದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂಬುದು ಗೃಹ ಸಚಿವಾಲಯದ ಅರಿವಿಗೆ ಬಂದಿದೆ, ಹೀಗಾಗಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದರ ಬಗ್ಗೆ ಉದಾಸೀನತೆ ತೋರಿದೆ.

ಸಂವಿಧಾನದ 356ನೇ ವಿಧಿ ಬಳಕೆಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಹಕ್ಕು ರಾಜಕೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿಗೆ (ಸಿಸಿಪಿಎ) ಇದೆ. ಈಗಾಗಲೇ ಸಿಸಿಪಿಎ, ಈ ವಿಷಯದ ಕುರಿತು ಚರ್ಚಿಸಿರುವುದರಿಂದ ಮತ್ತಷ್ಟು ಚರ್ಚೆಯ ಸಾಧ್ಯತೆ ಕಡಿಮೆ ಎಂದಿವೆ ಮೂಲಗಳು.

ಇದಕ್ಕೆ ಮತ್ತೊಂದು ಕಾರಣವೆಂದರೆ, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರದ ಮೇಲೆ ಬಿಜೆಪಿಯು ಒತ್ತಡವನ್ನು ತೀವ್ರಗೊಳಿಸಿದ್ದು. ಅವರನ್ನು ವಾಪಸ್ ಕರೆಸಿಕೊಂಡರೆ ಕೂಡ ಇದು ಕಾಂಗ್ರೆಸ್‌ಗೇ ಒಂದು ರೀತಿಯಲ್ಲಿ ಮುಜುಗರ ಉಂಟು ಮಾಡುವ ಸಂಗತಿ. ವರದಿಯನ್ನು ತಿರಸ್ಕರಿಸಿದರೆ, ತಾವೇ ನೇಮಿಸಿದ ರಾಜ್ಯಪಾಲರನ್ನು ಧಿಕ್ಕರಿಸಿದಂತಾಗುತ್ತದೆ. ಹೀಗಾಗಿ, ಸದ್ಯಕ್ಕೆ ಸುಮ್ಮನಿದ್ದುಬಿಡುವ ಮೂಲಕ ಮುಖವುಳಿಸಿಕೊಳ್ಳುವುದೇ ಸೂಕ್ತ ಎಂಬ ನಿರ್ಣಯಕ್ಕೆ ಬಂದಿದೆ ಎಂದು ಹೇಳಿವೆ ಮೂಲಗಳು. ಹೀಗಾಗಿಯೇ ರಾಜ್ಯಪಾಲರ ಶಿಫಾರಸಿನ ಬಗ್ಗೆ ಅದು ನಿರ್ಧಾರ ಕೈಗೊಳ್ಳಲು ಯಾವುದೇ ತರಾತುರಿ ತೋರದಿರುವುದು.

ಒಡೆದ ಮನೆ ಬಿಜೆಪಿಯನ್ನು ರಾಜ್ಯಪಾಲ ಒಗ್ಗೂಡಿಸಿದರೇ...
ಕಾಂಗ್ರೆಸ್‌ನ ಒಂದು ವರ್ಗಕ್ಕಂತೂ ರಾಜ್ಯಪಾಲರ ಮೇಲೆ ಆಕ್ರೋಶವಿದೆ. ಕಾರಣವೆಂದರೆ, ಒಡೆದ ಮನೆಯಾಗಿದ್ದ ಬಿಜೆಪಿಯನ್ನು ತಮ್ಮ ಕೃತ್ಯದ ಮೂಲಕ ಅವರು ಒಗ್ಗೂಡಿಸಿದ್ದು! ಇದೇ ವಿಷಯ ಮುಂದಿಟ್ಟು ಮುಖ್ಯಮಂತ್ರಿಯವರು ರಾಜ್ಯಪಾಲರನ್ನು ಅಭಿನಂದಿಸಿದ್ದರು. ಮತ್ತು ರಾಷ್ಟ್ರಪತಿಯೆದುರು ಕೂಡ ನಿಯೋಗ ಕೊಂಡೊಯ್ದು, ನಮಗೆ ಸ್ಪಷ್ಟ ಬಹುಮತವಿದೆ, ರಾಜ್ಯಪಾಲರು ಅಪ್ರಜಾಸತ್ತಾತ್ಮಕವಾಗಿ ನಡೆದುಕೊಂಡಿದ್ದಾರೆ ಎಂದು ತಮ್ಮ ಮನವಿಯಲ್ಲಿ ಹೇಳಿದ್ದರು.

ಹೀಗಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ಮೌನವೇ ಮೇಲೆಂದು ಸುಮ್ಮನುಳಿಯಲಿದೆ. ಯಾವುದೇ ಕ್ರಮಕ್ಕೆ ಮುಂದಾದರೂ ಕೂಡ ಅದು ರಾಜ್ಯದಲ್ಲಿ ಕಾಂಗ್ರೆಸ್‌ನ ಭವಿಷ್ಯಕ್ಕೆ ಮಾರಕವಾಗಲಿದೆ ಎಂಬುದು ಕಾಂಗ್ರೆಸ್ ಪಂಡಿತರ ಲೆಕ್ಕಾಚಾರ.

ಈ ನಡುವೆ, ರಾಜ್ಯಪಾಲರ ವರದಿಯ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನೇ ಕತ್ತಲಲ್ಲಿಡಲಾಗಿತ್ತೇ? ಎಂಬುದು ಉತ್ತರ ಸಿಗದ ಪ್ರಶ್ನೆ.

ರಾಜ್ಯಪಾಲ ವರದಿ ಬಗ್ಗೆ ಪ್ರಧಾನಿಯನ್ನು ಕತ್ತಲಲ್ಲಿಟ್ಟರೇ?
ಯಾಕೆಂದರೆ, ರಾಜ್ಯಪಾಲರು ಪ್ರಧಾನಿಯನ್ನು ಭೇಟಿ ಮಾಡಿದ್ದನ್ನು ಇದೊಂದು 'ಕೇವಲ ಸೌಹಾರ್ದಯುತ' ಭೇಟಿಯಾಗಿತ್ತು ಎಂದು ಪ್ರಧಾನಿ ಸಚಿವಾಲಯವು ಸ್ಪಷ್ಟನೆ ನೀಡಿತ್ತು. ಇಷ್ಟು ಮಾತ್ರವೇ ಆಗಿದ್ದರೆ ಪರವಾಗಿರಲಿಲ್ಲ, ತಮ್ಮನ್ನು ಭೇಟಿಯಾದ ಎನ್‌ಡಿಎ ನಿಯೋಗದ ನೇತೃತ್ವ ವಹಿಸಿದ್ದ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿಗೂ ಪ್ರಧಾನಿ ಹೇಳಿದ್ದು, 'ವರದಿಯಲ್ಲೇನಿದೆ ಎಂದು ತಾನಿನ್ನೂ ನೋಡಿಲ್ಲ!'

ಹಾಗಿದ್ದರೆ, ಸೋಮವಾರ ಬೆಳಿಗ್ಗೆಯಷ್ಟೇ ಸಂಪುಟ ಸಮಿತಿಯ ಸಭೆಯಲ್ಲಿಯೂ ರಾಜ್ಯಪಾಲರ ವರದಿಯ ಕುರಿತು ಚರ್ಚಿಸಲಾಗಿತ್ತು. ಸಂಜೆ ಆಡ್ವಾಣಿ ನಿಯೋಗ ಭೇಟಿ ಮಾಡಿದಾಗಲೂ ಪ್ರಧಾನಿಯ ಗಮನಕ್ಕೆ ಈ ವರದಿಯನ್ನು ತಂದಿರಲಿಲ್ಲವೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಅಂಶ.
ಇವನ್ನೂ ಓದಿ