ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿಲ್ಲಿಯಲ್ಲಿ ಅಖಾಡಕ್ಕಿಳಿದ ಗೌಡ್ರು: ಸಂಜೆ ಪ್ರಧಾನಿ ಭೇಟಿ (Karnataka Crisis | Devegowda | Left Front | Third Front | Yeddyurappa)
ಕರ್ನಾಟಕದ ಯಡಿಯೂರಪ್ಪ ಸರಕಾರ ಉರುಳಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ನಡುವೆ ಮಾತುಕತೆ ನಡೆದಿತ್ತು, ಇವೆಲ್ಲವೂ ಗೌಡರದೇ ತಂತ್ರಗಾರಿಕೆ ಎಂಬ ವರದಿಗೆ ಪುಷ್ಟಿ ದೊರೆತಿದ್ದು, ಗುರುವಾರ ಬೆಳಿಗ್ಗೆ ದೇವೇಗೌಡರು ಎಡಪಕ್ಷಗಳು, ತೃತೀಯ ರಂಗದ ಮುಖಂಡರೊಂದಿಗೆ ನವದೆಹಲಿಯ ತಮ್ಮ ನಿವಾಸದಲ್ಲಿ ಸಭೆ ನಡೆಸಿ ತಂತ್ರಗಾರಿಕೆ ರೂಪಿಸಿದ್ದು, ಸಂಜೆ ವೇಳೆಗೆ ಪ್ರಧಾನಮಂತ್ರಿಯನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

ಇದುವರೆಗೆ ತೆರೆಮರೆಯಲ್ಲಿಯೇ ಸಕ್ರಿಯರಾಗಿದ್ದ ದೇವೇಗೌಡರು ಇದೀಗ ಯಾವುದು ಕೂಡ ಫಲ ಕೊಡುತ್ತಿಲ್ಲ ಎಂಬುದು ನಿಧಾನವಾಗಿ ಅರಿವಾಗತೊಡಗಿದಾಗ ನೇರವಾಗಿಯೇ ಅಖಾಡಕ್ಕೆ ಧುಮುಕಿದ್ದಾರೆ. ನವದೆಹಲಿಯ ತಮ್ಮ ಸಫ್ದರ್‌ಜಂಗ್ ನಿವಾಸದಲ್ಲಿ ಎಡಪಕ್ಷಗಳಾದ ಸಿಪಿಐ, ಸಿಪಿಎಂ, ತೆಲುಗು ದೇಶಂ, ರಾಷ್ಟ್ರೀಯ ಲೋಕದಳ, ಫಾರ್ವರ್ಡ್ ಬ್ಲಾಕ್, ಮುಂತಾದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ಯುಪಿಎ ನಿರ್ಧಾರ ಕಾದು ನೋಡುತ್ತೇವೆ ಎಂದರು.

ಕರ್ನಾಟಕದಲ್ಲಿ ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸ್ಪೀಕರ್ ಬೋಪಯ್ಯ ಮೇಲೆ ಸುಪ್ರೀಂ ಕೋರ್ಟು ಕಿಡಿ ಕಾರಿದ್ದು, ಅವರಿಬ್ಬರೂ ರಾಜೀನಾಮೆ ನೀಡಬೇಕು ಮತ್ತು ರಾಜ್ಯಪಾಲರು ವಿಧಾನಸಭೆ ಅಮಾನತಿನಲ್ಲಿಡುವಂತೆ ಸಲ್ಲಿಸಿದ ಶಿಫಾರಸನ್ನು ಅಂಗೀಕರಿಸಬೇಕು ಎಂದು ಗುರುವಾರ ಸಂಜೆ ಪ್ರಧಾನ ಮಂತ್ರಿಯನ್ನು ಭೇಟಿಯಾಗಿ ಒತ್ತಾಯಿಸಲಿದ್ದಾರೆ.

ಸಭೆಯಲ್ಲಿ ಪುತ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಲೋಕದಳದ ಅಜಿತ್ ಸಿಂಗ್, ಎಡಪಕ್ಷಗಳ ಪ್ರಕಾಶ್ ಕಾರಟ್, ಸೀತಾರಾಮ ಯಚೂರಿ, ಡಿ.ರಾಜಾ, ದೇವವ್ರತ ಬಿಸ್ವಾಸ್ ಹಾಗೂ ಎ.ಬಿ.ಬರ್ಧಾನ್, ಟಿಡಿಪಿಯ ಚಂದ್ರಬಾಬು ನಾಯ್ಡು, ರಾಜ್ಯ ಸಂಸದ ಚೆಲುವರಾಯ ಸ್ವಾಮಿ ಮುಂತಾದವರಿದ್ದರು.

ರಾಜ್ಯಪಾಲರ ಶಿಫಾರಸು ಅಂಗೀಕರಿಸಲು ಕೇಂದ್ರವು ಹಿಂದೆ ಮುಂದೆ ನೋಡುತ್ತಿರುವುದೇಕೆಂದು ಅರಿತುಕೊಂಡಿರುವ ದೇವೇಗೌಡರು, ಇಂಥದ್ದೊಂದು ನಿರ್ಣಯ ಅಂಗೀಕಾರಕ್ಕೆ ರಾಜ್ಯಸಭೆಯಲ್ಲಿ ಸಾಕಷ್ಟು ಬಹುಮತವಿಲ್ಲ ಎಂದು ಯುಪಿಎ ಚಿಂತಿಸಬೇಕಾದ್ದಿಲ್ಲ. ಅದಕ್ಕೆ ಸಂಖ್ಯಾಬಲ ಒದಗಿಸಿಕೊಡುತ್ತೇವೆ ಎಂದು ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ ಮುಖಂಡರಿಗೆ ಮನವರಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ತಂತ್ರಗಾರಿಕೆಯ ಅಂಗವೇ ಈಗ ಬಹುತೇಕ ನಿಷ್ಕ್ರಿಯವಾಗಿರುವ 'ತೃತೀಯ ರಂಗ'ದ ಮುಖಂಡರೊಂದಿಗೆ ಮಾತುಕತೆ.

ಮೊನ್ನೆ ಸೋಮವಾರವೇ ಕೇಂದ್ರ ಸಂಪುಟವು ನಿರ್ಧಾರ ತೆಗೆದುಕೊಂಡು, ಗೃಹ ಸಚಿವ ಪಿ.ಚಿದಂಬರಂ ಅವರು ಅದನ್ನು ಘೋಷಿಸಲಿದ್ದಾರೆ ಎಂದು ಕಾಯುತ್ತಿದ್ದ ಮಾಜಿ ಪ್ರಧಾನಿ, ಆ ದಿನ ಬೆಂಗಳೂರಿನಲ್ಲಿ ಮೂರು ಬಾರಿ ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು. ಚಿದಂಬರಂ ಈ ಘೋಷಣೆಯನ್ನು ಮುಂದಕ್ಕೆ ಹಾಕಿದ್ದರಿಂದ ಮೂರು ಬಾರಿಯೂ ಪತ್ರಿಕಾ ಗೋಷ್ಠಿ ರದ್ದು ಮಾಡಬೇಕಾಗಿಬಂದಿತ್ತು ಎಂದು ಅವರ ಆಪ್ತರು ಹೇಳುತ್ತಾರೆ. ಬೆಂಗಳೂರಿನಲ್ಲಿದ್ದ ಅವರು ದೆಹಲಿಯಲ್ಲಿದ್ದ ತಮ್ಮ ಪುತ್ರನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದರು. ಕೇಂದ್ರವು ಘೋಷಿಸಿದ ತಕ್ಷಣ ಪತ್ರಿಕಾಗೋಷ್ಠಿ ಮಾಡಲು ಉದ್ದೇಶಿಸಿದ್ದರು. ಆದರೆ ದಿನದ ಅಂತ್ಯದಲ್ಲಿ ಮಾಜಿ ಪ್ರಧಾನಿ ತೀರಾ ನಿರಾಶರಾಗಿದ್ದರು ಎಂದು ಅವರ ಆಪ್ತ ಮೂಲಗಳು ಹೇಳಿವೆ.

ಬಂಡಾಯ ಬಿಜೆಪಿ ಶಾಸಕರಿಗಾಗಿ ಜೆಡಿಎಸ್ ಕೋಟ್ಯಂತರ ರೂಪಾಯಿ ವ್ಯಯಿಸಿತ್ತು ಎಂಬ ಆರೋಪಗಳೂ ಕೇಳಿಬರುತ್ತಿದ್ದು, ಸುಪ್ರೀಂ ಕೋರ್ಟು ಅವರ ಅನರ್ಹತೆ ರದ್ದುಪಡಿಸಿದ ತಕ್ಷಣವೇ ಮರಳಿ ಯಡಿಯೂರಪ್ಪ ಬಣಕ್ಕೆ ನಿಷ್ಠೆ ತೋರಿರುವುದರಿಂದ ತೀರಾ ಗೊಂದಲದಲ್ಲಿ ಬಿದ್ದ ದೇವೇಗೌಡರು, ತ್ವರಿತ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ಮೀನಮೇಷ ಎಣಿಸುತ್ತಿರುವುದಕ್ಕೂ ಕೆಂಡ ಕಾರಿದ್ದಾರೆ.

ಒಟ್ಟಿನಲ್ಲಿ ಇನ್ನೂ ಆಟ ಮುಗಿದಿಲ್ಲ. ರಾಜ್ಯದ ಜನರು ಈ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಮತ್ತಷ್ಟು ನಾಟಕಗಳನ್ನು ನೋಡಲು ಸಿದ್ಧರಾಗುತ್ತಿದ್ದಾರೆ.
ಇವನ್ನೂ ಓದಿ