ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸತ್ಯ ಸಾಯಿ ಟ್ರಸ್ಟ್ ಚೆಕ್ ಸಹಿ ಹಾಕುವ ಅಧಿಕಾರ ಮೂವರಿಗೆ (Satya Sai Baba, Sai Central Trust)
40 ಸಾವಿರ ಕೋಟಿ ರೂ. ಆಸ್ತಿಯ ಒಡೆತನವಿರುವ ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್‌‍ನಲ್ಲಿ ಸಹಿ ಹಾಕುವ ಅಧಿಕಾರ ಯಾರಿಗೆ ಎಂಬ ಕುತೂಹಲಗಳಿಗೆ ಕೊನೆಗೂ ತೆರೆಬಿದ್ದಿದ್ದು, ಮೂವರು ಟ್ರಸ್ಟಿಗಳಿಗೆ ಚೆಕ್ ಸಹಿ ಹಾಕುವ ಅಧಿಕಾರ ನೀಡಲಾಗಿದೆ.

ಗುರುವಾರ ಸೇರಿದ್ದ ಟ್ರಸ್ಟ್ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಆದರೆ, ಮೂವರಲ್ಲಿ ಇಬ್ಬರು ಸಹಿ ಹಾಕಿದರೂ ಕೂಡ, ಚೆಕ್ ಸಿಂಧುವಾಗುತ್ತದೆ ಎಂದೂ ನಿರ್ಣಯಿಸಲಾಗಿದೆ.

ಚೆಕ್‌ಗೆ ಸಹಿ ಹಾಕುವ ಅಧಿಕಾರ ಪಡೆದ ಮೂವರು ಟ್ರಸ್ಟಿಗಳೆಂದರೆ, ಸತ್ಯ ಸಾಯಿ ಬಾಬಾ ಅವರ ಅಣ್ಣನ ಮಗ ಆರ್.ಜೆ.ರತ್ನಾಕರ್, ವಿ.ಶ್ರೀನಿವಾಸನ್ ಹಾಗೂ ಎಸ್.ವಿ.ಗಿರಿ. ಶ್ರೀನಿವಾಸನ್ ಅವರು ಸತ್ಯ ಸಾಯಿ ಸಂಘಟನೆಗಳ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೆ, ಎಸ್.ವಿ.ಗಿರಿ ಅವರು ಭಾರತ ಸರಕಾರದ ಮಾಜಿ ಸಿವಿಸಿ.

ಮಾಜಿ ಮುಖ್ಯ ನ್ಯಾಯಮೂರ್ತಿ ಪಿ.ಎನ್.ಭಗವತಿ ಅಧ್ಯಕ್ಷತೆಯಲ್ಲಿ ಪ್ರಶಾಂತಿ ನಿಲಯದಲ್ಲಿ ಸಭೆ ಸೇರಿದ ಟ್ರಸ್ಟ್, ಈಗ ಗತಿಸಿರುವ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರು ಟ್ರಸ್ಟ್‌ನ ಶಾಶ್ವತ ಅಧ್ಯಕ್ಷರು ಎಂದು ನಿರ್ಧರಿಸಿತು. ಟ್ರಸ್ಟ್‌ನ ಮುಂದಿನ ಸಭೆಗಳಲ್ಲಿ ಅಧ್ಯಕ್ಷತೆಯನ್ನು ಸರದಿಯ ಪ್ರಕಾರ ಟ್ರಸ್ಟಿಗಳು ವಹಿಸಲಿದ್ದಾರೆ ಎಂದೂ ನಿರ್ಣಯಿಸಲಾಯಿತು.

ಸಭೆಯಲ್ಲಿ ಎಲ್ಲ ಟ್ರಸ್ಟಿಗಳು ಹಾಗೂ ವ್ಯವಸ್ಥಾಪನಾ ಮಂಡಳಿಯ ಎಲ್ಲ ಸದಸ್ಯರು ಹಾಜರಿದ್ದರು.
ಇವನ್ನೂ ಓದಿ