ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಐಪಿಗಳ ತಿಹಾರ್ ವಾಸ: ಮುಂದಿನ ಸರದಿ ಮಾರನ್? (2G Scam | VIP in Tihar Jail | Dayanidhi Maran | A Raja | Jayalalithaa)
2ಜಿ ಹಗರಣದ ರೋಗವು ಡಿಎಂಕೆಯನ್ನೇ ನುಂಗುವ ಲಕ್ಷಣಗಳು ಗೋಚರಿಸುತ್ತಿದೆ. ಟೆಲಿಕಾಂ ಸಚಿವ ಎ.ರಾಜಾರ ಕೇಂದ್ರ ಸಚಿವ ಪಟ್ಟ ಕೈತಪ್ಪಿ ಹೋದರೆ, ಡಿಎಂಕೆಯ 'ರಾಜಕುಮಾರಿ' ಕನಿಮೊಳಿ ಜೈಲು ಸೇರಿದ್ದಾರೆ. ಅದೇ ಹೊತ್ತಿಗೆ ತಮಿಳುನಾಡಿನಲ್ಲಿ ಪಕ್ಷವು ಅಧಿಕಾರವನ್ನೂ ಹೀನಾಯವಾಗಿಯೇ ಕಳೆದುಕೊಂಡಿತು. ಇದೀಗ ಮತ್ತೊಬ್ಬ ಕೇಂದ್ರ ಸಚಿವ ದಯಾನಿಧಿ ಮಾರನ್ ಸರದಿ. ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬುಧವಾರ ಒತ್ತಾಯಿಸಿದ್ದು, ಮಾರನ್ ಕೂಡ ತನಿಖೆಗೆ ಒಳಪಟ್ಟು ಜೈಲು ಸೇರಲಿದ್ದಾರೆಯೇ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಪಿಸುಮಾತು.

ಸುದ್ದಿಗಾರರೊಂದಿಗೆ ಮಾತನಾಡಿದ ಜಯಲಲಿತಾ, ಸನ್ ಟಿವಿ ನೆಟ್ವರ್ಕ್‌ಗೆ ಮಲೇಷ್ಯಾ ಮೂಲದ ಮ್ಯಾಕ್ಸಿಸ್ ಕಂಪನಿಯಿಂದ ಹೂಡಿಕೆ ನಡೆದಿರುವುದು ಮತ್ತು ಅದರದ್ದೇ ಅಂಗವಾಗಿರುವ ಏರ್‌ಸೆಲ್‌ಗೆ 2ಜಿ ಸ್ಪೆಕ್ಟ್ರಂ ಹಂಚಿಕೆಯಾಗಿರುವುದರಲ್ಲಿ ಅವ್ಯವಹಾರವಾಗಿದೆ ಎಂಬ ತೆಹಲ್ಕಾ ವರದಿಗೆ ಪ್ರತಿಕ್ರಿಯಿಸುತ್ತಾ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಎಲ್ಲ ವಿಷಯ ಗೊತ್ತಿದೆ. ಅವರು ತಕ್ಷಣವೇ ಮಾರನ್ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಬಿಜೆಪಿಯು ಮಂಗಳವಾರವೇ ಮಾರನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿಯ ಮೇಲೆ ಒತ್ತಡ ಹೇರಿದೆ. ಯುಪಿಎ-1 ಸರಕಾರದಲ್ಲಿ ಟೆಲಿಕಾಂ ಸಚಿವರಾಗಿದ್ದ ದಯಾನಿಧಿ ಮಾರನ್, ಏರ್‌ಸೆಲ್ ಪರವಾಗಿ ತಮ್ಮ ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ವರದಿಯನ್ನು ಉಲ್ಲೇಖಿಸಿ ಬಿಜೆಪಿ ಆರೋಪಿಸಿತ್ತು.

ಏರ್‌ಸೆಲ್-ಮ್ಯಾಕ್ಸಿಸ್ ಡೀಲ್ ನಡೆದ ಬಳಿಕ, ಮಾರನ್ ಕುಟುಂಬದ ಸನ್ ಡೈರೆಕ್ಟ್ ಟಿವಿ ಕಂಪನಿಯಲ್ಲಿ ಮ್ಯಾಕ್ಸಿಸ್‌ನ ಅಂಗಸಂಸ್ಥೆಯಾಗಿರುವ ಆಸ್ಟ್ರೋ ಆಲ್ ಏಷ್ಯಾ ನೆಟ್ವರ್ಕ್, 830 ಕೋಟಿ ರೂ. ಹೂಡಿಕೆ ಮಾಡಿತ್ತು. ಈ ಕುರಿತು ಮಾರನ್ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಆಗ್ರಹಿಸಿದ್ದರು.

ಸಿಬಿಐ ತನಿಖೆ ನಡೆಸಿದ ಬಳಿಕವೂ ಪ್ರಧಾನ ಮಂತ್ರಿಯವರು ಎ.ರಾಜಾ ಅವರನ್ನು ಸಮರ್ಥಿಸಿಕೊಳ್ಳುತ್ತಲೇ ಹೋಗಿದ್ದರು ಎಂದು ಕೂಡ ಬಿಜೆಪಿ ವಕ್ತಾರರು ನೆನಪಿಸಿದರು.

ಇದೀಗ 2ಜಿ ಹಗರಣದ ಆರೋಪದಲ್ಲಿ ಪ್ರಧಾನವಾಗಿ ಕೇಂದ್ರ ಮಾಜಿ ಸಚಿವ ಎ.ರಾಜಾ, ಡಿಎಂಕೆ ಸಂಸದೆ, ಕಲೈಞ್ಞರ್ ಟಿವಿಯ ಕನಿಮೊಳಿ, ಹಾಗೂ ಐದು ಮಂದಿ ಕಾರ್ಪೊರೇಟ್ ಕುಳಗಳೊಂದಿಗೆ, ಶಹೀದ್ ಬಲ್ವಾ, ಬಾಲಿವುಡ್ ಫೈನಾನ್ಷಿಯರ್ ಕರೀಂ ಮೊರಾನಿ ಮುಂತಾದ ವಿಐಪಿಗಳು ತಿಹಾರ್ ಜೈಲಿನಲ್ಲಿ ಸೇರಿದ್ದು, ಮುಂದಿನ ಸರದಿ ದಯಾನಿಧಿ ಮಾರನ್ ಅವರದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.
ಇವನ್ನೂ ಓದಿ