ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿಲ್ಲಿ ನಡುಗಿಸಿದ ಬಾಬಾ: ಸ್ವಾಗತಕ್ಕೆ ಓಡಿದ ಕೇಂದ್ರ ಮಂತ್ರಿಗಳು! (Baba Ramdev | Black Money | UPA | Pranab Mukherjee | Corruption)
PTI
ನವದೆಹಲಿ: ಮತ್ತೊಂದು 'ಅಣ್ಣಾ ಹಜಾರೆ' ಆಂದೋಲನಕ್ಕೆ ಹೊರಟಿರುವ ಯೋಗಗುರು ಬಾಬಾ ರಾಮದೇವ್ ಅವರ ಮನವೊಲಿಸುವ ಕಸರತ್ತಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು, ದೆಹಲಿಗೆ ಆಗಮಿಸುತ್ತಿರುವ ರಾಮದೇವ್ ಅವರನ್ನು ಬರಮಾಡಿಕೊಳ್ಳಲೆಂದು ತನ್ನ ಘಟಾನುಘಟಿ ಮಂತ್ರಿಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಅಟ್ಟಿದೆ. ಮಂತ್ರಿ ಮಹೋದಯರೆಲ್ಲರೂ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದರು.

ಪ್ರಧಾನಿ ಮನಮೋಹನ್ ಸಿಂಗ್ ಸರಕಾರದ ಪ್ರಮುಖ ಮಂತ್ರಿಗಳೂ, ಹಿರಿಯ ಮುಖಂಡರೂ ಆಗಿರುವ ಪ್ರಣಬ್ ಮುಖರ್ಜಿ, ಕಪಿಲ್ ಸಿಬಲ್, ಸುಬೋಧ್ ಕಾಂತ್ ಸಹಾಯ್ ಹಾಗೂ ಪಿ.ಕೆ.ಬನ್ಸಾಲ್ ಅವರು ಬಾಬಾ ಆಗಮನಕ್ಕೆ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿರುವ ದೃಶ್ಯಗಳು ಟಿವಿ ಚಾನೆಲ್‌ಗಳಲ್ಲಿ ಬಿತ್ತರವಾಗುತ್ತಿರುವುದನ್ನು ನೋಡಿದಾಗ ಸರಕಾರದ ಪರಿಸ್ಥಿತಿ ಮರುಕ ಹುಟ್ಟಿಸುವಂತಿತ್ತು.

ಕಪ್ಪು ಹಣವನ್ನು ವಿದೇಶದಿಂದ ತರಲೇಬೇಕು ಎಂದು ಒತ್ತಾಯಿಸಿ ಜೂನ್ 4ರಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆಯೊಡ್ಡಿರುವ ರಾಮದೇವ್ ಅವರಿಗೆ ಉಜ್ಜೈನಿಯಿಂದ ದೆಹಲಿಗೆ ಆಗಮಿಸುತ್ತಿರುವ ಸಂದರ್ಭ ಬುಧವಾರ ದೊರೆತ ಇಂಥದ್ದೊಂದು ಸರಕಾರೀ ಸ್ವಾಗತ, ಕೆಂಪು ಹಾಸಿನ, ಮಂತ್ರಿ ಮಾಗಧರ ಸುಸ್ವಾಗತವು ಬಹುಶಃ ಹಿಂದೆಂದೂ ದೊರೆತಿರಲಿಕ್ಕಿಲ್ಲ.

ಕೇಂದ್ರದ ಮಹಾನ್ ಮಂತ್ರಿಗಳಾದ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಟೆಲಿಕಾಂ ಸಚಿವ ಕಪಿಲ್ ಸಿಬಲ್, ಪ್ರವಾಸೋದ್ಯಮ ಸಚಿವ ಸುಬೋಧ್ ಕಾಂತ್ ಸಹಾಯ್, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪಿ.ಕೆ.ಬನ್ಸಾಲ್, ಪ್ರಧಾನ ಮಂತ್ರಿಯ ಮುಖ್ಯ ಕಾರ್ಯದರ್ಶಿ ಟಿ.ಕೆ.ಎ. ನಾಯರ್, ಕೇಂದ್ರ ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್, ಕಪ್ಪು ಹಣದ ವಿಷಯದ ಕುರಿತು ಕೇಂದ್ರ ಸರಕಾರ ರಚಿಸಿದ್ದ ಸಮಿತಿಯ ಮುಖ್ಯಸ್ಥ ಸುಧೀರ್ ಚಂದ್ರ ಕೂಡ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದರು.

ಸರಕಾರಕ್ಕೇಕೆ ಇಷ್ಟು ಭೀತಿ?
ಸಿಂಗ್ ಸರಕಾರದ ಪ್ರಮುಖ, ಹಿರಿಯ ಮಂತ್ರಿಗಳಾದ ಪ್ರಣಬ್, ಸಿಬಲ್, ಸುಬೋಧ್ ಕಾಂತ್ ಸಹಾಯ್ ಹಾಗೂ ಪಿ.ಕೆ.ಬನ್ಸಾಲ್ ಮತ್ತು ಸಂಪುಟ ಕಾರ್ಯದರ್ಶಿಯೂ ಬಾಬಾ ಸ್ವಾಗತಕ್ಕಾಗಿ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿರುವುದನ್ನು ನೋಡಿದಾಗ ಸರಕಾರದ ಪರಿಸ್ಥಿತಿ ಮರುಕ ಹುಟ್ಟಿಸುವಂತಿತ್ತು.
ಭ್ರಷ್ಟಾಚಾರ ವಿರುದ್ಧ ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹ ಆಂದೋಲನದ ಬಿಸಿ ಈಗಾಗಲೇ ಯುಪಿಎ ಸರಕಾರಕ್ಕೆ ತಟ್ಟಿದ್ದು, ಇದೀಗ ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಪಾಲ ಮಸೂದೆ ಈ ವರ್ಷವೇ ಕಾಯ್ದೆ ರೂಪ ಪಡೆಯುವಂತೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಈಗ ಬಾಬಾ ರಾಮದೇವ್ ಕೂಡ, ವಿದೇಶದಲ್ಲಿ ಕೂಡಿಟ್ಟಿರುವ ಭ್ರಷ್ಟರ ಹಣವನ್ನು ಭಾರತಕ್ಕೆ ವಾಪಸ್ ತರಬೇಕೆಂದು ಒತ್ತಾಯಿಸುತ್ತಿದ್ದು, ಮತ್ತೊಂದು "ಹಜಾರೆ" ಆಗಲಿದ್ದಾರೆ ಎಂಬ ಭೀತಿಯಿಂದಾಗಿಯೇ ಕಾಂಗ್ರೆಸ್ ನೇತೃತ್ವದ ಸರಕಾರವು ಉಪವಾಸ ಕೈಬಿಡುವಂತೆ ಬಾಬಾ ಅವರ ಮನವೊಲಿಸಲು ಶತಾಯಗತಾಯ ಪ್ರಯತ್ನಿಸುತ್ತಿದೆ. ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲೇ ಬಾಬಾ ಅವರೊಂದಿಗೆ ಈ ಮಂತ್ರಿಗಳು ಮಾತುಕತೆ ನಡೆಸಿದ್ದಾರೆ.

ಉಪವಾಸ ಕೈಬಿಡಬೇಕು ಎಂದು ಸ್ವತಃ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರೇ ಮಂಗಳವಾರ ಬಾಬಾ ರಾಮದೇವ್ ಅವರನ್ನು ಕೇಳಿಕೊಂಡಿದ್ದರು. ಈ ಅನಿರೀಕ್ಷಿತ ಕೆಂಪು ಹಾಸಿನ ಸ್ವಾಗತವು ಬಹುಶಃ ಅಣ್ಣಾ ಹಜಾರೆ ನೇತೃತ್ವದ ಲೋಕಪಾಲ ಕರಡು ಮಸೂದೆ ಸಮಿತಿಯಲ್ಲೇ ಒಡಕುಂಟು ಮಾಡುವ ಪ್ರಯತ್ನಗಳು ಎಂದು ಕೂಡ ವಿಶ್ಲೇಷಿಸಲಾಗುತ್ತಿದೆ.

ಅಣ್ಣಾ ಹಜಾರೆ ಬಣದೊಂದಿಗೆ ತನಗೇನೂ ಭಿನ್ನಾಭಿಪ್ರಾಯವಿಲ್ಲ ಎಂದು ಬಾಬಾ ರಾಮದೇವ್ ಕೂಡ ಸ್ಪಷ್ಟನೆ ನೀಡಿದ್ದಾರೆ. ಆದರೆ, ಲೋಕಪಾಲ ಮಸೂದೆ ವ್ಯಾಪ್ತಿಯಿಂದ ಪ್ರಧಾನಮಂತ್ರಿ ಮತ್ತು ನ್ಯಾಯಾಂಗವನ್ನು ಹೊರಗಿಡಬೇಕು ಎಂದು ಇದೇ ಸಂದರ್ಭದಲ್ಲಿ ರಾಮದೇವ್ ಘೋಷಿಸಿದ್ದಾರೆ.

ಆದರೂ, ಬಾಬಾ ರಾಮದೇವ್ ಸ್ವಾಗತಕ್ಕೆ ಇಡೀ ಸರಕಾರವೇ ಇಷ್ಟೊಂದು ತರಾತುರಿ ವಹಿಸಿ, ಮುತುವರ್ಜಿ ವಹಿಸಿ, ಪ್ರಹಸನ ಮಾಡಿರುವುದು ಕುತೂಹಲಕ್ಕೆ, ಶಂಕೆಗಳಿಗೆ ಪುಷ್ಟಿ ನೀಡಿದಂತಾಗಿದೆ.
ಇವನ್ನೂ ಓದಿ