ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿದೇಶದಲ್ಲಿರೋ ಕಾಳಧನ ರಾಷ್ಟ್ರೀಯ ಸಂಪತ್ತು: ಕೇಂದ್ರ ಸಮ್ಮತಿ (Baba Ramdev | Indefinite Fast | Black Money | Corruption | UPA)
PTI
ವಿದೇಶದಲ್ಲಿ ರಾಶಿಬಿದ್ದಿರುವ ಭ್ರಷ್ಟಾಚಾರದ ಕಪ್ಪುಹಣದ ಮೂಟೆಯನ್ನು ವಾಪಸ್ ತರಿಸಬೇಕು ಎಂದು ಒತ್ತಾಯಿಸಿ, ಭ್ರಷ್ಟಾಚಾರದ ವಿರುದ್ಧ ಯೋಗ ಗುರು ಬಾಬಾ ರಾಮದೇವ್ ಅವರು ನಡೆಸಲು ಉದ್ದೇಶಿಸಿರುವ ಉಪವಾಸ ನಿಲ್ಲಿಸಲು ಕೇಂದ್ರದ ಸರಕಾರ ಶತ ಪ್ರಯತ್ನ ನಡೆಸಿದ್ದು, ಶುಕ್ರವಾರ ಸಂಜೆ ಈ ಕುರಿತು ನಡೆಸಿದ ಸಂಧಾನ ಪ್ರಯತ್ನಗಳು ಫಲಪ್ರದವಾಗಲಿಲ್ಲ. ಹೀಗಾಗಿ, ಬಾಬಾ ಉಪವಾಸ ಮುಂದುವರಿಸುವುದಾಗಿ ಹೇಳಿದ್ದಾರೆ. ಈ ನಡುವೆ, ಕಪ್ಪು ಹಣವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಲು ಕೇಂದ್ರವು ಒಪ್ಪಿದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಸುಮಾರು ಐದು ಗಂಟೆಗಳ ಕಾಲ ಬಾಬಾ ಅವರೊಂದಿಗೆ ಕೇಂದ್ರವು ನಡೆಸಿದ ಎರಡನೇ ಸುತ್ತಿನ ಮಾತುಕತೆ ಫಲಪ್ರದವಾಗಲಿಲ್ಲ. ಆದರೂ ಕೆಲವೊಂದು ಬೇಡಿಕೆಗಳಿಗೆ ಕೇಂದ್ರವು ಒಪ್ಪಿದೆ ಎಂದು ಬಾಬಾ ಅವರು ಮಾತುಕತೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಘೋಷಿಸಿ, ರಾಮಲೀಲಾ ಮೈದಾನದಲ್ಲಿ ನೆರೆದಿದ್ದ ಬೆಂಬಲಿಗರ ಬಳಿಗೆ ತೆರಳಿದರು. ಅಲ್ಲೇ ಅವರು ಶನಿವಾರ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.

ಕಪ್ಪು ಹಣ ರಾಷ್ಟ್ರೀಯ ಸಂಪತ್ತು: ಕೇಂದ್ರ ಸಮ್ಮತಿ
ಕಪ್ಪು ಹಣ ವಾಪಸ್ ತರುವ ನಿಟ್ಟಿನಲ್ಲಿ ಸರಕಾರವು ಸುಗ್ರೀವಾಜ್ಞೆ ಹೊರತರಬೇಕು ಎಂದು ಬಾಬಾ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಆದರೆ, ಭಾರತದಲ್ಲಿ ಅಕ್ರಮವಾಗಿ ಸಂಪಾದಿಸಿ, ತೆರಿಗೆ ತಪ್ಪಿಸುವ ನಿಟ್ಟಿನಲ್ಲಿ ವಿದೇಶೀ ಬ್ಯಾಂಕುಗಳಲ್ಲಿ ಇಲ್ಲಿನ ರಾಜಕಾರಣಿಗಳು, ಭ್ರಷ್ಟಾಚಾರಿಗಳು ಕೂಡಿಟ್ಟಿರುವ ಕಪ್ಪು ಹಣವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಲು ಕೇಂದ್ರವು ಒಪ್ಪಿದೆ ಎಂದೂ ಹೇಳಿವೆ.

ಈ ಮಧ್ಯೆ, ಬಾಬಾ ಜತೆ ಸಂಧಾನ ನಡೆಸಿದ ಪ್ರಮುಖ ಸಚಿವರಲ್ಲೊಬ್ಬರಾದ ಕಪಿಲ್ ಸಿಬಲ್ ಅವರು ಮಾತನಾಡಿ, "ರಾಮದೇವ್ ಹಲವು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸರಕಾರವು ಸ್ಪಂದಿಸಿದೆ. ಇನ್ನು ಏನು ಹೇಳಬೇಕೆಂಬುದು ಬಾಬಾ ಅವರಿಗೇ ಬಿಟ್ಟ ವಿಷಯ. ಇಂತಹಾ ವಿಷಯಗಳು ಒಂದೇ ದಿನದಲ್ಲಿ ಬಗೆಹರಿಯುತ್ತದೆ ಎಂದು ನಿರೀಕ್ಷಿಸಬೇಕಿಲ್ಲ. ಇದು ದೀರ್ಘಕಾಲಿಕ ಪರಿಣಾಮ ಬೀರುವುದರಿಂದ ನಾಳೆ ಮತ್ತೆ ಮಾತುಕತೆಯನ್ನು ಮತ್ತೆ ಮುಂದುವರಿಸುತ್ತೇವೆ" ಎಂದರು.

ಬಾಬಾ ಅವರು ಲಿಖಿತವಾಗಿ ಎತ್ತಿದ ಹಲವಾರು ವಿಷಯಗಳನ್ನು ಪರಿಗಣಿಸಿದ್ದೇವೆ, ನಮ್ಮ ನಡುವೆ ರಚನಾತ್ಮಕ ಮಾತುಕತೆ ನಡೆಸಿದೆ ಎಂದೂ ಸಿಬಲ್ ಹೇಳಿದರು.

ರಾಷ್ಟ್ರಪತಿ ಬಳಿಗೋಡಿದ ಪ್ರಧಾನಿ
ಈ ಮಧ್ಯೆ, ಬಾಬಾ ರಾಮದೇವ್ ಅವರ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಎದ್ದಿರುವ ಬಿಕ್ಕಟ್ಟಿನ ಕುರಿತು ರಾಷ್ಟ್ರಪತಿಗೆ ಮನವರಿಕೆ ಮಾಡಲು ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿದರು. ಉಪವಾಸ ನಿಲ್ಲಿಸಲು ಹಿರಿಯ ಸಚಿವರು ಮಾಡುತ್ತಿರುವ ಪ್ರಯತ್ನಗಳು ಫಲ ನೀಡದ ಹಿನ್ನೆಲೆಯಲ್ಲಿ ಪ್ರಧಾನಿ ಸಿಂಗ್ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ಗೆ ಬಾಬಾ ಜತೆಗಿನ ಮಾತುಕತೆ ವಿವರಗಳನ್ನು ನೀಡಿದರು. 40 ನಿಮಿಷ ಕಾಲ ನಡೆದ ಮಾತುಕತೆಯಲ್ಲಿ ಪ್ರಧಾನಿ ಅವರು ತಮ್ಮ ಇಥಿಯೋಪಿಯಾ, ತಾಂಜಾನಿಯಾ ಪ್ರವಾಸದ ವಿವರಗಳನ್ನೂ ನೀಡಿದರು ಎಂದು ಮೂಲಗಳು ಹೇಳಿವೆ.

ಬಾಬಾ ಅವರನ್ನು ಸಮಾಧಾನಗೊಳಿಸಲು ಕೇಂದ್ರ ಸರಕಾರದ ಘಟಾನುಘಟಿಗಳು ಎಲ್ಲ ರೀತಿಯಲ್ಲಿಯೂ ಪ್ರಯತ್ನ ಪಡುತ್ತಿದ್ದರು. ಶುಕ್ರವಾರ ಸಿಬಲ್, ಹಾಗೂ ಇನ್ನೊಬ್ಬ ಸಚಿವ ಸುಬೋಧ್ ಕಾಂತ್ ಸಹಾಯ್ ಅವರು ಬಾಬಾ ರಾಮದೇವ್ ಜತೆ ಮಾತುಕತೆ ನಡೆಸುವ ಮುನ್ನ, ಗೃಹ ಸಚಿವ ಪಿ.ಚಿದಂಬರಂ, ವಿತ್ತ ಸಚಿವ ಪ್ರಣಬ್ ಮುಖರ್ಜಿ ಮುಂತಾದವರೆಲ್ಲಾ ಸಭೆ ಸೇರಿ, ಬಾಬಾ ಜತೆಗೆ ಹೇಗೆ ಮಾತುಕತೆ ನಡೆಸಬೇಕೆಂಬುದರ ಕುರಿತು ಸ್ಕೆಚ್ ಸಿದ್ಧಪಡಿಸಿದ್ದರು.
ಇವನ್ನೂ ಓದಿ