ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹರಿದ್ವಾರದಿಂದಲೇ ಕೇಂದ್ರ ವಿರುದ್ಧ ಸಮರ ಸಾರಿದ ಬಾಬಾ (Baba Ramdev Fiasco | Indefinite Fast | Congress | Black Money)
ರಾಮಲೀಲಾ ಮೈದಾನದಲ್ಲಿ ಶನಿವಾರ ರಾತ್ರಿ ದೌರ್ಜನ್ಯ ನಡೆಸಲೇ ಇಲ್ಲ ಎಂದು ದೆಹಲಿ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ಸಾಕ್ಷ್ಯ ಸಮೇತ ಪ್ರದರ್ಶಿಸಿರುವ ಯೋಗ ಗುರು ಬಾಬಾ ರಾಮದೇವ್, ಇದೆಲ್ಲದರ ಹಿಂದೆ ಕೇಂದ್ರ ಸರಕಾರದ ಷಡ್ಯಂತ್ರವಿದೆ, ಅದರ ಬಣ್ಣ ಬಯಲು ಮಾಡುವುದಾಗಿ ಘೋಷಿಸಿದ್ದಾರೆ. ಶನಿವಾರ ರಾತ್ರಿ ತಮ್ಮ ಕೊಲೆಗೂ ಯತ್ನಿಸಲಾಯಿತು ಎಂದು ಪುನರುಚ್ಚರಿಸಿದ ಅವರು, ಭ್ರಷ್ಟಾಚಾರದ ವಿರುದ್ಧ ಕೇಂದ್ರವು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವವರೆಗೂ ಉಪವಾಸ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಮತ್ತು ಕಪ್ಪು ಹಣ ಭಾರತಕ್ಕೆ ತರಿಸಬೇಕು ಎಂದು ಆಗ್ರಹಿಸಿ ಹರಿದ್ವಾರದ ತಮ್ಮ ಪತಂಜಲಿ ಯೋಗ ಪೀಠದಲ್ಲಿಯೇ ಉಪವಾಸ ಮುಂದುವರಿಸುವುದಾಗಿ ಸೋಮವಾರ ಪ್ರಕಟಿಸಿದ ಅವರು, ಪೊಲೀಸರು ಮಹಿಳೆಯರ ಬಟ್ಟೆ ಹರಿದಿದ್ದಾರೆ ಮತ್ತು ಪೆಂಡಾಲಿನಲ್ಲಿರುವ ವೈರ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಸುಪ್ರೀಂ ಕೋರ್ಟು ಸ್ವಯಂಪ್ರೇರಿತವಾಗಿ ಕ್ರಮಕ್ಕೆ ಮುಂದಾಗಿ ಕೇಂದ್ರ ಸರಕಾರಕ್ಕೆ, ರಾಜ್ಯ ಸರಕಾರಕ್ಕೆ, ಪೊಲೀಸರಿಗೆ ನೋಟೀಸ್ ಜಾರಿ ಮಾಡಿರುವುದು, ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಹೆಚ್ಚಲು ಕಾರಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ತಮ್ಮ ಬೆಂಬಲಿಗರ ಮೇಲೆ, ಮಹಿಳೆಯರ ಮೇಲೆ ನಡೆಸಲಾದ ದೌರ್ಜನ್ಯದ ಕುರಿತು ಮಾನವ ಹಕ್ಕುಗಳ ಆಯೋಗ ಹಾಗೂ ಮಹಿಳಾ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಒಟ್ಟು ಸೇರುವುದು ಅಕ್ರಮ ಎಂದಾದರೆ, ಗಾಂಧೀಜಿಯವರ ಸತ್ಯಾಗ್ರಹವೂ ತಪ್ಪೇ ಎಂದು ಕಾಂಗ್ರೆಸ್ಸನ್ನು ಪ್ರಶ್ನಿಸಿದ ಅವರು, ದೆಹಲಿ ರಾಮಲೀಲಾ ಮೈದಾನದಲ್ಲಿ ಮೂರು ಕಡೆ ಬೆಂಕಿ ಹಚ್ಚಲಾಯಿತು. ಬೆಂಕಿ ನಂದಿಸಲು ಹೋದ ತಮ್ಮ ಬೆಂಬಲಿಗರಿಗೆ ಗಾಯವಾಗಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರಿಂದಲೂ ಹಲವರು ಗಾಯಗೊಂಡಿದ್ದಾರೆ ಎನ್ನುತ್ತಾ, ತಮ್ಮ ಕಾರ್ಯಕರ್ತನೊಬ್ಬನ ಭುಜದ ಗಾಯಗಳನ್ನು ತೋರಿಸಿದರು.

ಇದಕ್ಕೆ ಮೊದಲು, ದೆಹಲಿಗೆ ತೆರಳಲು ಸಿದ್ಧತೆ ಮಾಡುತ್ತಿದ್ದ ಬಾಬಾ ಅವರು ಮುಜಾಫರ್‌ನಗರ ಪ್ರವೇಶಿಸದಂತೆ ಮಾಯಾವತಿ ಸರಕಾರ ತಡೆಯೊಡ್ಡಿತ್ತು. ದೆಹಲಿಗೆ ಹೋಗಬೇಕಿದ್ದರೆ, ಕಾಂಗ್ರೆಸ್ ಆಡಳಿತದಲ್ಲಿರುವ ಹರ್ಯಾಣ ಮೂಲಕ ಹೋಗಿ, ಉತ್ತರ ಪ್ರದೇಶ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಾಯಾವತಿ ಸರಕಾರ ಸ್ಪಷ್ಟಪಡಿಸಿತ್ತು.
ಇವನ್ನೂ ಓದಿ