ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ಪ್ರಾಣಕ್ಕೆ ಅಪಾಯ, ಹಾಗಾಗಿ ಓಡಿಸಿದೆವು: ಚಿದಂಬರಂ (Ramlila Maidan | Police Atrocity | Baba Ramdev | Corruption | Chidambaram)
ಶನಿವಾರ ರಾತ್ರಿ ರಾಮಲೀಲಾ ಮೈದಾನದಲ್ಲಿ ಮಲಗಿ ನಿದ್ರಿಸುತ್ತಿದ್ದ ಸತ್ಯಾಗ್ರಹಿಗಳ ಮೇಲೆ ಪೊಲೀಸ್ ಬಲ ಪ್ರಯೋಗ ಮಾಡಿ ಓಡಿಸಿರುವುದನ್ನು ಸಮರ್ಥಿಸಿಕೊಂಡಿರುವ ಕೇಂದ್ರದ ಸಂಯುಕ್ತ ಪ್ರಗತಿಪರ ಒಕ್ಕೂಟ (ಯುಪಿಎ) ಸರಕಾರ, ಯೋಗ ಗುರು ಬಾಬಾ ರಾಮದೇವ್ ಅವರ ಪ್ರಾಣಕ್ಕೆ ಅಪಾಯವಿತ್ತು ಎಂದು ವಾದಿಸಿದೆ.

"ರಾಮ್‌ದೇವ್‌ಗೆ ಅಪಾಯವಿದೆ ಎಂಬ ಕುರಿತು ನಮಗೆ ಮಾಹಿತಿ ದೊರಕಿತ್ತು. ಇದರ ಹಿಂದೆ ಯಾರಿದ್ದಾರೆ ಮತ್ತು ಇದು ಎಷ್ಟರ ಮಟ್ಟಿಗೆ ನಿಜ ಎಂದು ನಾನು ಹೇಳುವಂತಿಲ್ಲ. ಈ ಬಗೆಗಿನ ಮಾಹಿತಿಯಿತ್ತು, ಅದನ್ನು ರಾಮದೇವ್‌ಗೂ ತಿಳಿಸಿದ್ದೆವು. ಅವರನ್ನು ದೆಹಲಿಯಿಂದ ಎತ್ತಂಗಡಿ ಮಾಡಿಸಲು ಇದೂ ಒಂದು ಕಾರಣವಾಗಿತ್ತು" ಎಂದು ಗೃಹ ಸಚಿವ ಪಿ.ಚಿದಂಬರಂ ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.

ಬಾಬಾ ರಾಮದೇವ್ ಅವರು ದೆಹಲಿಗೆ ಬರುವುದಕ್ಕೆ ನಿಷೇಧ ವಿಧಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಅನುಮತಿಯು ಅವರು ದೆಹಲಿಗೆ ಯಾಕೆ ಬರುತ್ತಾರೆ ಮತ್ತು ಆಗ ದೆಹಲಿಯಲ್ಲಿನ ಭದ್ರತಾ ಪರಿಸ್ಥಿತಿ ಯಾವ ರೀತಿ ಇರುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ ಎಂದರು.

ಪ್ರತಿಭಟನೆ ನಡೆಸಲು ಜನರಿಗೆ ಹಕ್ಕಿದೆ ಎಂಬುದನ್ನು ಒಪ್ಪಿಕೊಂಡ ಚಿದಂಬರಂ, ಪ್ರತಿಭಟನೆ ನಡೆಸದಂತೆ ತಡೆಯುವ ಹಕ್ಕು ಕೂಡ ಪೊಲೀಸರಿಗೆ ಇದೆ ಎಂದಿದ್ದಾರೆ.

ರಾಮಲೀಲಾ ಮೈದಾನವು ಸೂಕ್ಷ್ಮ ಪ್ರದೇಶ. ಕಾನೂನು ಸುವ್ಯವಸ್ಥೆಯು ಪೊಲೀಸರ ಜವಾಬ್ದಾರಿ. ಶಾಂತಿಯುತ ಪ್ರತಿಭಟನೆಗಳಿಗೆ ಅವರು ಅನುಮತಿ ನೀಡುತ್ತಾರೆ. ಬಿಜೆಪಿಗೆ, ಅಣ್ಣಾ ಹಜಾರೆಗೆ ಅನುಮತಿ ನೀಡಿದ್ದಾರೆ. ಕೆಲವೊಮ್ಮೆ ನಿರಾಕರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಹೌದು, ಪ್ರತಿಭಟನಾಕಾರರಿಗೆ ಗಾಯಗಳಾಗಿವೆ...
ರಾಮಲೀಲಾ ಮೈದಾನದಲ್ಲಿ ಪೊಲೀಸ್ ಲಾಠಿ ಚಾರ್ಜ್ ನಡೆಸಿಲ್ಲ ಎಂದಿರುವ ಕೇಂದ್ರ ಮಾನವ ಸಂಪನ್ಮೂಲ ಹಾಗೂ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ, ಕೊನೆಗೂ ಅಲ್ಲಿ ಹೋರಾಟಗಾರರಿಗೆ ಗಾಯಗಳಾಗಿವೆ ಎಂಬುದನ್ನು ಚಿದಂಬರಂ ಒಪ್ಪಿಕೊಂಡರು.

ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರುವ ರಾಜ ಬಾಲಾ ಪರಿಸ್ಥಿತಿ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಅವರು, ಸರಕಾರವು ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತದೆ ಎಂದಿದ್ದಾರೆ.

ರಾಮಲೀಲಾ ಮೈದಾನದಲ್ಲಿ ನಡೆದ ಪೊಲೀಸ್ ಬಲ ಪ್ರಯೋಗದ ಸಂದರ್ಭ 39 ಮಂದಿ ನಾಗರಿಕರಿಗೆ ಗಾಯಗಳಾಗಿವೆ, ನಾಲ್ವರನ್ನು ಹೊರತುಪಡಿಸಿ ಉಳಿದೆಲ್ಲರೂ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಮರಳಿದ್ದಾರೆ ಎಂದರು.

ಇಬ್ಬರನ್ನು ಆ ಬಳಿಕ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದ್ದರೆ, ಮತ್ತೊಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿದಂಬರಂ ಮಾಹಿತಿ ನೀಡಿದರು. ರಾಜ ಬಾಲಾ ಅವರಿಗೆ ಮಾತ್ರ ಗಂಭೀರ ಏಟು ಬಿದ್ದಿದೆ. ಈ ಬಗ್ಗೆ ನನಗೆ ಖೇದವಿದೆ. ಅವರ ಕುಟುಂಬಿಕರನ್ನು ಶೀಘ್ರವೇ ಭೇಟಿಯಾಗಿ ಸಾಂತ್ವನ ಹೇಳುವ ಅವಕಾಶ ಸಿಗುತ್ತದೆ ಎಂದು ಭಾವಿಸುವುದಾಗಿ ಹೇಳಿದರು.
ಇವನ್ನೂ ಓದಿ