ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಪ್ಪುಹಣ: ಕಾಂಗ್ರೆಸ್ ಆಪ್ತರ ಬಣ್ಣ ಬಯಲಾಗುವ ಭೀತಿ- ಬಿಜೆಪಿ (Black Money | Congress | UPA | Corruption | BJP)
ವಿದೇಶದಲ್ಲಿ ರಾಶಿ ಬಿದ್ದಿರುವ ಕಾಳಧನವನ್ನು ತರಿಸಲು ಯುಪಿಎ ಸರಕಾರವು ಎಂದಿಗೂ ಪರಿಣಾಮಕಾರಿ ಮತ್ತು ಅರ್ಥಪೂರ್ಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಖಚಿತವಾಗಿ ಹೇಳಿರುವ ಬಿಜೆಪಿ, ಮನಮೋಹನ್ ಸಿಂಗ್ ಸರಕಾರವು ಭ್ರಷ್ಟಾಚಾರ, ಕಾಳ ಧನದ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲವೆಂದರೆ, 'ತಮ್ಮದೇ ಕಪಾಟಿನಿಂದ ಸಾಕಷ್ಟು ಅಸ್ಥಿಪಂಜರಗಳು' ಈಚೆಗೆ ಬರುತ್ತವೆ ಎಂಬ ಭಯದಿಂದ ಎಂದು ಹೇಳಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಕ್ತಾರ ರವಿಶಂಕರ್ ಪ್ರಸಾದ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮನಮೋಹನ್ ಸಿಂಗ್ ಸರಕಾರದ ಮೇಲೆ ನೇರ ಆರೋಪ ಮಾಡುತ್ತಾ, ದೇಶಾದ್ಯಂತ ಇಷ್ಟೊಂದು ಹತಾಶೆ, ಆಕ್ರೋಶ ತುಂಬಿದ್ದರೂ, ಕಪ್ಪು ಹಣದ ವಿರುದ್ಧ ಯುಪಿಎ ಸರಕಾರ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಸರಕಾರಕ್ಕೆ ಆಪ್ತರಾಗಿರುವವರ ಹೆಸರುಗಳೆಲ್ಲವೂ ಹೊರಬರುತ್ತವೆ ಎಂಬ ಆತಂಕವೇ ಇದಕ್ಕೆ ಕಾರಣ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಮಹಾನ್ ತೆರಿಗೆ ವಂಚಕ ಹಸನ್ ಅಲಿ ಹೆಸರನ್ನು ಪ್ರಸ್ತಾಪಿಸಿದ ರವಿಶಂಕರ್ ಪ್ರಸಾದ್, ತನಿಖೆಯ ವೇಳೆ ಹಲವಾರು ಕಾಂಗ್ರೆಸಿಗರ ಹೆಸರುಗಳು ಬೆಳಕಿಗೆ ಬಂದಿವೆ ಎಂದು ನುಡಿದರು. "ವಿದೇಶೀ ಬ್ಯಾಂಕು ಖಾತೆಗಳ ಬಗ್ಗೆ ಬಲವಾದ ಕ್ರಮವೇನಾದರೂ ಕೈಗೊಂಡರೆ, ಕಾಂಗ್ರೆಸ್‌ಗೆ ಅತ್ಯಂತ ಆಪ್ತರಾಗಿರುವವರೆಲ್ಲರ ಹೆಸರುಗಳೂ ಈಚೆಗೆ ಬರುತ್ತವೆ ಎಂಬುದು ಅದಕ್ಕೆ ಗೊತ್ತಿದೆ" ಎಂದರು.

ಜಾಗತಿಕವಾಗಿ ಭ್ರಷ್ಟಾಚಾರದ ವಿರುದ್ಧ ವಿಶ್ವಸಂಸ್ಥೆಯಲ್ಲಿ 2005ರಲ್ಲೇ ಒಪ್ಪಂದವಾಗಿದ್ದರೂ, ಭಾರತವು ಕಳೆದ ವಾರವಷ್ಟೇ ಅದಕ್ಕೆ ಅಂಗೀಕಾರ ನೀಡಿತು ಎಂಬುದನ್ನು ಕೇಳಿದ್ದೇನೆ ಎಂದ ರವಿಶಂಕರ್, ಜಿ20 ಸದಸ್ಯ ರಾಷ್ಟ್ರವಾಗಿರುವ ಭಾರತ ಈಗ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿದ್ದರೂ, ವಿದೇಶೀ ಬ್ಯಾಂಕುಗಳಲ್ಲಿ ಅಕ್ರಮ ಹಣವಿಟ್ಟಿರುವ ಭಾರತೀಯರ ಕುರಿತ ವಿವರವನ್ನು ಪಡೆಯುವುದು ಅದಕ್ಕೆ ಸಾಧ್ಯವಾಗಿಲ್ಲ ಎಂದು ಛೇಡಿಸಿದರು.

ಜರ್ಮನಿಗಾಗುತ್ತೆ, ನಮಗೇಕಿಲ್ಲ?
ಅಮೆರಿಕ, ಫಿಲಿಪ್ಪೀನ್ಸ್ ಮತ್ತು ಜರ್ಮನಿಗಳು ಕಾಳಧನ ಇಟ್ಟಿರುವ ತಮ್ಮ ನಾಗರಿಕರ ಬ್ಯಾಂಕ್ ವಿವರಗಳನ್ನು ನೀಡುವಂತೆ ವಿದೇಶೀ ಬ್ಯಾಂಕುಗಳನ್ನು ಒತ್ತಡ ಹೇರಿ ಯಶಸ್ವಿಯಾಗಿವೆ. ಆದರೆ ಇದನ್ನೇ ಭಾರತ ಸರಕಾರವೇಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನಿಂದ ಸಮಿತಿ, ಉಪ ಸಮಿತಿ, ವರದಿಗಳು ಇತ್ಯಾದಿಗಳ ಬಾಯಿಮಾತಿನ ಭರವಸೆಗಳು ಮಾತ್ರವೇ ಕೇಳಿಬರುತ್ತಿವೆ. ಆದರೆ ಯಾವುದೇ ಅರ್ಥಪೂರ್ಣ ಕ್ರಮ ಕೈಗೊಳ್ಳುತ್ತಿಲ್ಲ ಎಂದರಲ್ಲದೆ, 2ಜಿ ಹಗರಣದಲ್ಲಿ ನೇರ ಆರೋಪಗಳು ಕೇಳಿಬರುತ್ತಿರುವುದರಿಂದ ಕೇಂದ್ರ ಜವಳಿ ಖಾತೆ ಸಚಿವ ದಯಾನಿಧಿ ಮಾರನ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಕೇಂದ್ರವನ್ನು ಆಗ್ರಹಿಸಿದರು.
ಇವನ್ನೂ ಓದಿ