ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೂಡದ ಒಮ್ಮತ: ಎರಡು ಲೋಕಪಾಲ ಕರಡು ಮಸೂದೆ (Lokpal Bill | Joint Draft Committee | Anna Hazare | Corruption)
ಭ್ರಷ್ಟಾಚಾರ ಕೊನೆಗೊಳಿಸುವ ನಿಟ್ಟಿನಲ್ಲಿ ಭಾರತೀಯ ಜನ ಸಾಮಾನ್ಯರಲ್ಲಿ ನಿರೀಕ್ಷೆ ಹುಟ್ಟಿಸಿದ ಲೋಕಪಾಲ ಮಸೂದೆಯು ಹುಟ್ಟು ಪಡೆಯುವ ಮೊದಲೇ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ. ಲೋಕಪಾಲ ವ್ಯಾಪ್ತಿಗೆ ಪ್ರಧಾನಿ ಹಾಗೂ ನ್ಯಾಯಾಂಗವೂ ಬರಬೇಕೆಂದು ನಾಗರಿಕ ಸಮಾಜ ಸದಸ್ಯರ ಬೇಡಿಕೆಗೆ ಸರಕಾರದ ಪ್ರತಿನಿಧಿಗಳು ವಿರೋಧಿಸುವುದರೊಂದಿಗೆ, ಜೂ.30ರ ಡೆಡ್‌ಲೈನ್‌ನೊಳಗೆ ಎರಡೂ ಬಣಗಳಿಂದ ಎರಡು ಕರಡು ಮಸೂದೆಗಳನ್ನು ಸಿದ್ಧಪಡಿಸಿ ಸಂಪುಟಕ್ಕೆ ಕಳುಹಿಸಿಕೊಡಲು ತೀರ್ಮಾನಿಸಲಾಗಿದೆ.

ಬುಧವಾರ ಎರಡುವರೆ ಗಂಟೆ ನಡೆದ ಜಂಟಿ ಕರಡು ಸಮಿತಿಯ ಸಭೆಯಲ್ಲಿ ಒಮ್ಮತ ಮೂಡಲೇ ಇಲ್ಲ. ಲೋಕಪಾಲ ಮಸೂದೆಯ ಜಂಟಿ ಕರಡು ಸಮಿತಿಯಲ್ಲಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಐವರು ಸಚಿವರ ತಂಡವು ತಮ್ಮದೇ ಆದ ಲೋಕಪಾಲ ಮಸೂದೆಯ ಕರಡನ್ನೂ, ಅಣ್ಣಾ ಹಜಾರೆ ಬಣದ ನಾಗರಿಕ ಸಮಾಜವು ತನ್ನದೇ ಆದ ಕರಡು ತಯಾರಿಸಿ ಸಂಪುಟಕ್ಕೆ ಒಪ್ಪಿಸಲಿದೆ. ಹೇಗಿದ್ದರೂ ಅಂತಿಮ ತೀರ್ಮಾನ ಕೈಗೊಳ್ಳುವುದು ಕೇಂದ್ರ ಸರಕಾರವೇ ಆಗಿರುವುದರಿಂದ ಮತ್ತು ಅದು ಸಂಸತ್ತಿನಲ್ಲಿ ಮಾತ್ರವೇ ಶಾಸನ ರೂಪ ಪಡೆಯುವುದರಿಂದ, ಅಣ್ಣಾ ಹಜಾರೆ ಬಣದ ಹೋರಾಟವೂ, ಬಾಬಾ ರಾಮದೇವ್ ಅವರ "ಕಪ್ಪು ಹಣದ ವಿರುದ್ಧದ ಹೋರಾಟ"ದ ಹಾದಿ ಹಿಡಿಯತೊಡಗಿರುವುದು ನಿಚ್ಚಳವಾಗಿದೆ.

ಬಾಬಾ ರಾಮದೇವ್ ಹೋರಾಟವನ್ನು ಬಲ ಪ್ರಯೋಗಿಸಿ ತಣ್ಣಗಾಗಿಸಿದ್ದರೆ, ಗಾಂಧಿವಾದವನ್ನು ಅನುಸರಿಸಿ, ದೇಶಾದ್ಯಂತ ಸಂಚಲನ ಮೂಡಿಸಿದ್ದ ಅಣ್ಣಾ ಹಜಾರೆ ಅವರ ಹೋರಾಟವನ್ನು ಮೌನವಾಗಿಯೇ ಮುರಿಯುವ ರಾಜಕಾರಣಿಗಳ ಪ್ರಯತ್ನ ಯಶಸ್ಸು ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ.

ಪ್ರಸ್ತಾಪಿತ ಪೂರ್ಣಾಧಿಕಾರವುಳ್ಳ ಲೋಕಪಾಲ ಕಾಯ್ದೆಯ ರಚನೆ ಮತ್ತು ಅದರ ಅನುಬಂಧಗಳ ಕುರಿತಾಗಿ ಉಭಯ ಬಣಗಳ ನಡುವೆ ಸಹಮತ ಏರ್ಪಡಲಿಲ್ಲ.

ಸಿಬಿಐ ವಿಚಾರಣೆ ಜತೆಗೆ ಇಲಾಖಾ ತನಿಖೆಯ ಮಾಡುವ ಮೂಲಕ ನುಣುಚಿಕೊಳ್ಳುವ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಅಧಿಕಾರವನ್ನೂ ಲೋಕಪಾಲರಿಗೆ ನೀಡಬೇಕು ಎಂದು ಅಣ್ಣಾ ಹಜಾರೆ ಬಣ ಒತ್ತಾಯಿಸಿತು. ಇದಕ್ಕಾಗಿ 11 ಮಂದಿ ಸದಸ್ಯರ ಭ್ರಷ್ಟಾಚಾರ-ನಿಗ್ರಹ ಪಡೆಯೊಂದನ್ನು ರಚಿಸಿ ಅವರ ಕೈಕೆಳಗಿನವರಿಗೆ ಅಧಿಕಾರ ಕೊಡಬೇಕು ಎಂಬುದು ಅವರ ಆಗ್ರಹ. ಆದರೆ ಸರಕಾರ ಇದಕ್ಕೆ ಒಪ್ಪಲಿಲ್ಲ.

ಜೂ.20, 21ಕ್ಕೆ ಮತ್ತೆ ಸಭೆ
ಭಿನ್ನಾಭಿಪ್ರಾಯ ಬಗೆಹರಿಸುವ ನಿಟ್ಟಿನಲ್ಲಿ ಜೂ.20 ಮತ್ತು 21ರಂದು ಸಮಿತಿಯು ಮತ್ತೆ ಸಭೆ ಸೇರಲಿದೆ ಎಂದು ಸಮಿತಿ ಸದಸ್ಯರಾಗಿರುವ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ಹೇಳಿದ್ದಾರೆ.

ಸಹಮತ ಏರ್ಪಡದೇ ಹೋದರೆ, ಎರಡೂ ಕರಡು ಮಸೂದೆಗಳನ್ನು ಸಂಪುಟದ ಪರಿಶೀಲನೆಗಾಗಿ ಕಳುಹಿಸಿಕೊಡುತ್ತೇವೆ. ಅಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು ಸಿಬಲ್.

ಹುಟ್ಟುವ ಮುನ್ನವೇ ಲೋಕಪಾಲವನ್ನು ಕೊಲ್ಲುತ್ತಿದ್ದಾರೆ
ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ನಾಗರಿಕ ಸಮಿತಿ ಸದಸ್ಯ ಅರವಿಂದ ಕೇಜ್ರಿವಾಲ್, ಸರಕಾರವು ಲೋಕಪಾಲ ಹುಟ್ಟುವ ಮುನ್ನವೇ ಕತ್ತು ಹಿಚುಕಿ ಕೊಲೆ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇವನ್ನೂ ಓದಿ