ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೇರೆ ಪ್ರಧಾನಿಗೆ ದಿಗ್ವಿಜಯ್ ಈ ರೀತಿ ಹೇಳುತ್ತಿದ್ದರೇ?: ಆಡ್ವಾಣಿ ಪ್ರಶ್ನೆ (Advani | Lashes Out | Digvijay | Comments | Rahul)
ರಾಹುಲ್‌ ಗಾಂಧಿ ಪ್ರಧಾನಿಯಾಗುವ ಎಲ್ಲ ಅರ್ಹತೆ ಹೊಂದಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್‌ ಹೇಳಿರುವುದಕ್ಕೆ ಬಿಜೆಪಿ ಮುಖಂಡ ಎಲ್‌.ಕೆ. ಆಡ್ವಾಣಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಕ್ಷದಿಂದ ಪ್ರಧಾನಿ ಹುದ್ದೆಗೆ ನೇಮಕಗೊಂಡಿದ್ದ ಐ.ಕೆ.ಗುಜ್ರಾಲ್‌ ಅಥವಾ ದೇವೇಗೌಡ ಅವರ ವಿರುದ್ಧ ಈ ರೀತಿಯ ಹೇಳಿಕೆಗಳನ್ನು ನೀಡಿದ್ದರೆ ಯಾವುದೇ ಕಾಂಗ್ರೆಸ್‌ ಮುಖಂಡರು ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಿದ್ದರೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಈ ಕುರಿತು ತಮ್ಮ ಬ್ಲಾಗ್‌ನಲ್ಲಿ ಪ್ರತಿಕ್ರಿಯಿಸಿರುವ ಆಡ್ವಾಣಿ, ದಿಗ್ವಿಜಯ್‌ ಸಿಂಗ್‌ ಅವರ ಈ ಹೇಳಿಕೆಯು ಪ್ರಸ್ತುತ ಪ್ರಧಾನಿ ಹುದ್ದೆಯಲ್ಲಿರುವವರು ನೆಹರು ಕುಟುಂಬದ ಕುಡಿಗೆ ಕುರ್ಚಿ ಬಿಟ್ಟುಕೊಡುವುದು ಅನಿವಾರ್ಯ ಎಂಬುದರ ಸೂಚನೆ ಎಂದು ಹೇಳಿದ್ದಾರೆ.

'ಬೇರೆ ಯಾವುದೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ಪ್ರಧಾನ ಕಾರ್ಯದರ್ಶಿ ಈ ರೀತಿಯ ಹೇಳಿಕೆ ನೀಡುವ ಧೈರ್ಯ ಮಾಡುತ್ತಿದ್ದರೇ ಎಂದು ನನಗೆ ಅಚ್ಚರಿಯಾಗುತ್ತಿದೆ. ಕಮ್ಯುನಿಸ್ಟ್‌ ರಾಷ್ಟ್ರಗಳಲ್ಲಿ ಪಕ್ಷದ ಮೊದಲ ಕಾರ್ಯದರ್ಶಿ ಈ ರೀತಿ ಹೇಳಿಕೆ ನೀಡುವ ಅಧಿಕಾರ ಹೊಂದಿರುತ್ತಾರೆ, ಆದರೆ ಅವರು ಕೂಡ ಅದನ್ನು ತಮ್ಮ ವ್ಯಾಪ್ತಿ ಮೀರಿದ್ದೆಂದು ಪರಿಗಣಿಸಬಹುದಾಗಿದೆ' ಎಂದು ಆಡ್ವಾಣಿ ಹೇಳಿದ್ದಾರೆ.

ಮನಮೋಹನ ಸಿಂಗ್‌ ಅವರ ಹೊರತಾಗಿ ಈ ಹಿಂದೆ ಕಾಂಗ್ರೆಸ್‌ ಪಕ್ಷವು ಪ್ರಧಾನಿ ಹುದ್ದೆಗೆ ನೇಮಕ ಮಾಡಿದ್ದವರ ಕುರಿತು ಈವರೆಗೂ ಪಕ್ಷದ ಯಾವುದೇ ಮುಖಂಡರು ಈ ರೀತಿಯ ಹೇಳಿಕೆ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

'ವಾಸ್ತವವಾಗಿ ಡಾ. ಮನಮೋಹನ ಸಿಂಗ್‌, ಚಂದ್ರಶೇಖರ್‌, ದೇವೇಗೌಡ, ಐ.ಕೆ.ಗುಜ್ರಾಲ್‌ ಇವರೆಲ್ಲರೂ ಕಾಂಗ್ರೆಸ್‌ನಿಂದ ನೇಮಕಗೊಂಡವರೇ. ಅವರೆಲ್ಲರೂ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಯಾವುದೇ ಪ್ರಧಾನ ಕಾರ್ಯದರ್ಶಿ ಈ ರೀತಿಯ ಹೇಳಿಕೆ ನೀಡುವ ಧೈರ್ಯ ತೋರುತ್ತಿದ್ದರೇ? ಈ ರೀತಿಯ ಹೇಳಿಕೆ ನೀಡಿಯೂ ತಮ್ಮ ಸ್ಥಾನದಲ್ಲಿ ಉಳಿಯುತ್ತಿದ್ದರೇ?' ಎಂದು ಪ್ರಶ್ನಿಸಿರುವ ಆಡ್ವಾಣಿ, ಡಾ.ಮನಮೋಹನ್ ಸಿಂಗ್ ಅವರು ಇವೆಲ್ಲವನ್ನೂ ಸಹಿಸಿಕೊಂಡಿರುವುದರ ಕುರಿತ ತಮ್ಮ ಅಸಮಾಧಾನವನ್ನು ಹೊರಗೆಡಹಿದರು.

ರಾಹುಲ್‌ ಗಾಂಧಿ ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ ಎಂದು ದಿಗ್ವಿಜಯ್‌ ಸಿಂಗ್‌ ಕಳೆದ ವಾರ ಹೇಳಿದ್ದರು. ಆದರೆ ಆ ನಂತರ ಮನಮೋಹನ ಸಿಂಗ್‌ ಅವರು 'ಉತ್ತಮ ಪ್ರಧಾನಿಯಾಗಿದ್ದಾರೆ' ಎಂದು ಹೇಳಿದ್ದರು.

'ಪೂರ್ವಾಪರ ಯೋಚಿಸದೇ ಈ ಹಿಂದೆ ನೀಡಿದ್ದ ಬೇಜವಾಬ್ದಾರಿ ಹೇಳಿಕೆಯನ್ನು ಸರಿಪಡಿಸಲು ಮನಮೋಹನ ಸಿಂಗ್‌ ಅವರನ್ನು ಹೊಗಳಿದ್ದ ದಿಗ್ವಿಜಯ್‌ 'ನನ್ನ ಜೀವಿತಾವಧಿಯಲ್ಲಿ ರಾಹುಲ್‌ರನ್ನು ಪ್ರಧಾನಿಯಾಗುವುದನ್ನು ನೋಡಬೇಕೆಂಬುದು ನನ್ನಾಸೆ' ಎಂದು ನಯವಾದ ಮಾತುಗಳನ್ನಾಡಿದ್ದರು ಎಂದು ಆಡ್ವಾಣಿ ಹೇಳಿದ್ದಾರೆ.
ಇವನ್ನೂ ಓದಿ