ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೊತ್ತು ಗುರಿಯಿಲ್ಲದ ರಾಹುಲ್: ಯುವ ಕಾಂಗ್ರೆಸ್ ಮಾಜಿ ನಾಯಕ (Chamala Kiran Kumar | Former Youth Congress leader | Allegations | Rahul Gandhi)
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಹುಲ್‌ ಗಾಂಧಿ ಅವರು ಪಕ್ಷದ ವಿದ್ಯಾರ್ಥಿ ಮತ್ತು ಯುವ ವಿಭಾಗವನ್ನು ಹಾಳುಮಾಡುತ್ತಿರುವ ತಮ್ಮ ಆಪ್ತ ವಲಯವನ್ನೇ ಅತಿಯಾಗಿ ನೆಚ್ಚಿಕೊಂಡಿದ್ದಾರೆ ಎಂದು ಯುವ ಕಾಂಗ್ರೆಸ್‌ನ ಮಾಜಿ ಮುಖಂಡರೊಬ್ಬರು ಸೋಮವಾರ ಆಪಾದಿಸುವ ಮೂಲಕ ಕಾಂಗ್ರೆಸ್‌ನಲ್ಲಿ ಕೋಲಾಹಲ ಮೂಡಿಸಿದ್ದಾರೆ.

ಆದರೆ, ಈ ಆರೋಪವನ್ನು ನಿರಾಕರಿಸಿರುವ ಕಾಂಗ್ರೆಸ್‌ ಯುವ ವಿಭಾಗವು ಈ ಆಪಾದನೆಗಳು ಆಧಾರ ರಹಿತವಾಗಿದ್ದು, ರಾಜಕೀಯ ಪ್ರೇರಿತವಾಗಿವೆ ಎಂದು ಆಪಾದಿಸಿದೆ.

ಭಾರತೀಯ ಯುವ ಕಾಂಗ್ರೆಸ್‌ನ ಕೇರಳ, ಪುದುಚೇರಿ, ತಮಿಳುನಾಡು, ಅಂಡಮಾನ್‌ ಮತ್ತು ಲಕ್ಷ ದ್ವೀಪದ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಮಲಾ ಕಿರಣ್‌ ಕುಮಾರ್ ಈ ಆರೋಪ ಮಾಡಿದ್ದು, 'ರಾಹುಲ್‌ ಗಾಂಧಿ ಮನುಷ್ಯ ಸಂಬಂಧಗಳಿಂದ ದೂರವಿದ್ದಾರೆ. ಅವರಿಗೆ ತಮ್ಮ ರಾಷ್ಟ್ರೀಯ ಸಮಿತಿಯಲ್ಲಿರುವವರ ಗುರುತು ಪರಿಚಯವೇ ಇದ್ದಂತಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅವರು ಎಲ್ಲದಕ್ಕೂ ತಮ್ಮ ಬಲಗೈ ಬಂಟರನ್ನೇ ನೆಚ್ಚಿಕೊಂಡಿದ್ದಾರೆ. ಅವರೇ ಬಹುತೇಕ ಎಲ್ಲವನ್ನೂ ನಿರ್ವಹಿಸುತ್ತಾರೆ' ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರ ನೆಚ್ಚಿನ ಯೋಜನೆ 'ಆಮ್‌ ಆದ್ಮಿ ಕಾ ಸಿಪಾಹಿ (ಜನ ಸಾಮಾನ್ಯನ ಸಿಪಾಯಿ)' ಅತಿ ದೊಡ್ಡ ಫ್ಲಾಪ್‌ ಶೋ. ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್‌ನಲ್ಲಿ ಬದಲಾವಣೆ ತರುವ ಅವರ ಆಲೋಚನೆ ಉತ್ತಮವಾದದ್ದೇ. ಆದರೆ ಅದಕ್ಕಾಗಿ ಅವರು ಬಳಸಿದ ಮಾರ್ಗವು ಪಕ್ಷದ ಎರಡೂ ವಿಭಾಗಗಳನ್ನು ಅಧೋಗತಿಗೆ ತಳ್ಳಿವೆ ಎಂದು ಆಪಾದಿಸಿದ್ದಾರೆ.

ಈ ಕುರಿತು ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡಿರುವ ಯುವ ಕಾಂಗ್ರೆಸ್‌, ಚಮಾಲ ಅವರು ತಮ್ಮ ಸಂಘಟನೆಯ ಪ್ರಸ್ತುತ ಸದಸ್ಯರಲ್ಲ. ಅವರನ್ನು ಕಳೆದ ವರ್ಷದ ನವೆಂಬರ್ 17ರಂದೇ ಕೈಬಿಡಲಾಗಿತ್ತು. 'ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು, ಶಿಸ್ತು ಉಲ್ಲಂಘನೆ ಹಾಗೂ ಹುದ್ದೆಗೆ ನೇಮಿಸುವ ಸಂದರ್ಭದಲ್ಲಿ ಕ್ರಿಮಿನಲ್ ಆರೋಪಗಳಿದ್ದುದನ್ನು ಮುಚ್ಚಿಟ್ಟಿರುವುದಕ್ಕೆ ಈ ಕ್ರಮ ಕೈಗೊಳ್ಳಲಾಗಿತ್ತು' ಎಂದು ಪಕ್ಷವು ಹೇಳಿದೆ.

ರಾಹುಲ್‌ ಗಾಂಧಿ ಅವರ ಬಲಗೈ ಬಂಟರು ಕಾರ್ಪೊರೇಟ್‌ ನೀತಿಯಾದ 'ನೇಮಕಾತಿ, ಪರೀಕ್ಷೆ ಮತ್ತು ಉಚ್ಚಾಟನೆ' ಎಂಬ ನೀತಿ ಅನುಸರಿಸುತ್ತಿದ್ದು, ಇವೆಲ್ಲವೂ ಜನರು ಸ್ವಯಂ ಪ್ರೇರಿತವಾಗಿ ಕಾರ್ಯನಿರ್ವಹಿಸುವ ರಾಜಕೀಯ ಪಕ್ಷದ ಸಿದ್ಧಾಂತಕ್ಕೆ ಸರಿ ಹೊಂದುವುದಿಲ್ಲ ಎಂದು ಚಮಾಲ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂಬರುವ ಸಾರ್ವತ್ರಿಕ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಂಘಟನೆಯಲ್ಲಿದ್ದ ಶೇ.30ರಷ್ಟು ಯುವಕರಿಗೆ ಅವಕಾಶ ಕಲ್ಪಿಸುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ರಾಹುಲ್‌ ಗಾಂಧಿ ವಿಫಲರಾಗಿದ್ದಾರೆ ಎಂದು ಚಮಾಲ ಆಪಾದಿಸಿದ್ದಾರೆ.
ಇವನ್ನೂ ಓದಿ