ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣಕ್ಕೆ 2ನೇ ಸಚಿವ ಬಲಿ: ಮಾರನ್ ರಾಜೀನಾಮೆ (2G Scam | Dayanidhi Maran Resign | Telecom | Scam | DMK)
PTI
ಲಕ್ಷಾಂತರ ಕೋಟಿ ರೂಪಾಯಿ ಮೊತ್ತದ 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಮೂಲ ಆರೋಪಿ ಎಂದೇ ಹೇಳಲಾಗುತ್ತಿರುವ, ಇದೀಗ ಸಿಬಿಐ ವಿಚಾರಣೆಗೆ ಸಜ್ಜಾಗುತ್ತಿರುವ ಮಾಜಿ ಟೆಲಿಕಾಂ ಸಚಿವ, ಹಾಲಿ ಜವಳಿ ಸಚಿವ ದಯಾನಿಧಿ ಮಾರನ್ ಅವರು ಹಲವು ಪ್ರಹಸನಗಳ ನಡುವೆ ಗುರುವಾರ ತಮ್ಮ ಕೇಂದ್ರ ಮಂತ್ರಿ ಪಟ್ಟಕ್ಕೆ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ, ಪ್ರತಿಪಕ್ಷಗಳ ತೀವ್ರ ವಾಗ್ದಾಳಿಗೆ ತುತ್ತಾಗಿರುವ ಯುಪಿಎ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

2ಜಿ ಹಗರಣವು ಎರಡನೇ ಕೇಂದ್ರ ಸಚಿವರನ್ನು ಬಲಿ ತೆಗೆದುಕೊಂಡಂತಾಗಿದ್ದು, ಈ ಹಿಂದೆ ಟೆಲಿಕಾಂ ಸಚಿವ ಎ.ರಾಜಾ ಅವರು ಸಂಪುಟಕ್ಕೆ ರಾಜೀನಾಮೆ ನೀಡಬೇಕಾಗಿ ಬಂದು, ಇದೀಗ ತಿಹಾರ್ ಜೈಲಿನಲ್ಲಿದ್ದಾರೆ.

ಟೆಲಿಕಾಂ ಹಗರಣದಲ್ಲಿ ಮಾರನ್ ಪಾತ್ರವಿರುವ ಬಗ್ಗೆ ತನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಹಗರಣದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ನ್ಯಾಯಾಲಯಕ್ಕೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದ ಡಿಎಂಕೆಯ ಪ್ರಭಾವೀ ಸಂಸದ ಮಾರನ್, ತಮ್ಮ ರಾಜೀನಾಮೆ ಪತ್ರವನ್ನು ಒಪ್ಪಿಸಿದರು ಎಂದು ಮೂಲಗಳು ತಿಳಿಸಿವೆ. ಈ ಮೂಲಕ, ಕೇಂದ್ರ ಸಂಪುಟ ಪುನಾರಚನೆಯ ಹಾದಿಯೂ ಸುಗಮವಾಗಿದೆ.

2ಜಿ ಹಗರಣಕ್ಕೆ ಸಂಬಂಧಿಸಿ ಇಬ್ಬರು ಡಿಎಂಕೆ ಸಂಪುಟ ಸಚಿವರು ಪದತ್ಯಾಗ ಮಾಡಿದ್ದರಿಂದ, ತಮಿಳುನಾಡಿನ ಡಿಎಂಕೆ ಪಕ್ಷದ ಕೈಯಲ್ಲಿ ಇದೀಗ 2 ಸ್ಥಾನಗಳಿರುವಂತಾಗಿದೆ. ಒಂದು ಸ್ಥಾನಕ್ಕೆ ಟಿ.ಆರ್.ಬಾಲು ಅವರ ಹೆಸರು ಕೇಳಿಬರುತ್ತಿದೆ.

7 ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ನಿವಾಸಕ್ಕೆ ತೆರಳುವ ಸಂದರ್ಭದಲ್ಲಿ ಮಾರನ್ ಅವರು ಅದಾಗಲೇ ತಮ್ಮ ಕಾರಿನ ಕೆಂಪು ದೀಪವನ್ನು ತೆಗೆದಿದ್ದರು. ನೇರವಾಗಿ ಒಳಪ್ರವೇಶಿಸಿ, ಪ್ರಧಾನಿಯೊಂದಿಗೆ ಕೆಲವು ಕ್ಷಣ ಮಾತನಾಡಿ, ಹೊರಗೆ ಕಾಯುತ್ತಿದ್ದ ಮಾಧ್ಯಮಗಳೊಂದಿಗೆ ಏನೂ ಮಾತನಾಡದೆ ಅವರು ಹೊರ ನಡೆದರು.

ಇದಕ್ಕೆ ಮೊದಲು, ಮಹತ್ವದ ಕೇಂದ್ರ ಸಂಪುಟ ಸಭೆಗೂ ಮಾರನ್ ಹಾಜರಾಗಿದ್ದರು. ಈ ಸಭೆಯಲ್ಲಿ ಕೇಂದ್ರದ ಎಲ್ಲ ಸಚಿವರೂ ಹಾಜರಿದ್ದು, ಆದರೆ ಸಭೆಯಲ್ಲಿ ಮಾರನ್ ವಿಷಯ ಚರ್ಚೆ ಮಾಡಿಲ್ಲ ಎಂದು ಮೂಲಗಳು ಹೇಳಿವೆ. ಎಫ್ಎಂ ಕೇಂದ್ರಗಳಿಗೆ ಲೈಸೆನ್ಸ್ ನೀಡುವ ಕುರಿತು ಚರ್ಚೆ ನಡೆಯುತ್ತಿದ್ದಾಗ ಅವರು ಎದ್ದು ಹೊರ ಹೋದರು. ಇದಕ್ಕೆ ಕಾರಣವೆಂದರೆ, ಅವರ ಸಹೋದರ ಕಲಾನಿಧಿ ಮಾರನ್ (ಸನ್ ನೆಟ್‌ವರ್ಕ್) ಕೂಡ ಎಫ್ಎಂ ಸ್ಟೇಶನ್‌ಗಳನ್ನು ನಡೆಸುತ್ತಿದ್ದು, ಇದರಲ್ಲಿ ಪ್ರಭಾವ ಬೀರಿಲ್ಲ ಎಂಬ ಭಾವನೆ ಬರಲು ಅವರು ಈ ರೀತಿ ಮಾಡಿದ್ದರು ಎಂದು ಮೂಲಗಳು ಹೇಳಿವೆ.
ಇವನ್ನೂ ಓದಿ