ನಗರದ ಪಬ್ ಮೇಲೆ ಶ್ರೀರಾಮಸೇನೆ ನಡೆಸಿರುವ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘ-ಪರಿವಾರ ಕೂಡ ಈ ಹಿಂದೆ ಚರ್ಚ್ ದಾಳಿಯ ಸಂದರ್ಭದಲ್ಲಿ ಕ್ರಿಶ್ಚಿಯನ್ ಮಹಿಳೆಯರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಸಿತ್ತು. ಇದೀಗ ಶ್ರೀರಾಮಸೇನೆ ಪಬ್ ಮೇಲೆ ದಾಳಿ ನಡೆಸಿ ಹುಡುಗಿಯರ ಮೇಲೆ ದೌರ್ಜನ್ಯ ನಡೆಸಿದೆ ಎಂದು ದೂರಿದರು.
ವಿ.ಎಸ್.ಆಚಾರ್ಯ ರಾಜ್ಯದ ಅಸಮರ್ಥ ಗೃಹಮಂತ್ರಿ ಎಂದು ಟೀಕಿಸಿರುವ ಪೂಜಾರಿ, ಈ ಘಟನೆಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಹರಿಹಾಯ್ದಿದ್ದಾರೆ. ಸಂಸ್ಕೃತಿಯ ಹೆಸರಲ್ಲಿ ಬಿಜೆಪಿ, ಆರ್‌ಎಸ್‌ಎಸ್, ಶ್ರೀರಾಮಸೇನೆಗಳು ಗೂಂಡಾ ಪ್ರವೃತ್ತಿ ತೋರಿಸುತ್ತಿವೆ ಎಂದರು.
ಯಡಿಯೂರಪ್ಪ, ಆಚಾರ್ಯ ರಾಜೀನಾಮೆ ನೀಡಲಿ: ಕುಮಾರಸ್ವಾಮಿ
ಮಂಗಳೂರು ಪಬ್ ದಾಳಿ ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಘಟನೆ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಸಸಚಿವ ಆಚಾರ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕಳೆದ ಏಳು ತಿಂಗಳಿನಿಂದ ಆಡಳಿತರೂಢ ಸರ್ಕಾರ ನಡೆದುಕೊಂಡ ರೀತಿ ನೋಡಿದರೆ ಬಿಜೆಪಿ ಧೋರಣೆ ತಿಳಿಯುತ್ತದೆ. ಹೆಣ್ಣು ಮಕ್ಕಳು ಪಬ್‌ಗೆ ಹೋಗಲೇ ಬಾರದು ಎಂದಾದರೆ, ಅದಕ್ಕೆ ಇನ್ನು ಮುಂದೆ ಪಬ್‌ಗಳಿಗೆ ಯುವತಿಯರಿಗೆ ನಿಷೇಧ ಹೇರಲಾಗಿದೆ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಲಿ ಎಂದ ಕುಮಾರಸ್ವಾಮಿ, ಮೊದಲು ಗೃಹಸಚಿವ ಆಚಾರ್ಯ ಅವರ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದರು. |