ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಈಗ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದ್ದು, ಶ್ರೀರಾಮ ಸೇನೆಯವರು ನಡೆಸಿದ್ದಾರೆ ಎನ್ನಲಾದ ದಾಳಿಯನ್ನು ಈ ಹಿಂದೆ ಯಾರೂ ಮಾಡದ ಅಕ್ಷಮ್ಯ ಅಪರಾಧವೆಂಬಂತೆ ಬಿಂಬಿಸುವ ಮೂಲಕ ಕೆಲವು ರಾಜಕೀಯ ಪಕ್ಷಗಳು ಇದನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸುತ್ತಿದ್ದಾರೆ. ಕರ್ನಾಟಕ ಮಹಿಳಾ ರಕ್ಷಣಾ ವೇದಿಕೆ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ವೇದಿಕೆಯ ಅಧ್ಯಕ್ಷೆ ಭಾರ್ಗವಿ ನಾರಾಯಣ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಹಿಂದೂ ಸಂಸ್ಕೃತಿ. ಮಾತೃದೇವೋಭವ ಎಂದು ಸ್ತ್ರೀಯರನ್ನು ಪೂಜನೀಯ ಭಾವದಿಂದ ಕಾಣುವ ಸಂಸ್ಕೃತಿಯಲ್ಲಿ ಬೆಳೆದ ನಮ್ಮ ಯುವಜನತೆ ಅಶ್ಲೀಲ ಬಟ್ಟೆಗಳನ್ನು ತೊಟ್ಟು ಪಬ್‌ಗಳಿಗೆ ಹೋಗಿ, ಕುಣಿದು ಕುಪ್ಪಳಿಸುವುದು ತಪ್ಪು. ನಮ್ಮ ಸಂಸ್ಕೃತಿಯಲ್ಲಿ ಹುಡುಗಿಯರು ಹದ್ದು ಮೀರಿ ವರ್ತಿಸುವುದನ್ನು ನಿಯಂತ್ರಿಸಲು ಶ್ರೀರಾಮ ಸೇನೆ ಮುಂದಾದಾಗ ಅದನ್ನೇ ದೊಡ್ಡ ವಿಷಯವನ್ನಾಗಿ ಬಿಂಬಿಸುತ್ತಿರುವುದು ದುರದೃಷ್ಟಕರ. ಅಷ್ಟಕ್ಕೂ ಶ್ರೀರಾಮ ಸೇನೆ ಯಾವುದೇ ಯುವತಿಯರ ಮೇಲೆ ಅನಾಚಾರ ಎಸಗಿಲ್ಲ ಎಂದರು.
ಮುಂದಕ್ಕೆ ಯುವತಿಯರು ಪಬ್‌ಗಳಿಗೆ ಹೋಗಿ ಕುಣಿಯದಂತೆ ಎಚ್ಚರಿಕೆ ನೀಡಿದೆ ಅಷ್ಟೇ. ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಸಾರುವ ಜವಾಬ್ದಾರಿ ಹೊತ್ತಿರುವ ಇಂದಿನ ಯುವಜನತೆಯೇ ಇಂತಹ ತಪ್ಪು ದಾರಿಗೆ ಇಳಿದಾಗ ಅದನ್ನು ನಿಯಂತ್ರಿಸಿ ಸರಿದಾರಿಗೆ ತರುವುದು ಒಂದು ಜವಾಬ್ದಾರಿಯುತ ಸಂಘಟನೆಯ ಕಾರ್ಯ. ಅದನ್ನು ಶ್ರೀರಾಮ ಸೇನೆ. ಮಾಡಿದೆ. ಈ ವೇಳೆ ಕಾರ್ಯಕರ್ತರು ಸ್ವಲ್ಪ ಅತಿಯಾಗಿ ವರ್ತಿಸಿರಬಹುದು. ಇದಕ್ಕೆ ಸಂಬಂಧಿಸಿ ಸೇನೆಯ ಕಾರ್ಯಕರ್ತರಿಗೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಿ ಕೇಂದ್ರ ಮಟ್ಟದಲ್ಲಿ ಪ್ರಚಾರ ಕೊಡುವ ಅಗತ್ಯವಿರಲಿಲ್ಲ. ಯುವತಿಯರ ಅಸಭ್ಯ ವರ್ತನೆಯನ್ನು ಕರ್ನಾಟಕ ಮಹಿಳಾ ರಕ್ಷಣಾ ವೇದಿಕೆ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. |