ವಿಧಾನಮಂಡಲದ ಬಜೆಟ್ ಅಧಿವೇಶನ ಈ ತಿಂಗಳ 19ರಿಂದ ಆರಂಭವಾಗಲಿದ್ದು, 20ರಂದು ಬಜೆಟ್ ಮಂಡನೆಯಾಗಲಿದೆ ಎಂದು ಸರ್ಕಾರ ತಿಳಿಸಿದೆ.
ತುಮಕೂರು ನಗರಸಭೆಗೆ ಮಹಾನಗರ ಪಾಲಿಕೆ ಸ್ಥಾನಮಾನ, ಆ ಜಿಲ್ಲೆಯ ನೂರಾರು ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆ ಹಾಗೂ ವಿಜಾಪುರ ಜಿಲ್ಲೆಗೆ ಎರಡು ಏತ ನೀರಾವರಿ ಯೋಜನೆ ಸೇರಿದಂತೆ ಕೆಲ ಜಿಲ್ಲೆಗಳಿಗೆ ಸರ್ಕಾರ ಭಾರೀ ಕೂಡುಗೆ ಘೋಷಿಸಿದೆ.
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 5021 ಅರೆ ವೈದ್ಯಕೀಯ ಸಿಬ್ಬಂದಿ ನೇರ ನೇಮಕ, ಬೆಳಗಾವಿಯಲ್ಲಿ 1320 ಮೆಗಾವಾಟ್ ಶಾಖೋತ್ಪನ್ನ ಸ್ಥಾವರ ಯೋಜನೆ ಕೈಗೊಳ್ಳಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ, ಫೆ.20ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಆಗದೆ ಇದ್ದರೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು, ಚುನಾವಣೆ ಘೋಷಣೆ ಆದರೆ ನಾಲ್ಕು ತಿಂಗಳ ಅವಧಿಗೆ ಲೇಖಾನುದಾನ ಪಡೆದುಕೊಳ್ಳಲಾಗುವುದು, ಇದೆಲ್ಲದರ ಮಧ್ಯೆ ಪೂರ್ಣ ಬಜೆಟ್‌ಗೆ ಸರ್ಕಾರ ಸಿದ್ದತೆ ಮುಂದುವರಿಸಿದೆ ಎಂದು ಹೇಳಿದರು. |