ವ್ಯಾಲೆಂಟೈನ್ಸ್ ದಿನದಂದು ಎಗ್ಗಿಲ್ಲದೆ, ತಮ್ಮ ಪ್ರೀತಿ-ಪ್ರೇಮವನ್ನು ಬಹಿರಂಗವಾಗಿ ಜಗತ್ತಿಗೆ ತೋರಿಸಿಕೊಡಲು ಸಿದ್ಧವಾಗಿರುವ ಪ್ರೇಮಿಗಳೇ ಸ್ವಲ್ಪ ಯೋಚಿಸಿ. ಆ ದಿನ ಪ್ರೀತಿ-ಪ್ರೇಮದಲ್ಲಿ ತೇಲಾಡುವ ಜೋಡಿಗಳಿಗೆ ಶ್ರೀರಾಮ ಸೇನೆ ಬಲವಂತವಾಗಿ ಸ್ಥಳದಲ್ಲೇ ಮದುವೆ ಮಾಡಿಸಲಿದೆ, ಮಾತ್ರವಲ್ಲ, ಹೆತ್ತವರಿಗೂ ಎಚ್ಚರಿಕೆ ನೀಡಿ, 'ನಿಮ್ಮ ಮಕ್ಕಳು ನಿಮಗರಿವಿಲ್ಲದೆಯೇ ಮದುವೆಯಾಗುವುದು ನಿಮಗಿಷ್ಟವಿಲ್ಲದಿದ್ದಲ್ಲಿ, ಫೆ.14ರಂದು ಮನೆಯಿಂದ ಹೊರಗೆ ಹೋಗಲು ಬಿಡಬೇಡಿ' ಎಂದೂ ತಾಕೀತು ಮಾಡಿದೆ!
ಪಬ್ ದಾಳಿಗೆ ಸಂಬಂಧಿಸಿ ಬಂಧಿತರಾಗಿ ಈಗ ಶರ್ತಬದ್ಧ ಜಾಮೀನು ಮೇಲೆ ಬಿಡುಗಡೆಯಾಗಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆದ ಸಂಘಟನೆಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಶ್ರೀರಾಮ ಸೇನೆ ಕಾರ್ಯಕರ್ತರು ವ್ಯಾಲೆಂಟೈನ್ಸ್ ದಿನ ಆಚರಣೆಗೆ ಸಿದ್ಧವಾಗಿರುವ ಹೋಟೆಲ್‌ಗಳು, ಹಾಸ್ಟೆಲ್‌ಗಳು ಮತ್ತು ಕಾಲೇಜುಗಳಲ್ಲಿ ಸಕಲ ರೀತಿಯಲ್ಲಿಯೂ ಸಜ್ಜಾಗಿ ಕಾಯುತ್ತಾ ಕೂರಲಿದ್ದಾರೆ. ಇದಕ್ಕಾಗಿ ಶ್ರೀರಾಮ ಸೇನೆಯು ಐದು ತಂಡಗಳನ್ನು ಈಗಾಗಲೇ ರಚಿಸಿದೆ. ಈ ತಂಡಗಳು ಕೈಯಲ್ಲೊಂದು ರಹಸ್ಯ ಕ್ಯಾಮರಾ, ಒಬ್ಬ 'ಪುರೋಹಿತ', ಒಂದಷ್ಟು ಮಂಗಳಸೂತ್ರಗಳು ಮತ್ತು ಅರಶಿಣ-ಕುಂಕುಮ ಹಿಡಿದುಕೊಂಡು ಬೆಂಗಳೂರಿನಲ್ಲಿ 'ಪಹರೆ' ನಡೆಸಲಿವೆ!
ಯುವ ಜೋಡಿಗಳು ಡೇಟಿಂಗ್‌ನಲ್ಲಿ, ಪ್ರೀತಿಯ ಬಹಿರಂಗ ಅಭಿವ್ಯಕ್ತಿಯಲ್ಲಿ ನಿರತರಾಗಿರುವುದು ಕಂಡುಬಂದ ತಕ್ಷಣ ಅವರಿಗೆ ಮದುವೆ ಮಾಡಿಸಲಾಗುತ್ತದೆ ಎಂದು ಮುತಾಲಿಕ್ ತಿಳಿಸಿದ್ದಾರೆ.
ವಿವಾಹವನ್ನು ಕಾನೂನುಬದ್ಧವಾಗಿಸಲು ಈ ಜೋಡಿಯನ್ನು ಸಮೀಪದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದೊಯ್ಯಲಾಗುತ್ತದೆ ಎಂದು ಶ್ರೀರಾಮ ಸೇನೆಯ ಬೆಂಗಳೂರು ನಗರ ವಿಭಾಗದ ಅಧ್ಯಕ್ಷ ಟಿ.ಎಸ್.ವಸಂತ್ ಕುಮಾರ್ ಭವಾನಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವ್ಯಾಲೆಂಟೈನ್ಸ್ ಡೇ ಎಂಬುದು ಭಾರತ-ವಿರೋಧಿ ಸಂಸ್ಕೃತಿಯಾಗಿದ್ದು, ಅದನ್ನು ಆಚರಿಸುವ ಕ್ರಿಶ್ಚಿಯನ್ ಪದ್ಧತಿಯನ್ನು ತಡೆಯುವಂತೆ ಪೊಲೀಸರಿಗೆ, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಿಗೆ ಹಾಗೂ ಸರಕಾರಕ್ಕೆ ಮುತಾಲಿಕ್ ಮನವಿ ಮಾಡಿಕೊಂಡಿದ್ದು, ಈ ಬಗ್ಗೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೂ ಮನವಿಯೊಂದನ್ನು ಸಲ್ಲಿಸಲಾಗಿದೆ.
ಆದರೆ, ಇದಕ್ಕೆ ವಿರೋಧವೂ ಈಗಾಗಲೇ ಎದುರಾಗಿದೆ. ವಿದ್ಯಾರ್ಥಿಗಳನ್ನು ಮದುವೆ ಮಾಡಿಸದಂತೆ ತಡೆಯುವ ಬಗ್ಗೆ ಯೋಚನೆಯೂ ಮತ್ತೊಂದೆಡೆ ನಡೆಯುತ್ತಿದೆ.
ಲವ್ ಮಾಡುತ್ತಿದ್ದವರು ಅಪ್ರಾಪ್ತ ವಯಸ್ಸಿನವರಾಗಿದ್ದರೆ ಎಂದು ಪತ್ರಕರ್ತರು ಕೇಳಿದಾಗ ಉತ್ತರಿಸಿದ ಮುತಾಲಿಕ್, ಆ ಜೋಡಿಗಳಿಗೆ ಬುದ್ಧಿ ಮಾತು ಹೇಳಲಾಗುತ್ತದೆ ಮತ್ತು ಅವರ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಉತ್ತರಿಸಿದರು. ಆದರೆ, ಈ ರೀತಿ ನಮ್ಮ ಪ್ರತಿಭಟನೆ ವ್ಯಕ್ತಪಡಿಸುವ ವೇಳೆ ನಾವು ಯಾವತ್ತೂ ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲವೆಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ದೇಶದ ಪ್ರಜೆಯಾಗಿ, ಅಸಭ್ಯ ಎನಿಸುವ ಯಾವುದನ್ನೂ ವಿರೋಧಿಸುವುದು ನನ್ನ ಪ್ರಜಾಸತ್ತಾತ್ಮಕ ಕರ್ತವ್ಯ ಎಂದು ಮುತಾಲಿಕ್ ಹೇಳಿದ್ದಾರೆ. |