ಸರ್ಕಾರದ ವಿರುದ್ಧ, ಜನಪ್ರತಿನಿಧಿಗಳ ವಿರುದ್ಧ, ಅವ್ಯವಸ್ಥೆ ವಿರುದ್ಧ ಹೀಗೆ ಯಾವುದೇ ಸಮಸ್ಯೆ ಇರಲಿ ಅದನ್ನು ವಿರೋಧಿಸಲು ಹಲವಾರು ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಲೇ ಇರುತ್ತದೆ. ಆದರೆ ಹೈದರಾಬಾದ್-ಕರ್ನಾಟಕದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದ ಸಂಸದರು ಸಂಸತ್‌ನಲ್ಲಿ ದಿವ್ಯ ಮೌನ ವಹಿಸಿರುವುದನ್ನು ಖಂಡಿಸಿ ಗುಲ್ಬರ್ಗಾದ ಕನ್ನಡ ಸೈನ್ಯ ಕಾರ್ಯಕರ್ತರು ಸೋಮವಾರ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದ ಸಮಸ್ಯೆ ಕುರಿತು ಸಂಸತ್‌ನಲ್ಲಿ ಸರಿಯಾಗಿ ಧ್ವನಿ ಎತ್ತದೆ ನಿರ್ಲಕ್ಷ್ಯ ಧೋರಣೆ ತಾಳಿರುವುದನ್ನು ಖಂಡಿಸಿ ಎಲ್ಲಾ 28ಸಂಸದರಿಗೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ 28ಎಮ್ಮೆಗಳನ್ನು ಒಟ್ಟುಗೂಡಿಸಿ, ಒಬ್ಬೊಬ್ಬ ಸಂಸದರ ಭಾವಚಿತ್ರವನ್ನು ಒಂದೊಂದು ಎಮ್ಮೆಯ ಕೊರಳಿಗೆ ನೇತುಹಾಕುವುದಾಗಿ ತಿಳಿಸಿದ್ದು, ಕೊನೆಯಲ್ಲಿ ಪ್ರತಿಭಟನೆಯನ್ನು ವಿಡಂಬನಾತ್ಮಕವಾಗಿ ಮುಕ್ತಾಯಗೊಳಿಸಿದರು.
ಆದರೆ ಪ್ರತಿಭಟನೆ ಸಂದರ್ಭ ನಗರದ ಗೋವಾ ಕ್ರಾಸ್ ಬಳಿ ಜನಜಂಗುಳಿ ಕಂಡು ಎಮ್ಮೆಗಳು ಚೆಲ್ಲಾಪಿಲ್ಲಿಯಾಗಿ ಓಡಿದವು. ಆದರೂ ಒಂದು ಎಮ್ಮೆ ಮಾತ್ರ ಯಾವುದಕ್ಕೂ ಎದೆಗುಂದದೆ ಎಲ್ಲ ಸಂಸದರ ಭಾವಚಿತ್ರಗಳನ್ನು ತನ್ನ ಕೋಡುಗಳಿಗೆ ನೇತುಹಾಕಿಕೊಂಡು ತಲೆ ಅಲ್ಲಾಡಿಸುತ್ತ ನಿಂತಿತು. ಸೈನ್ಯದ ಅಧ್ಯಕ್ಷ ಕಟ್ಟಿಮನಿ ಎಮ್ಮೆ ಮೇಲೆ ಕುಳಿತು 371ನೇ ಕಲಂ ತಿದ್ದುಪಡಿ ಆಗಲೇಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕಲಂ ತಿದ್ದುಪಡಿ ಮಾಡುವಲ್ಲಿ ಹೈದರಬಾದ್ ಮತ್ತು ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡುತ್ತಿದೆ. ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಕೇಂದ್ರದ ಯುಪಿಎ ಸರ್ಕಾರ ಜಾರಿಗೊಳಿಸಬೇಕು. ರಾಜ್ಯದ ಸಂಸದರು ಸಂಸತ್ ಅಧಿವೇಶನದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಹೈದರಾಬಾದ್-ಕರ್ನಾಟಕದ ಸಮಸ್ಯೆ ಕುರಿತು ಸಂಸತ್‌ನಲ್ಲಿ ಸಮರ್ಥವಾಗಿ ಧ್ವನಿ ಎತ್ತದೆ, ನಿರ್ಲಕ್ಷ್ಯ ಧೋರಣೆ ತಾಳಿರುವುದನ್ನು ವಿರೋಧಿಸಿ ರಾಜ್ಯದ ಎಲ್ಲಾ 28ಸಂಸದರ ವಿರುದ್ಧ ಗುಲ್ಬರ್ಗಾ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸೈನ್ಯದ ಕಾರ್ಯಕರ್ತರ ನೆರವಿನೊಂದಿಗೆ ಪ್ರತಿಭಟನೆ ನಡೆದಿತ್ತು.
ಅಲ್ಲದೇ, ರೈಲ್ವೆ ಮತ್ತು ಕೇಂದ್ರದ ಬಜೆಟ್‌ನಲ್ಲಿಯೂ ಹೈದರಾಬಾದ್-ಕರ್ನಾಟಕದ ಬೇಡಿಕೆಯನ್ನು ಈಡೇರಿಸಿಲ್ಲ, ಅದೇ ರೀತಿ ತೆಲಂಗಾಣ ಮಾದರಿಯಂತೆ 371ನೇ ಪರಿಚ್ಛೇದವನ್ನು ತಿದ್ದುಪಡಿ ಮಾಡುವಂತೆ ಕಳೆದ ಕೆಲವು ದಶಕಗಳಿಂದ ಹೋರಾಟ ಮಾಡುತ್ತ ಬಂದಿದ್ದರೂ ಕೂಡ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತ ಬಂದಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಸಂಸದರು ಸಂಸತ್‌ನಲ್ಲಿ ಈ ಭಾಗಕ್ಕೆ ನ್ಯಾಯ ಒದಗಿಸಲು ಗಂಭೀರವಾಗಿ ಧ್ವನಿ ಎತ್ತಬೇಕಿತ್ತು. ಆದರೆ ಸಂಸದರು ಕೂಡ ಮೌನಕ್ಕೆ ಶರಣಾಗಿದ್ದರಿಂದ ಈ ರೀತಿ ಪ್ರತಿಭಟನೆ ನಡೆಸಿರುವುದಾಗಿ ಕಟ್ಟಿಮನಿ ಹೇಳಿದರು. |