ಮೈಸೂರಿನ ಕ್ಯಾತಮಾರನಹಳ್ಳಿ ಗಲಭೆಗೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್‌ರನ್ನು ಇದೀಗ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಳಿಸಲಾಗಿದ್ದು, ಪ್ರಕರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನನ್ನನ್ನು ಮೈಸೂರಿನ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ. ತಾನು ಅಲ್ಲಿ ಯಾವುದೇ ಪ್ರತಿಭಟನೆ, ರ‌್ಯಾಲಿ, ಭಾಷಣ ಅಥವಾ ಮಾಡಿರಲಿಲ್ಲ. ಈ ಗಲಭೆಯಲ್ಲಿ ತಾನು ನಿರಪರಾಧಿ. ಯಾವುದೇ ಕೈವಾಡವಿರಲಿಲ್ಲ. ಆದರೂ ವ್ಯವಸ್ಥಿತವಾಗಿ ಪ್ರಕರಣಕ್ಕೆ ನನ್ನನ್ನು ಸಿಕ್ಕಿಸಲಾಗಿದೆ ಎಂದು ಮುತಾಲಿಕ್ ತಿಳಿಸಿದ್ದಾರೆ.
ಕ್ಯಾತಮಾರನಹಳ್ಳಿ ಗಲಭೆಗೆ ಮುತಾಲಿಕ್ ಮಾಡಿದ್ದ ಪ್ರಚೋದನಕಾರಿ ಭಾಷಣ ಕಾರಣ ಎಂದಿದ್ದ ಉದಯಗಿರಿ ಪೊಲೀಸರು ಶುಕ್ರವಾರ ಅವರನ್ನು ಬೆಳಗಾವಿಯಲ್ಲಿ ಬಂಧಿಸಿದ್ದರು. ಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಆರೋಪಿ ಕೃಷ್ಣ ನೀಡಿದ ಮಾಹಿತಿಯಂತೆ ಮುತಾಲಿಕ್‌ರನ್ನು ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿರುವ ಮುತಾಲಿಕ್‌ರನ್ನು ಭಾನುವಾರ ಮೈಸೂರಿನಿಂದ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿದೆ.
ಈ ಕೆಲಸ ಮಾಡಿದ್ದು ದೇಶದ್ರೋಹಿ ಸಂಘಟನೆಗಳು. ಹಿಂದುತ್ವದ ಪರವಾಗಿ ಕಳೆದ ಹಲವಾರು ದಶಕಗಳಿಂದ ದುಡಿಯುತ್ತಿರುವ ನನ್ನಂತವರ ಬಗ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಈ ರೀತಿಯ ನೀತಿಗಳನ್ನು ಅನುಸರಿಸಬಾರದು. ಹಿಂದುತ್ವವನ್ನು ಉಳಿಸುವ ಹೋರಾಟಗಾರರಿಗೆ ಹಿಂಸೆ ನೀಡಲಾಗುತ್ತಿದ್ದು, ಬಿಜೆಪಿ ಇನ್ನಾದರೂ ಕಲಿಯಬೇಕಿದೆ ಎಂದು ಮುತಾಲಿಕ್ ತಿಳಿಸಿದ್ದಾರೆ.
ಇತ್ತೀಚೆಗೆ ಮೈಸೂರಿನ ಉದಯಗಿರಿ ಎಂಬಲ್ಲಿ ಮಸೀದಿ ಕಟ್ಟುವ ನಿವೇಶನಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ನಡೆದ ಜಗಳ ಹಿಂಸಾಚಾರಕ್ಕೆ ತಿರುಗಿ, ಘಟನೆಯಲ್ಲಿ ಇರಿತದಿಂದ ಇಬ್ಬರು, ಪೊಲೀಸ್ ಗೋಲಿಬಾರ್‌ಗೆ ಒಬ್ಬ ಬಲಿಯಾಗುವ ಮೂಲಕ ತೀವ್ರ ಹಿಂಸಾಚಾರ ನಡೆದಿತ್ತು.
ಈ ಘಟನೆಗೂ 3 ತಿಂಗಳ ಮುನ್ನ ಕ್ಯಾತಮಾರನಹಳ್ಳಿಯಲ್ಲಿನ ದೇವಾಲಯಗಳ ಮೂರ್ತಿಗಳನ್ನು ಹಾಳುಗೆಡವಲಾಗಿತ್ತು. ಈ ಸಂದರ್ಭದಲ್ಲಿ ಒಂದು ವಾರಗಳ ಕಾಲ ನಿಷೇಧಾಜ್ಞೆ ಹೇರಲಾಗಿತ್ತು. ಘಟನೆಯ ನಂತರ ಮುತಾಲಿಕ್ ಅವರು ಕ್ಯಾತಮಾರನಹಳ್ಳಿಗೆ ಭೇಟಿ ನೀಡಿದ್ದರು. ಅಲ್ಲದೇ ಘಟನೆ ಕುರಿತಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಮತ್ತು ಸರ್ಕಾರ ವಿಫಲವಾಗಿರುವುದಾಗಿ ಆರೋಪಿಸಿ, ಇದಕ್ಕೆ ನಾವು ಕೂಡ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಚೋದನಾಕಾರಿ ಮಾತನ್ನು ಆಡಿದ್ದರು.
|