ಮಹಾನ್ ದಾರ್ಶನಿಕರಾಗಿರುವ ಸರ್ವಜ್ಞ ಹಾಗೂ ತಿರುವಳ್ಳುವರ್ ಅವರುಗಳು ಯಾವುದೇ ಭಾಷೆ, ಧರ್ಮ ಹಾಗೂ ರಾಜ್ಯಕ್ಕೆ ಸೀಮಿತರಾದವರಲ್ಲ. ಅವರು ವಿಶ್ವಮಾನ್ಯರು ಎಂದು ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಹೇಳಿದರು. ಅವರು ಭಾನುವಾರ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡುತ್ತಿದ್ದರು.
ಪ್ರತಿಮೆ ಅನಾವರಣಗೊಳ್ಳಲು ಕಾರಣೀಭೂತರಾದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮನದುಂಬಿ ಅಭಿನಂದಿಸಿದ ಕರುಣಾನಿಧಿ ಅವರು ಪ್ರತಿಮೆ ಅನಾವರಣದ ಮೂಲಕ ತನ್ನ ಬಹುದಿನಗಳ ಆಸೆ ನೆರವೇರಿದಂತಾಗಿದೆ ಎಂದು ಭಾವುಕರಾಗಿ ನುಡಿದರು.
ಹದಿನೆಂಟು ವರ್ಷಗಳ ಹಿಂದೆ ಮಾಡಿದ್ದ ಶಪಥ ಇಂದು ನೆರವೇರಿದೆ. ಬೆಂಗಳೂರಿನಲ್ಲಿ ಕವಿ ತಿರುವಳ್ಳುವರ್ ಪ್ರತಿಮೆಗೆ ಹೊದಿಸಿರುವ ಮುಸುಕು ತೆಗೆಯುವ ತನಕವೂ ಬೆಂಗಳೂರಿನ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದೆ, ಇಂದು ಪ್ರತಿಮೆ ಅನಾವರಣದ ಮೂಲಕ ಬಹುದಿನಗಳ ಆಸೆ ನೆರವೇರಿದೆ ಎಂದು ಕರುಣಾನಿಧಿ ಹೇಳಿದರು.
ಬೆಂಗಳೂರಿನಲ್ಲಿ ತಿರುವಳ್ಳುವರ್ ಹಾಗೂ ಚೆನ್ನೈನಲ್ಲಿ ಕನ್ನಡದ ಕವಿ ಸರ್ವಜ್ಞರ ಪ್ರತಿಮೆಗಳು ಅನಾವರಣಗೊಂಡರೆ ಸಾಲದು, ಉಭಯ ರಾಜ್ಯದ ಜನತೆಯ ಮನಸುಮನಸುಗಳು ಅನಾವರಣಗೊಳ್ಳಬೇಕು, ನಾವು ನೀವು ಸೋದರರೆಂಬ ಭಾವನೆ ಗಟ್ಟಿಗೊಳ್ಳಬೇಕು ಎಂದು ಅವರು ಆಶಿಸಿದರು.
ತಮಿಳ್ನಾಡಿನಲ್ಲಿ ಸರ್ವಜ್ಞ ಪ್ರತಿಮೆ ಅನಾವರಣವನ್ನು ಯಾರೂ ವಿರೋಧಿಸಿಲ್ಲ ಅಲ್ಲದೆ, ಅವರ ವಚನಗಳ ಅನುವಾದಕ್ಕೂ ಯಾವುದೇ ಪ್ರತಿರೋಧ ವ್ಯಕ್ತವಾಗಿಲ್ಲ ಎಂದು ತಮಿಳ್ನಾಡು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ವಯಸ್ಸೆಷ್ಟು? ಭಾಷಣದ ಮಧ್ಯದದಲ್ಲಿ ಯುಡಿಯೂರಪ್ಪ ಅವರಬಳಿ ವಯಸ್ಸೆಷ್ಟೆಂದು ಕೇಳಿದ ಕರುಣಾನಿಧಿ, ತನಗೆ 86 ಅವರಿಗೆ 67. ವಯಸ್ಸಿನಲ್ಲಿ ಅವರಿಗಿಂತ 19 ವರ್ಷ ದೊಡ್ಡವನಾಗಿದ್ದು, ಅವರು ನನ್ನ ತಂಬಿ (ತಮ್ಮ) ಎಂದರು. ಕಿರಿಯರಾದ ಯಡಿಯೂರಪ್ಪ ಅತ್ಯತ್ತಮ ಯಶಸ್ವೀ ಕಾರ್ಯಕ್ರಮ ಏರ್ಪಡಿಸಿದ್ದು, ಅವರನ್ನು ಅಭಿನಂದಿಸುತ್ತೇನೆ ಎಂದು ನುಡಿದರು.
ಜನರು ಇಲ್ಲಿ ಯಡಿಯೂರಪ್ಪರನ್ನು ಹಾಗೂ ಅಲ್ಲಿ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವ ಕಾರಣ 18 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರತಿಮೆ ಅನಾವರಣ ಇಂದು ಕಾರ್ಯರೂಪಕ್ಕೆ ಬಂದಿದೆ ಎಂದು ವಿಶ್ಲೇಷಿದರು.
NRB
ಆಡುಮುಟ್ಟದ ಸೊಪ್ಪಿಲ್ಲ ಸರ್ವಜ್ಞ ತಿಳಿಯದ ವಿಷಯವಿಲ್ಲ ಎಂದು ತಮ್ಮ ಭಾಷಣದಲ್ಲಿ ಸರ್ವಜ್ಞರ ತ್ರಿಪದಿಗಳನ್ನು ಉಲ್ಲೇಖಿಸಿದ ಕರುಣಾನಿಧಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ರಂಗ ಸಜ್ಜುಮಾಡುವ ಮೂಲಕ ಯಡಿಯೂರಪ್ಪ ಹೊಸ ಇತಿಹಾಸ ನಿರ್ಮಿಸಿದ್ದಾರೆ ಎಂದು ನುಡಿದರು.
ಕನ್ನಡ ಸಂಘಗಳಿಗೆ ಆಹ್ವಾನ ಇದೇ ವೇಳೆ ಅತ್ಯಂತ ಹರ್ಷಚಿತ್ತರಾಗಿದ್ದ ಕರುಣಾನಿಧಿ ತನ್ನ ಭಾಷಣದುದ್ದಕ್ಕೂ ಯುಡಿಯೂರಪ್ಪರನ್ನು ಹೊಗಳುತ್ತಾ, ಚೆನ್ನೈಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಕನ್ನಡಿಗರು ಬರಬೇಕೆಂದು ಆಹ್ವಾನೀಡಿದರು. ಅಲ್ಲಿ ಪ್ರತಿಮೆ ಅನಾವರಣಕ್ಕೆ ಯಾರ ವಿರೋಧವೂ ಇಲ್ಲ ಎಂದೂ ಅವರು ನುಡಿದರು.
ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ವಿರೋಧ ಸೂಚಿಸಿರುವ ಕನ್ನಡ ಸಂಘಟನೆಗಳವರನ್ನು ಸರ್ವಜ್ಞ ಪ್ರತಿಮೆ ಅನಾವರಣ ಸಮಾರಂಭಕ್ಕೆ ಈ ಸಂದರ್ಭದಲ್ಲಿ ಕರುಣಾನಿಧಿ ಸ್ವಾಗತಿಸಿದರು. ತಿರುವಳ್ಳುವರ್ ಹಾಗೂ ಸರ್ವಜ್ಞ ಇಬ್ಬರೂ ಶ್ರೇಷ್ಠ ದಾರ್ಶನಿಕರು. ಈ ಇಬ್ಬರೂ ಸಂತರನ್ನು ಭಾಷೆ, ಗಡಿಗಳಿಗೆ ಸೀಮಿತಗೊಳಿಸದೆ ಅದನ್ನು ಮೀರಿ ನೋಡಬೇಕು ಎಂದು ಅವರು ಮನವಿ ಮಾಡಿದರು.
ತನ್ನ ಭಾಷಣದ ಮಧ್ಯಮಧ್ಯ ಕನ್ನಡ ಶಬ್ದಗಳನ್ನು ಸೇರಿಸುತ್ತಾ ಕರುಣಾನಿಧಿ ಅವರು ತ್ರಿಪದಿಗಳನ್ನು ಉಲ್ಲೇಖಿಸಿದಾಗ ನೆರೆದ ಜನತೆ ಕರತಾಡನ, ಶಿಳ್ಳೆಯ ಮೂಲಕ ತಮ್ಮ ಸಂತೋಷ ವ್ಯಕ್ತಪಡಿಸುತ್ತಿರುವುದು ಕಂಡು ಬರುತ್ತಿತ್ತು.