ಬಂಟ್ವಾಳದ ಶ್ರೀವೆಂಕಟರಮಣ ಸ್ವಾಮಿ(ಎಸ್‌ವಿಎಸ್) ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿ ಆಯೇಷಾಗೆ ಸ್ಕಾರ್ಫ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ಮಾಡಿಕೊಡುವ ಮೂಲಕ ಬುರ್ಖಾ ಹಾಗೂ ಸ್ಕಾರ್ಫ್ ವಿವಾದ ಕೊನೆಗೂ ಅಂತ್ಯ ಸುಖಾಂತ್ಯ ಕಂಡಂತಾಗಿದೆ.
ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಕಚೇರಿಯಲ್ಲಿ ಕುಲಪತಿ ಪ್ರೊ.ಕೆ.ಎಂ.ಕಾವೇರಿಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆ 'ಸ್ಕಾರ್ಫ್ ವಿವಾದ'ಕ್ಕೆ ಅಂತ್ಯ ಹಾಡಿದೆ.
ಕಾಲೇಜಿನಲ್ಲಿ ಶೀಘ್ರವೇ ಸಮವಸ್ತ್ರ ನೀತಿ ಜಾರಿಗೊಳಿಸಲಿದ್ದು, ಆಗ ಸಮವಸ್ತ್ರ ಬಣ್ಣದ ದುಪ್ಪಟ್ಟಾವನ್ನೇ ಸ್ಕಾರ್ಫ್ ಆಗಿ ಬಳಸಬಹುದು ಎಂಬ ಷರತ್ತಿನೊಂದಿಗೆ ಎಸ್‌ವಿಎಸ್ ಕಾಲೇಜಿನ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಲಪತಿ ಕಾವೇರಿಯಪ್ಪ, ಆಯೇಷಾ ಮಾತ್ರವಲ್ಲದೆ ಕಾಲೇಜಿನ ಇತರೆ ವಿದ್ಯಾರ್ಥಿಗಳು ಇಷ್ಟಪಟ್ಟರೆ ಸ್ಕಾರ್ಫ್ ಧರಿಸಿ ಕಾಲೇಜಿಗೆ ಬರಬಹುದು ಎಂದರು.
ಎಸ್‌ವಿಎಸ್ ಕಾಲೇಜಿನಲ್ಲಿಯೇ ಆಯೇಷಾ ಶಿಕ್ಷಣ ಮುಂದುವರಿಸಲು ಇಚ್ಛಿಸಿದಲ್ಲಿ ಅವಕಾಶ ಮುಕ್ತವಾಗಿದೆ. ಬೇರೆ ಕಾಲೇಜಿಗೆ ಹೋಗುತ್ತೇನೆ ಎಂದಲ್ಲಿ ಅದಕ್ಕೆ ವಿಶ್ವವಿದ್ಯಾಲಯ ಅವಕಾಶ ಮಾಡಿಕೊಡಲಿದೆ. ಹಾಗಾದಲ್ಲಿ ಎಲ್ಲಾ ಶುಲ್ಕವನ್ನೂ ವಾಪಸ್ ಮಾಡಲು ಆಡಳಿತ ಮಂಡಳಿಯೂ ಒಪ್ಪಿದೆ ಎಂದು ವಿವರಿಸಿದೆ.
ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸುತ್ತಿದ್ದು, ವಿದ್ಯಾರ್ಥಿನಿಯರು ಚೂಡಿದಾರ್ ಮತ್ತು ದುಪ್ಪಟ್ಟವನ್ನೂ, ವಿದ್ಯಾರ್ಥಿಗಳು ಪ್ಯಾಂಟ್-ಶರ್ಟ್ ಅನ್ನು ಧರಿಸಬೇಕು. ವಿದ್ಯಾರ್ಥಿನಿಯರು ದುಪ್ಪಟ್ಟಾವನ್ನೇ ಸ್ಕಾರ್ಫ್ ಆಗಿ ಬಳಕೆ ಮಾಡಬಹುದು ಎಂದು ಎಸ್‌ವಿಎಸ್ ಕಾಲೇಜಿನ ವಕ್ತಾರ ಗಣೇಶ್ ಪ್ರಭು ತಿಳಿಸಿದ್ದಾರೆ.