ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಲಪ್ರಳಯ: ಸಾವಿನ ಸಂಖ್ಯೆ 226, ನೆರವಿನ ಮಹಾಪೂರ (Flood Fury in Karnataka, Death Toll raises to 226, Relief, Chief Minister, Yaddyurappa)
Feedback Print Bookmark and Share
 
ಬೆಂಗಳೂರು: ಕಳೆದ ವಾರ ಕಾಡಿದ ಭೀಕರ ಪ್ರವಾಹದಿಂದಾಗಿ ಸುಮಾರು ಏಳು ಲಕ್ಷ ಜನರ ಬದುಕು ಮೂರಾಬಟ್ಟೆಯಾಗಿದ್ದರೆ, ಶುಕ್ರವಾರವೂ ನಾಲ್ಕು ಮಂದಿ ಸಾವನ್ನಪ್ಪುವುದರೊಂದಿಗೆ ರಾಜ್ಯದಲ್ಲಿ ಅತಿವೃಷ್ಟಿ ಪರಿಣಾಮ ಸಾವಿಗೀಡಾದವರ ಸಂಖ್ಯೆ 226ಕ್ಕೆ ಏರಿದೆ.

ಬಳ್ಳಾರಿ, ಕೊಪ್ಪಳ, ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳಿಂದ ಈ ನಾಲ್ಕು ಸಾವುಗಳು ವರದಿಯಾಗಿವೆ. ಐದು ಲಕ್ಷಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿದ್ದು, ಮನೆ-ಮಠ ಕಳೆದುಕೊಂಡವರು ಅವರಿಗಾಗಿ ಸ್ಥಾಪಿಸಲಾಗಿರುವ 1722 ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆಯಬೇಕಾದ ಸ್ಥಿತಿಗೆ ತಲುಪಿದ್ದಾರೆ.

ಕಳೆದ ವಾರ ಐದು ದಿನಗಳಲ್ಲಿ ಉತ್ತರ ಕರ್ನಾಟಕದ 16 ಜಿಲ್ಲೆಗಳಲ್ಲಿ ನೂರು ವರ್ಷಗಳಲ್ಲೇ ಅತಿ ಭೀಕರ ಎನಿಸಬಹುದಾದ ಈ ಪ್ರವಾಹದಲ್ಲಿ 12 ಲಕ್ಷ ಹೆಕ್ಟೇರುಗಳಷ್ಟು ಬೆಳೆ ನಷ್ಟವಾಗಿದೆ.

ಆರಂಭಿಕ ಅಂದಾಜಿನ ಪ್ರಕಾರ ಒಟ್ಟು 17 ಸಾವಿರ ಕೋಟಿ ರೂ. ನಷ್ಟ ಅಂದಾಜಿಸಲಾಗಿದ್ದು, ತಕ್ಷಣವೇ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಸರಕಾರವು ಕೇಂದ್ರವನ್ನು ಈಗಾಗಲೇ ಆಗ್ರಹಿಸಿದೆ.

ಈ ಮಧ್ಯೆ, ಮೂರನೇ ದಿನವೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಸೇರಿ, ನೆರೆ ಪರಿಹಾರ ನಿಧಿ ಸಂಗ್ರಹಿಸಲು ಬೆಂಗಳೂರಿನಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ, ಈ ಪಾದಯಾತ್ರೆಯಲ್ಲಿ ಸುಮಾರು 800 ಕೋಟಿ ರೂ. ಸಂಗ್ರಹವಾಗಿದ್ದು, ರಾಜ್ಯದ ಜನತೆ ಉದಾರವಾಗಿ ಧನ ಸಹಾಯ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು ಕೂಡ ಪಾದ ಯಾತ್ರೆ ನಡೆಸಿ, ನೆರೆ ಪರಿಹಾರ ನಿಧಿ ಮತ್ತು ಪರಿಹಾರ ವಸ್ತುಗಳನ್ನು ಸಂಗ್ರಹ ನಡೆಸುತ್ತಿದ್ದಾರೆ.

ಸಂತ್ರಸ್ತರಿಗಾಗಿ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ 30 ಕೋಟಿ ರೂ. ಘೋಷಿಸಿದೆ. ಅದೇ ರೀತಿ ಬಯೋಟೆಕ್ ದಿಗ್ಗಜ ಸಂಸ್ಥೆ ಬಯೋಕಾನ್ ಕೂಡ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 30 ಕೋಟಿ ರೂ. ಘೋಷಿಸಿದೆ ಮತ್ತು 3000 ಮನೆಗಳ ನಿರ್ಮಾಣಕ್ಕೆ ನೆರವು ಪ್ರಕಟಿಸಿದೆ.

ರಾಜ್ಯ ಸರಕಾರಿ ವೈದ್ಯರ ಒಕ್ಕೂಟದ ತಂಡವು ನೆರೆ ಪೀಡಿತ ಗ್ರಾಮಗಳಲ್ಲಿ ಮೊಕ್ಕಾಂ ಹೂಡಿದ್ದು, ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ, ಅನಾರೋಗ್ಯ ಪೀಡಿತರಿಗೂ ಶುಶ್ರೂಷೆ ನೀಡುತ್ತಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಶನಿವಾರ ರಾಜ್ಯಕ್ಕೆ ಆಗಮಿಸಿ, ನೆರೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಮತ್ತು ಕೇಂದ್ರದಿಂದ ಸಮರ್ಪಕ ಪ್ರಮಾಣದ ಪರಿಹಾರ ಘೋಷಿಸುವ ನಿರೀಕ್ಷೆ ಕನ್ನಡಿಗರದು.
ಸಂಬಂಧಿತ ಮಾಹಿತಿ ಹುಡುಕಿ