ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮನೆಯಿಲ್ಲ, ಆಹಾರವಿಲ್ಲ, ನಗರಗಳಿಗೆ ಸಂತ್ರಸ್ತರ ವಲಸೆ (Karnataka | Susheela | Bangalore | Floods)
Feedback Print Bookmark and Share
 
ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದ ಸಂತ್ರಸ್ತರಾದ ಅನೇಕ ಜನರು ಬೇರಾವುದೇ ದಾರಿ ಕಾಣದೇ ಕೆಲಸ ಹುಡುಕಿಕೊಂಡು ಗುಳೆ ಹೋಗುತ್ತಿದ್ದಾರೆ. 40 ವರ್ಷ ವಯಸ್ಸಿನ ವಿಧವೆ ಪಿ.ಸುಶೀಲ ತನ್ನ ಇಬ್ಬರು ಮಕ್ಕಳ ಹೊಟ್ಟೆ ಹೊರೆಯುವ ಸಲುವಾಗಿ ಹುಟ್ಟೂರಾದ ಚಿಂತಾಮಂಡೊಡ್ಡಿ ಗ್ರಾಮಕ್ಕೆ ವಿದಾಯ ಹೇಳಿ ಕೆಲಸ ಹುಡುಕಿಕೊಂಡು ದೂರದ ಬೆಂಗಳೂರಿಗೆ ಆಗಮಿಸಿದ್ದಾರೆ.

'ನಮ್ಮ ಮನೆ ಸಂಪೂರ್ಣ ನಾಶವಾಗಿದೆ. ಪ್ರವಾಹಗಳಿಂದ ಜಮೀನಿನ ಬೆಳೆಗಳು ನಾಶವಾಗಿವೆ. ನನ್ನ ಇಬ್ಬರು ಮಕ್ಕಳ ಹೊಟ್ಟೆಹೊರೆಯಲು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ತೆರಳಿದ್ದಾಗಿ' ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಸುಶೀಲ ಕಣ್ಣೀರನ್ನು ಒರೆಸಿಕೊಂಡು ಹೇಳಿದರು. ರಾಯಚೂರು ಜಿಲ್ಲೆಗೆ ಸೇರಿದ ಸುಶೀಲ ಉತ್ತರಕರ್ನಾಟಕಕ್ಕೆ ಅಪ್ಪಳಿಸಿದ ಪ್ರವಾಹಗಳಿಂದ ಸಂತ್ರಸ್ತರಾದ ಸಾವಿರಾರು ಜನರ ಸಾಲಿಗೆ ಸೇರಿದ್ದಾರೆ.

ಉತ್ತರಕರ್ನಾಟಕದಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯದ ಸಂದರ್ಭದಲ್ಲಿ ಮನೆಗಳನ್ನು, ಬೆಳೆಗಳನ್ನು ಕಳೆದುಕೊಂಡ ಅನೇಕ ಮಂದಿ ಜೀವನೋಪಾಯಕ್ಕಾಗಿ ಗ್ರಾಮಗಳನ್ನು ತೊರೆದು ಗುಳೆ ಹೋಗಿದ್ದನ್ನು ಕಂಡೆವು ಎಂದು ಬೆಂಗಳೂರಿನ ಅಂತಾರಾಷ್ಟ್ರೀಯ ಎನ್‌ಜಿಒ ಆಕ್ಷನ್‌ಏಡ್ ಪ್ರಾದೇಶಿಕ ಮ್ಯಾನೇಜರ್ ಕ್ಷಿತಿಜ್ ಅರಸ್ ತಿಳಿಸಿದ್ದಾರೆ.ಆಕ್ಷನ್‌ಏಜ್ ಅಂದಾಜು ಮಾಡಿರುವ ಪ್ರಕಾರ, ಸುಮಾರು 1.5 ದಶಲಕ್ಷ ಪ್ರವಾಹ ಸಂತ್ರಸ್ತರು ಹಸಿವು ಮತ್ತು ಆಹಾರಕೊರತೆಯಿಂದ ನರಳುತ್ತಿದ್ದಾರೆಂದು ವರದಿಯಾಗಿದೆ.

ಪ್ರವಾಹಪೀಡಿತರು ನೆರೆಯ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಕೂಡ ವಲಸೆ ಹೋಗುತ್ತಿದ್ದಾರೆಂದು ಎನ್‌ಜಿಒಗಳು ತಿಳಿಸಿವೆ. ಪ್ರವಾಹಪ್ರಕೋಪದಿಂದ ಸುಮಾರು 18 ದಶಲಕ್ಷ ಜನರು ಪೀಡಿತರಾಗಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ರಾಜ್ಯಸರ್ಕಾರವೇನೊ ಹೇಳುತ್ತಿದೆ.

ಇವೆಲ್ಲದರ ನಡುವೆಯ‌ೂ ಜನರು ಹುಟ್ಟೂರುಗಳನ್ನು ತೊರೆದು ಗುಳೆಹೋಗುತ್ತಿರುವುದು ಪರಿಹಾರ, ಪುನರ್ವಸತಿ ಕ್ರಮಗಳು ಎಲ್ಲ ಜನರನ್ನೂ ತಲುಪಿಲ್ಲ ಎನ್ನುವುದಕ್ಕೆ ಸಾಕ್ಷಿ ಒದಗಿಸಿದೆ. 'ಪ್ರವಾಹ ಸಂತ್ರಸ್ತರಿಗೆ ಆಹಾರ ಮತ್ತು ಬಟ್ಟೆ ವಿತರಣೆ ಕ್ರಮ ಕೈಗೊಳ್ಳುತ್ತಿದ್ದು, ಮನೆ ಕಳೆದುಕೊಂಡವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಜನರು ಭಯದಿಂದ ವಲಸೆ ಹೋಗುತ್ತಿದ್ದು, ನಾವು ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ಎಲ್ಲ ನೆರವು ನೀಡುವುದಾಗಿ' ಗೃಹಸಚಿವ ವಿ.ಎಸ್.ಆಚಾರ್ಯ ವರದಿಗಾರರಿಗೆ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ