ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪರಿಹಾರ ಕೇಳಲು ರಾಜ್ಯಕ್ಕೆ ನೈತಿಕ ಹಕ್ಕಿಲ್ಲ: ದೇಶಪಾಂಡೆ (Karnataka | Congress | RV Deshpande | Yediyurappa)
Feedback Print Bookmark and Share
 
ಪ್ರವಾಹ ಸಂತ್ರಸ್ತರಿಗೆಂದು ಕೇಂದ್ರ ಸರಕಾರ ನೀಡಿರುವ ಹಣವನ್ನೇ ಸಮರ್ಪಕವಾಗಿ ಬಳಸಲು ರಾಜ್ಯಕ್ಕೆ ಸಾಧ್ಯವಾಗಿಲ್ಲ. ಹಾಗಿದ್ದ ಮೇಲೆ ಹೆಚ್ಚುವರಿ ಪರಿಹಾರ ಕೇಳಲು ಇವರಿಗೆ ನೈತಿಕವಾಗಿ ಹಕ್ಕಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಪ್ರಶ್ನಿಸಿದ್ದಾರೆ.

ವಿಜಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರ ಸರಕಾರ ನೀಡಿದ 1,000 ಕೋಟಿ ರೂ. ಪರಿಹಾರದಲ್ಲಿ ಇನ್ನೂ 337 ಕೋಟಿ ರೂಪಾಯಿಗಳನ್ನು ಬಳಸಿಲ್ಲ. ಬೆನ್ನಿಗೆ 10,000 ಕೋಟಿ ಪರಿಹಾರ ಕೇಳುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ನೈತಿಕ ಹಕ್ಕಿಲ್ಲ ಎಂದರು.

ಪ್ರಧಾನ ಮಂತ್ರಿಗಳು ಪ್ರವಾಹದ ವೈಮಾನಿಕ ಸಮೀಕ್ಷೆ ನಡೆಸಿದ ಬೆನ್ನಿಗೆ 1,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. 12ನೇ ಹಣಕಾಸು ಯೋಜನೆಯಂತೆ ಸಿಆರ್ಎಫ್ ಅಡಿಯಲ್ಲಿ 104 ಕೋಟಿ, ಎಸ್‌ಸಿಸಿಐ ಅಡಿಯಲ್ಲಿ 83 ಕೋಟಿ ಬಿಡುಗಡೆಯಾಗಿದೆ. 2007-08ರ ಅವಧಿಯಲ್ಲಿ ಕೇಂದ್ರವು ಬಿಡುಗಡೆ ಮಾಡಿದ್ದ 157 ಕೋಟಿ ರೂಪಾಯಿ ಇನ್ನೂ ಖರ್ಚಾಗಿಲ್ಲ. ಅಂದರೆ ರಾಜ್ಯದ ಬಳಿ 1344 ಕೋಟಿ ರೂಪಾಯಿ ಹಣವಿತ್ತು. ಇದನ್ನು ಬಳಕೆ ಮಾಡದೆ ಕೇಂದ್ರಕ್ಕೆ ನಿಯೋಗ ಒಯ್ಯುವುದು ಎಷ್ಟು ಸರಿ ಎಂದು ಅವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಸರಕಾರಕ್ಕೆ ಅನುಭವದ ಕೊರತೆ...
ಈ ಸರಕಾರಕ್ಕೆ ಅನುಭವದ ಕೊರತೆಯಿದೆ. ಇಂತಹ ವಿಪತ್ತಿನ ಪರಿಸ್ಥಿತಿಯನ್ನು ನಿಭಾಯಿಸುವ ಯಾವೊಬ್ಬ ವ್ಯಕ್ತಿಯೂ ಸರಕಾರದಲ್ಲಿ ನನಗೆ ಗೋಚರಿಸುತ್ತಿಲ್ಲ. ಎಲ್ಲರೂ ಒಟ್ಟಾಗಿ ಮಾಡಬೇಕಾಗಿರುವ ಪರಿಹಾರ ಕಾರ್ಯವನ್ನು ಮುಖ್ಯಮಂತ್ರಿಯವರು ತನ್ನೊಬ್ಬನ ಜವಾಬ್ದಾರಿ ಎಂದು ಭಾವಿಸಿದ್ದಾರೆ. ಇವೇ ಮೂಲ ಸಮಸ್ಯೆಗಳು ಎಂದು ದೇಶಪಾಂಡೆ ಬೆಟ್ಟು ಮಾಡಿದರು.

ಕಾಂಗ್ರೆಸ್ ನೀಡಿದ ಯಾವುದೇ ಸಲಹೆಗಳನ್ನು ಯಡಿಯೂರಪ್ಪನವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪ್ರವಾಹದಿಂದ ಉತ್ತರ ಕರ್ನಾಟಕ ಮುಳುಗೇಳುತ್ತಿದ್ದ ಸಂದರ್ಭದಲ್ಲೇ ಕೆಪಿಸಿಸಿ ಸಮೀಕ್ಷೆ ನಡೆಸಿ ವರದಿಯನ್ನು ಸರ್ವಪಕ್ಷಗಳ ಸಭೆಯಲ್ಲಿ ಮುಖ್ಯಮಂತ್ರಿಗೆ ನೀಡಿತ್ತು. ಆದರೆ ಇವ್ಯಾವುವೂ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ