ಬಳ್ಳಾರಿ ರೆಡ್ಡಿ ಸಹೋದರರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಡುವಿನ ಜಟಾಪಟಿ ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ಬಳ್ಳಾರಿಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿಸಿಎಫ್ ಸೇರಿದಂತೆ ಮೂರು ಮಂದಿ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಬುಧವಾರ ದಿಢೀರ್ ವರ್ಗಾವಣೆ ಆದೇಶ ಹೊರಡಿಸುವ ಮೂಲಕ ಸಿಎಂ ಭಿನ್ನಮತೀಯರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ರೆಡ್ಡಿ ಸಹೋದರರ ಸವಾಲಿಗೆ ತಿರುಗೇಟು ಎಂಬಂತೆ ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಶಿವಪ್ಪ ಹಾಗೂ ಡಿಸಿಎಫ್ ಮುತ್ತಯ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ. ಏತನ್ಮಧ್ಯೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರುಮಾಳ್ ಅವರನ್ನೂ ಕೂಡ ವರ್ಗಾಯಿಸಲಾಗಿದೆ.
ರೆಡ್ಡಿ ಸಹೋದರರ ಒತ್ತಡದ ಮೇಲೆ ನೇಮಕಗೊಂಡಿದ್ದ ಎಸ್ಪಿ, ಡಿಸಿ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ದಿಢೀರ್ ವರ್ಗ ಮಾಡುವ ಮೂಲಕ ಮುಖ್ಯಮಂತ್ರಿಗಳು ತಮ್ಮ ತಿರುಗೇಟನ್ನು ನೀಡಿದ್ದಾರೆ. ವರ್ಗಾವಣೆಗೊಂಡ ಅಧಿಕಾರಿಗಳು ಇಂದೇ ಅಧಿಕಾರವನ್ನು ವಹಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ನೆರೆ ಸಂತ್ರಸ್ತರಿಗೆ 500ಕೋಟಿ ರೂಪಾಯಿ ವೆಚ್ಚದಲ್ಲಿ 50ಸಾವಿರ ಮನೆಗಳನ್ನು ನಿರ್ಮಿಸಿಕೊಡುವ ಬೃಹತ್ ಯೋಜನೆಗೆ ಬುಧವಾರ ಚಾಲನೆ ನೀಡಲಾಗುವುದು ಎಂದು ಸಚಿವ ಜನಾರ್ದನ ರೆಡ್ಡಿ ಮಂಗಳವಾರ ತಿಳಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪ ಬರಲಿ, ಬಾರದಿರಲಿ ಕಂದಾಯ ಸಚಿವ ಕರುಣಾಕರ ರೆಡ್ಡಿ ನೇತೃತ್ವದಲ್ಲಿ ಈ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದ್ದರು.