ಸುಗಮ ಸಂಗೀತ ಲೋಕದ ಕಂಚಿನ ಕಂಠದ ಗಾಯಕ ಸಿ.ಅಶ್ವತ್ಥ್ (70ವ) ಮಂಗಳವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಶ್ವತ್ಥ್ ಅವರು ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಇಂದು ತಮ್ಮ ಗಾನ ನಿಲ್ಲಿಸಿದ್ದಾರೆ. ತಮ್ಮ 71ನೇ ಹುಟ್ಟು ಹಬ್ಬದ ದಿನ(ಡಿ.29)ದಂದೇ ಅಶ್ವತ್ಥ್ ಇಹಲೋಕ ತ್ಯಜಿಸಿರುವುದು ಅಶ್ವತ್ಥ್ ಅಭಿಮಾನಿಗಳಲ್ಲಿ ದಿಗ್ಭ್ರಾಂತಿ ಮೂಡಿಸಿದೆ.
ಭಾವಗೀತೆ ಮತ್ತು ಜಾನಪದ ಗೀತೆಗಳ ಹಾಡಿಗೆ ಜೀವ ತುಂಬುವ ಮೂಲಕ ಲಕ್ಷಾಂತರ ಸಂಗೀತಾಭಿಮಾನಿಗಳಲ್ಲಿ ರೋಮಾಂಚನ ಮೂಡಿಸುತ್ತಿದ್ದ ಅಶ್ವತ್ಥ್ ನಿಧನ ಸಂಗೀತ ಲೋಕಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸಂಗೀತ ಕಾರ್ಯಕ್ರಮಗಳಿಂದ ಮನೆ ಮಾತಾದ ಅಶ್ವತ್ಥ್ ಸಾವಿರಾರು ಯವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿದ್ದರು.
1939 ಡಿಸೆಂಬರ್ 29ರಂದು ಹಾಸನದ ಚನ್ನರಾಯಪಟ್ಟಣದಲ್ಲಿ ಜನಿಸಿದ್ದ ಸಿ.ಅಶ್ವತ್ಥ್ ಸುಮಾರು 27ವರ್ಷಗಳ ಕಾಲ ಐಟಿಐಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೇ ರಂಗಭೂಮಿ, ಕಾಕನಕೋಟೆ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಜನಮೆಚ್ಚುಗೆ ಪಡೆದ ಹೆಮ್ಮೆ ಅಶ್ವತ್ಥ್ ಅವರದ್ದು. ಮೈಸೂರು ಮಲ್ಲಿಗೆ, ಶ್ರಾವಣ ಬಂತು ಸೇರಿದಂತೆ ಸುಮಾರು 75ಕ್ಕೂ ಹೆಚ್ಚು ಆಲ್ಬಮ್ ಹೊರಬಂದಿತ್ತು.
ಪಂಚಭೂತಗಳಲ್ಲಿ ಲೀನವಾದ ಪಾರ್ಥಿವ ಶರೀರ: ಕಂಚಿನ ಕಂಠದ ಗಾಯಕ ಅಶ್ವತ್ಥ್ ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಬನಶಂಕರಿಯ ಶಾಂತಿವನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸುವ ಮೂಲಕ ಅಶ್ವತ್ಥ್ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು. ಅಶ್ವತ್ಥ್ ಅವರ ಪಾರ್ಥಿವ ಶರೀರರವನ್ನು ಎನ್.ಆರ್.ಕಾಲೋನಿಯಲ್ಲಿರುವ ಸ್ವಗೃಹಕ್ಕೆ ಮೊದಲು ಒಯ್ಯಲಾಗಿದ್ದು, ತದನಂತರ ಸಾರ್ವಜನಿಕರ ವೀಕ್ಷಣೆಗಾಗಿ ರವೀಂದ್ರ ಕಲಾಕ್ಷೇತ್ರ ಸಮೀಪದ ಸಂಸ ಬಯಲು ರಂಗಮಂದಿರದಲ್ಲಿ ಇರಿಸಲಾಗಿತ್ತು.
ಗಣ್ಯರ ಸಂತಾಪ: ಅಗಲಿದ ಚೇತನ ಅಶ್ವತ್ಥ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗಾಯಕರಾದ ಗುರುಕಿರಣ್, ಛಾಯ, ಸಂಗೀತ ಕಟ್ಟಿ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು, ಲೇಖರು, ಕನ್ನಡ ಸಾಹಿತಿಗಳು ಬಿ.ಆರ್.ಕಾಲೋನಿಯಲ್ಲಿರುವ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.
ಅಶ್ವತ್ಥ್ ಹಾಡಿದ ಸಂತ ಶಿಶುನಾಳ ಶರೀಫರ ಜನಪ್ರಿಯ ಗೀತೆಗಳಲ್ಲೊಂದಾದ 'ತರವಲ್ಲ ತಗಿ ನಿನ್ನ ತಂಬೂರಿ...' ವೆಬ್‌ದುನಿಯಾ ಓದುಗರಿಗಾಗಿ...
ತರವಲ್ಲ ತಗಿ ನಿನ್ನ ತಂಬೂರಿ - ಸ್ವರ ಬರದೆ ಬಾರಿಸದಿರು ತಂಬೂರಿ ಸರಸ ಸಂಗೀತದ ಕುರುಹುಗಳರಿಯದೆ ಬರದೆ ಬಾರಿಸದಿರು ತಂಬೂರಿ