ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕ್ಷಣಗಣನೆ; ಬಿಜೆಪಿ, ಕಾಂಗ್ರೆಸ್ ನಡುವೆ ಬಿಬಿಎಂಪಿ ಗದ್ದುಗೆ ಯಾರಿಗೆ? (BBMP election | Congress | BJP | Karnataka)
Bookmark and Share Feedback Print
 
ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ತನ್ನ ಪ್ರಭಾವ ಬೆಂಗಳೂರಿನಲ್ಲಿ ಕಡಿಮೆ ಎಂದು ಜೆಡಿಎಸ್ ಸ್ವತಃ ಒಪ್ಪಿಕೊಂಡಿದ್ದರೆ, ಅತ್ತ ಕಾಂಗ್ರೆಸ್ ಮತ್ತು ಬಿಜೆಪಿಗಳು ತಾವೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಪೂರ್ಣ ಭರವಸೆಯಿಂದ ಹೇಳುತ್ತಿವೆ.

ಮಾರ್ಚ್ 28ರಂದು ನಡೆದಿದ್ದ ಬಿಬಿಎಂಪಿ ಚುನಾವಣೆಯ ಮತ ಎಣಿಕೆ ಕಾರ್ಯ ಸೋಮವಾರ ನಗರದ 27 ಕೇಂದ್ರಗಳಲ್ಲಿ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿರುವ ಮತ ಎಣಿಕೆ ಹಿನ್ನೆಲೆಯಲ್ಲಿ ನಗರದಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗಳು ಪೂರ್ಣ ಬಹುಮತದೊಂದಿಗೆ ತಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿಕೊಳ್ಳುತ್ತಿವೆ. ಹಾಗೊಂದು ವೇಳೆ ನಡೆಯದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಆಗ ನಿರ್ಣಾಯಕನ ಸ್ಥಾನ ಜೆಡಿಎಸ್ ಪಕ್ಷದ್ದಾಗುತ್ತದೆ. ಹಾಗಾದರೆ ಅದು ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಖಚಿತ. ಇಂತಹ ಪರಿಸ್ಥಿತಿ ಬಿಜೆಪಿಗೆ ಹೆಚ್ಚು ಉಚಿತವೆನಿಸಿದರೆ ಪಕ್ಷೇತರರಿಗೆ ಗಾಳ ಹಾಕುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ನಡುವೆ ಫಲಿತಾಂಶಕ್ಕೂ ಮೊದಲು ಮೇಯರ್ ಗಾದಿಗೆ ಹತ್ತಾರು ಆಕಾಂಕ್ಷಿಗಳು ಕಾಣಿಸಿಕೊಂಡಿದ್ದಾರೆ. ಕೆಲವು ಅನುಭವಿಗಳು ತಾವು ಗೆದ್ದರೆ, ಮೇಯರ್‌ಗಿರಿಗೆ ಪರಿಗಣಿಸಬೇಕು ಎಂದೆಲ್ಲಾ ಈಗಲೇ ವಶೀಲಿಬಾಜಿ ಆರಂಭಿಸಿದ್ದಾರೆ. ಅತಂತ್ರ ಪರಿಸ್ಥಿತಿ ಉದ್ಭವಿಸಿದರೆ ಸೂತ್ರವೊಂದಕ್ಕೆ ಕಟ್ಟು ಬೀಳುವುದು ಪಕ್ಷಗಳಿಗೆ ಅನಿವಾರ್ಯ. ಹಾಗಾದಲ್ಲಿ ಎರಡೆರಡು ಮೇಯರ್‌ಗಳು ಈ ಅವಧಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಎಲ್ಲದಕ್ಕೂ ನಾಳೆ ಸಂಜೆಯೊಳಗೆ ಸ್ಪಷ್ಟ ಉತ್ತರ ಲಭಿಸಲಿದೆ.

ಬಿಜೆಪಿ: ಇತ್ತೀಚೆಗಷ್ಟೇ ನಡೆದಿರುವ ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ನಮ್ಮದೇ. ಗದ್ದುಗೆ ನಮ್ಮ ಪಾಲಿಗೆ ಖಚಿತ. ಇದಕ್ಕೆ ನಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಸಾಕು ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್: ಬಿಜೆಪಿ ಆಡಳಿತದಿಂದ ರೋಸಿ ಹೋಗಿರುವ ಜನತೆ ಬಿಬಿಎಂಪಿ ಮೂಲಕ ತಮ್ಮ ತೀರ್ಪನ್ನು ನೀಡಲಿದ್ದಾರೆ. ಖಂಡಿತಾ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಹೇಳಿದ್ದಾರೆ.

ಜೆಡಿಎಸ್: ನಮಗೆ ಬೆಂಗಳೂರಿನಲ್ಲಿ ಹೆಚ್ಚು ನೆಲೆಯಿಲ್ಲ. ನಗರದಲ್ಲಿ ಜೆಡಿಎಸ್ ದುರ್ಬಲವಾಗಿದೆ. ನಾವು ಬಲಿಷ್ಠವಾಗಿಲ್ಲ ಎನ್ನುವುದು ನಿಜವಾಗಿದ್ದರೂ, ಯಾವುದೇ ಪಕ್ಷದ ಜತೆ ಇದುವರೆಗೆ ಮೈತ್ರಿ ಕುರಿತು ಮಾತುಕತೆ ನಡೆದಿಲ್ಲ ಎಂದು ಜೆಡಿಎಸ್ ಮುಖ್ಯಸ್ಥ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ವೆಬ್‌ದುನಿಯಾದಲ್ಲಿ ತಾಜಾ ಮಾಹಿತಿ...
ಮಾರ್ಚ್ 28ರಂದು ಬೆಂಗಳೂರಿನ 198 ವಾರ್ಡ್‌ಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಭಾಗಶಃ ಲಭ್ಯವಾಗಲಿದ್ದು, 'ವೆಬ್‌ದುನಿಯಾ ಕನ್ನಡ' ಕ್ಷಣ-ಕ್ಷಣದ ತಾಜಾ ಮಾಹಿತಿಗಳನ್ನು ಓದುಗರಿಗೆ ನೀಡಲಿದೆ.

ಒಟ್ಟು 27 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಅದರಲ್ಲಿ 26 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತದೆ. ಎಸ್ಎಸ್ಎಲ್‌ಸಿ ಪರೀಕ್ಷೆ ಕಾರಣದಿಂದ ಸರ್ವಜ್ಞ ನಗರದ ಎಂಟು ವಾರ್ಡ್‌ಗಳ (23, 24, 27, 28, 29, 30, 49 ಮತ್ತು 59) ಮತ ಎಣಿಕೆ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ