ಅಪ್ರಾಪ್ತ ಬಾಲಕನಿಗೆ ಮದ್ಯ ಕುಡಿಸಿ, ಆತ ಎಷ್ಟು ಕುಡಿಯುತ್ತಾನೆಂದು ಪತ್ತೆದಾರಿ ಕೆಲಸಕ್ಕೆ ಹೋಗಿದ್ದ ಅಬಕಾರಿ ಸಚಿವ ರೇಣುಕಾಚಾರ್ಯ ವಿರುದ್ಧ ಎನ್‌ಜಿಒವೊಂದು ದೂರು ದಾಖಲಿಸಿದೆ.
ಸಚಿವರಿಗೆ ಅಪ್ರಾಪ್ತ ಬಾಲಕನಿಗೆ ನೇರವಾಗಿ ಬುದ್ದವಾದ ಹೇಳುವುದನ್ನು ಬಿಟ್ಟು ಸ್ವತಃ ಮದ್ಯ ಕುಡಿಯಲು ಕೊಟ್ಟು ಮೋಜು ಅನುಭವಿಸಿದ ಸಚಿವರ ವಿರುದ್ಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಎನ್‌ಜಿಒ (ಎಸ್‌ಐಸಿಎಚ್‌ಆರ್ಇಎಂ) ದೂರು ನೀಡಿದೆ.
ವಿಸ್ಕಿ ಪೋರ: ದೊಡ್ಡ ಕುಡುಕರನ್ನೂ ನಾಚಿಸುವಂತೆ, ನೀರು ಸೇರಿಸದೆ ವಿಸ್ಕಿ, ಬ್ರಾಂಡಿ ಕುಡಿಯುವ ಐದರ ಹರೆಯದ ಪೋರನ್ನು ಸ್ವತಃ ಅಬಕಾರಿ ಸಚಿವ ರೇಣುಕಾಚಾರ್ಯ ಭೇಟಿ ಮಾಡಿದ್ದರು.
ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಹನುಮಂತಪ್ಪ ಎಂಬುವರ ಮೊಮ್ಮಗ ಐದು ವರ್ಷದ ಈರಣ್ಣನೇ ವಿಸ್ಕಿ ಪೋರ.
ಈ ಚೊಟುದ್ದದ ಪೋರ ನೀರು ಬೆರಸದೆ ವಿಸ್ಕಿ, ಬ್ರಾಂಡಿ ಕುಡಿಯುವ ವಿಷಯ ತಿಳಿದ ಸಚಿವ ರೇಣುಕಾಚಾರ್ಯ ಶನಿವಾರ ಆತನ ಮನೆಗೆ ಭೇಟಿ ನೀಡಿ, ನೀರು ಬೆರಸದೆ ವಿಸ್ಕಿಯನ್ನು ಕುಡಿಯಲು ಕೊಟ್ಟರು. ಅರರೇ, ನೋಡ ನೋಡುತ್ತಲೇ ಹಾಲು ಕುಡಿದಂತೆ ವಿಸ್ಕಿಯನ್ನು ಏರಿಸಿಬಿಟ್ಟಿದ್ದ!
ನಂತರ ಬಾಲಕನ ಸ್ಥಿತಿಗತಿ ವಿಚಾರಿಸಿದ ರೇಣುಕಾಚಾರ್ಯ, ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳೆದುರು ಮದ್ಯಪಾನ ಮಾಡಬಾರದು. ಇದರಿಂದ ಅವರ ಭವಿಷ್ಯ ಹಾಳಾಗಲಿದೆ ಎಂದು ಬುದ್ದಿವಾದ ಹೇಳಿದ್ದಾರೆ. ನಂತರ ಈರಣ್ಣನನ್ನು ರಿಮ್ಯಾಂಡ್ ಹೋಂಗೆ ದಾಖಲಿಸಿದರೆ ಸರ್ಕಾರದ ವತಿಯಿಂದ ಸಂಪೂರ್ಣ ವಿದ್ಯಾಭ್ಯಾಸ ಕೊಡಿಸುವುದಾಗಿ ಭರವಸೆ ನೀಡಿದ್ದರು.