ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶೂಟೌಟ್ ಪ್ರಕರಣ: ನಾಯಿ ಓಡಿಸಲು ಗುಂಡು ಹಾರಿಸಿದ್ದಂತೆ! (AoL ashram | Sri Sri Ravishankar | dogs | Kanakapura,)
Bookmark and Share Feedback Print
 
PR
ನಗರದ ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್‌ ಆಶ್ರಮದಲ್ಲಿ ಇತ್ತೀಚೆಗೆ ಸಂಭವಿಸಿದ ಶೂಟೌಟ್ ಪ್ರಕರಣ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಇದೀಗ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಆಶ್ರಮದ ಸಮೀಪವೇ ವಾಸವಿದ್ದ ಫಾರ್ಮ್‌ಹೌಸ್ ಮಾಲೀಕ ಡಾ.ಮಹದೇವ ಪ್ರಸಾದ್ ಎಂಬವರು ತನ್ನ ದನಗಳ ಮೇಲೆ ನಾಯಿ ದಾಳಿ ನಡೆಸಲು ಮುಂದಾದಾಗ ಅವುಗಳನ್ನು ಓಡಿಸಲು ಮೂರು ಸುತ್ತು ಗುಂಡನ್ನು ಗಾಳಿಯಲ್ಲಿ ಹಾರಿಸಿದ್ದರಂತೆ. ಅದರಲ್ಲಿ ಒಂದು ಗುಂಡು ಆಕಸ್ಮಿಕವಾಗಿ ಆಶ್ರಮದ ಬಳಿ ಬಿದ್ದ ಪರಿಣಾಮ ಭಕ್ತರೊಬ್ಬರಿಗೆ ತಾಗಿರುವುದಾಗಿ ಪೊಲೀಸರು ವಿವರಣೆ ನೀಡಿದ್ದಾರೆ.

ನಗರದಿಂದ ಸುಮಾರು 30ಕಿ.ಮೀ. ದೂರದಲ್ಲಿರುವ ಕನಕಪುರ ರಸ್ತೆ ಸಮೀಪದಲ್ಲಿ ಆರ್ಟ್ ಆಫ್ ಲಿವಿಂಗ್‌ ಆಶ್ರಮವಿದೆ. ಇದರ ಸಮೀಪವೇ ಡಾ.ಮಹದೇವ ಪ್ರಸಾದ್ ಫಾರ್ಮ್‌ಹೌಸ್ ಇದ್ದು, ಅವರು 0.32 ಪಾಯಿಂಟ್ ರೇಂಜ್‌ನ ಪಿಸ್ತೂಲ್ ಹೊಂದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮಹದೇವ ಪ್ರಸಾದ್ ಅವರನ್ನು ವಶಕ್ಕೆ ತೆಗೆದುಕೊಂಡು, ಲೈಸೆನ್ಸ್ ಸಹಿತ ರಿವಾಲ್ವರ್‌ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಮೇ 30ರಂದು ಸಂಜೆ ಗುಂಡು ಹೊಡೆದ ಶಬ್ದ ಕೇಳಿಸುವ ಮೂಲಕ ಆರ್ಟ್ ಆಫ್ ಲಿವಿಂಗ್‌ನಲ್ಲಿ ಸಾಕಷ್ಟು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ರೀತಿ ಸಿಡಿದ ಗುಂಡು ಆಶ್ರಮದ ಭಕ್ತ ವಿನಯ್.ಕೆ ಎಂಬುವರನ್ನು ಸವರಿಕೊಂಡು ಹೋಗಿತ್ತು. ಆದರೆ ಈ ದಾಳಿಯನ್ನು ರವಿಶಂಕರ್ ಗುರೂಜಿಯನ್ನು ಗುರಿಯಾಗಿಸಿಕೊಂಡು ನಡೆಸಲಾಗಿತ್ತು ಎಂದು ಗುಲ್ಲೆದ್ದಿತ್ತು. ನಂತರ ಪೊಲೀಸರು ಮತ್ತು ರವಿಶಂಕರ್ ಗುರೂಜಿ ಆ ಆರೋಪವನ್ನು ಅಲ್ಲಗಳೆದಿದ್ದರು.

ಆದರೂ ಆಶ್ರಮದಲ್ಲಿ ನಡೆದ ಶೂಟೌಟ್ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೂ ಪ್ರಕರಣದ ಭೇದಿಸುವಲ್ಲಿ ರಾಮನಗರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆಶ್ರಮದಲ್ಲಿ ಪತ್ತೆಯಾದ ಬುಲೆಟ್ ಅನ್ನು ವಶಪಡಿಸಿಕೊಂಡಿದ್ದು, ಅದನ್ನು ಪೋರೆನ್ಸಿಕ್ ಸೈನ್ಸ್ ಲ್ಯಾಬೋರೆಟರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಗುಂಡು ಪ್ರಸಾದ್ ಪಿಸ್ತೂಲ್‌ ಬುಲೆಟ್‌ಗೆ ಹೊಂದಾಣಿಕೆಯಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತೆ ಹೆಚ್ಚಿಸಿಕೊಳ್ಳುವ ನಾಟಕ?:ಆರ್ಟ್ ಆಫ್ ಲಿವಿಂಗ್‌ನಲ್ಲಿ ಹೆಚ್ಚಿನ ಭದ್ರತೆ ಹೆಚ್ಚಿಸಿಕೊಳ್ಳಲು ಈ ರೀತಿ ನಾಟಕವಾಡಲಾಗಿತ್ತು ಎಂಬ ಊಹಾಪೋಹ ಕೂಡ ಕೇಳಿಬಂದಿತ್ತು. ಆಶ್ರಮದಲ್ಲಿ ಗುಂಡಿನ ದಾಳಿ ನಡೆದ ಕೆಲವು ಗಂಟೆಗಳವರೆಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲವಾಗಿತ್ತು. ನಂತರ ಏಕಾಏಕಿ ಆಶ್ರಮದಲ್ಲಿ ಗುಂಡಿನ ದಾಳಿ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಬಹಿರಂಗಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ