ನಿತ್ಯಾನಂದನ ರಾಸಲೀಲೆ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ನಿತ್ಯಾನಂದ ರಂಜಿತಾಳಿಗೆ ಮಗನಿದ್ದಂತೆ ಎಂದು ಹಿಂದೂ ಮಹಾಸಭಾ ತಿಳಿಸಿದ್ದು, ಲೆನಿನ್ ಕರುಪ್ಪನ್ ವಿರುದ್ಧ ನಗರದ ಎಂಜಿ ರಸ್ತೆಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಿತ್ಯಾನಂದ ಸ್ವಾಮಿ ವಿರುದ್ಧ ಲೆನಿನ್ ಕರುಪ್ಪನ್ ಸಂಚು ನಡೆಸಿ ಅವರ ಗೌರವಕ್ಕೆ ಧಕ್ಕೆ ತಂದಿರುವುದಾಗಿ ಆರೋಪಿಸಿರುವ ಹಿಂದೂ ಮಹಾಸಭಾ ಆತನ ವಿರುದ್ಧ ದೂರು ದಾಖಲಿಸಿದೆ. ಅಲ್ಲದೇ ನಟಿ ರಂಜಿತಾ ನಿತ್ಯಾನಂದ ಅವರನ್ನು ತನ್ನ ಮಗ ಎಂದು ವಿಲ್ ಬರೆದಿದ್ದಾರೆ. ಅಷ್ಟೇ ಅಲ್ಲ ತನ್ನ ಆಸ್ತಿಯನ್ನು ಸ್ವಾಮಿ ಹೆಸರಿಗೆ ಬರೆದಿರುವುದಾಗಿಯೂ ಹಿಂದೂ ಮಹಾಸಭಾದ ಅಧ್ಯಕ್ಷ ಎಂ.ವಾಸುದೇವರಾವ್ ಕಶ್ಯಪ್ ಈ ಸಂದರ್ಭದಲ್ಲಿ ವಿವರಿಸಿದ್ದಾರೆ.
ನಟಿ ರಂಜಿತಾ ನಿತ್ಯಾನಂದನನ್ನು ದತ್ತು ಪಡೆದ ಬಗ್ಗೆ ವಿಲ್ ಇದೆ. ಅವರಿಬ್ಬರೂ ಅಮ್ಮ-ಮಗನಿದ್ದಂತೆ. ಆದರೆ ಹಿಂದೂ ಧರ್ಮದ ಬಗ್ಗೆ ಕಳಂಕ ತರುವ ಹುನ್ನಾರ ನಡೆಸಿರುವ ಲೆನಿನ್ ಕರುಪ್ಪನ್, ಷಡ್ಯಂತ್ರ ನಡೆಸಿ ನಕಲಿ ಸಿಡಿ ಮೂಲಕ ಅಪಪ್ರಚಾರ ನಡೆಸಿರುವುದಾಗಿ ಹಿಂದೂ ಮಹಾಸಭಾ ದೂರಿನಲ್ಲಿ ಹೇಳಿದೆ.
ನಟಿ ರಂಜಿತಾಳ ಜೊತೆಗಿನ ನಿತ್ಯಾನಂದ ಸ್ವಾಮಿಯ ರಾಸಲೀಲೆ ವಿವಾದ ಸಾಕಷ್ಟು ಎಡೆಮಾಡಿಕೊಟ್ಟಿರುವ ನಡುವೆ ಹಿಂದೂ ಮಹಾಸಭಾದ ಈ ಹೇಳಿಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಏತನ್ಮಧ್ಯೆ, ನಿತ್ಯಾನಂದ ಸ್ವಾಮೀಜಿ ಪ್ರವಚನಕ್ಕೆ ಹೇರಿದ್ದ ನಿರ್ಬಂಧವನ್ನು ಹೈಕೋರ್ಟ್ ಶುಕ್ರವಾರ ತೆರವುಗೊಳಿಸಿದೆ.