'ವಿಧಾನಮಂಡಲದ ಕಲಾಪದಲ್ಲಿ ಶಾಸಕರ ವರ್ತನೆ ಸರಿಯಿಲ್ಲ, ಆ ಬಗ್ಗೆ ನಾನು ರಾಜ್ಯದ ಜನತೆಯ ಕ್ಷಮೆಯಾಚಿಸುವೆ ಎಂದು ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದು, ನಾವು ಅಪರಂಚಿ ಚಿನ್ನ ಇದ್ದಂತೆ. ಯಾವುದೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಲ್ಲ. ಅಲ್ಲದೇ ತಾವು ಅಕ್ರಮ ಗಣಿಗಾರಿಕೆ ನಡೆಸುತ್ತೇವೆ ಎಂಬುದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸಾಬೀತುಪಡಿಸಲಿ' ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಇಡೀ ಜೀವಮಾನದಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಬದುಕಲು ಇಚ್ಚಿಸಿದವರು ನಾವು. ಪ್ರಾಮಾಣಿಕತೆಯಲ್ಲಿ, ಸತ್ಯದಲ್ಲಿ, ಭಗವಂತನ ಮೇಲೆ ನಂಬಿಕೆ ಇಟ್ಟು ಬದುಕುತ್ತಿದ್ದೇವೆ ಎಂದರು.
ನನ್ನ ಬಗ್ಗೆ ಒಂದೇ ಒಂದು ಕಪ್ಪು ಚುಕ್ಕೆ ತೋರಿಸಲು ಕಾಂಗ್ರೆಸ್ ಮತ್ತು ಜೆಡಿಎಸ್‌ನವರಿಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಸವಾಲು ಹಾಕಿದರು. ನಾವು ಪರಿಶ್ರಮದಿಂದ ಮೇಲೆ ಬಂದವರೇ ವಿನಃ ಅಕ್ರಮ ಗಣಿಗಾರಿಕೆ ಸಂಪಾದನೆಯಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು. ನಿಷ್ಠೆ, ವಿನಯ, ಸತ್ಯ ಇದ್ದರೆ ನಮ್ಮ ಜೊತೆಗೆ ಭಗವಂತ ಇದ್ದೇ ಇರುತ್ತಾನೆ ಎಂದರು.
ಅಕ್ರಮ ಗಣಿಗಾರಿಕೆ ಇದ್ದರೆ ತೋರಿಸಿ: ಸಾಮಾನ್ಯ ಕಾನ್‌ಸ್ಟೇಬಲ್‌ವೊಬ್ಬರ ಮಕ್ಕಳಾದ ರೆಡ್ಡಿ ಸಹೋದರರು ಇಂದು ಸಾವಿರಾರು ಕೋಟಿ ರೂಪಾಯಿ ಒಡೆಯರಾಗಿದ್ದಾರೆ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ. ಆದರೆ ನಾವೂ ಎಲ್ಲಿಯೂ ಲೂಟಿ ಮಾಡಿ ಹಣ ಸಂಪಾದನೆ ಮಾಡಿಲ್ಲ. ಕಾನೂನು ಬದ್ದವಾಗಿಯೇ ಗಣಿಗಾರಿಕೆ ನಡೆಸುತ್ತಿದ್ದೇವೆ ಎಂದು ರೆಡ್ಡಿ ಸಮಜಾಯಿಷಿ ನೀಡಿದರು.
ನಮ್ಮ ಎಲ್ಲಾ ಆದಾಯಕ್ಕೆ ತೆರಿಗೆ ಪಾವತಿಸಿದ್ದೇವೆ. ಅಲ್ಲದೇ ನಾವು ಗಣಿ ಹಣದಿಂದ ರಾಜಕೀಯಕ್ಕೆ ಧುಮುಕಿದವರಲ್ಲ. 2004ರವರೆಗೂ ನಾವು ಗಣಿಮಾಲೀಕರಾಗಿರಲಿಲ್ಲ. ನೆರೆಯ ಆಂಧ್ರಪ್ರದೇಶದಲ್ಲಿಯೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ನಮ್ಮ ವಿರುದ್ಧ ತಿರುಗಿ ಬಿದ್ದು ಪ್ರತಿಭಟನೆ, ತನಿಖೆ ನಡೆಸಿದರೂ ಕೂಡ ಏನನ್ನೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಇದೀಗ ರಾಜ್ಯದ ವಿಪಕ್ಷಗಳು ಅದೇ ಹಾದಿ ಹಿಡಿದಿವೆ ಎಂದು ಅಸಮಾಧಾನವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್‌ನವರಿಗೆ ತಾಕತ್ತಿದ್ದರೆ ನಮ್ಮ ವಿರುದ್ಧ ಒಂದೇ ಒಂದು ಆರೋಪ ಸಾಬೀತುಪಡಿಸಲಿ ಎಂದರು.
ನಾವು ಯಾವುದೇ ತನಿಖೆ ಎದುರಿಸಲು ನಾವು ಸಿದ್ದ. ಸಿಬಿಐ, ಎಫ್‌ಬಿಐ ತನಿಖೆಗೂ ಸಿದ್ದ. ಬೇಕಾದರೆ ಜೆಡಿಎಸ್, ಕಾಂಗ್ರೆಸ್ ನಾಯಕರು ನಮ್ಮ ವಿರುದ್ಧದ ಆರೋಪ ಸಾಬೀತುಪಡಿಸಲು ನೋಡುವಾ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಹಗರಣಗಳ ರಾಜ: ವಿಧಾನಮಂಡಲದ ಅಧಿವೇಶನದಲ್ಲಿ 13ದಿನಗಳ ಕಾಲ ಗಣಿ ಗದ್ದಲದಲ್ಲಿಯೇ ವಿಪಕ್ಷಗಳು ಕಾಲ ಕಳೆಯುವ ಮೂಲಕ ನಮ್ಮನ್ನು ತೇಜೋವಧೆ ಮಾಡಲು ಮುಂದಾಗಿರುವುದಾಗಿ ಆರೋಪಿಸಿದ ರೆಡ್ಡಿ, ನನಗೆ ಮಾತನಾಡಲು ಅವಕಾಶ ಕೊಡದೆ ಕಲಾಪದಲ್ಲಿ ಕೋಲಾಹಲವೆಬ್ಬಿಸಿ ಪ್ರತಿಭಟನೆ ನಡೆಸಿದರು. ಆದರೆ ಬಳ್ಳಾರಿ ಜನರಿಗೆ ಕಾಂಗ್ರೆಸ್ಸಿಗರ ಹಣೆ ಬರಹ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿ.ಎಸ್.ಲಾಡ್ ಎಂಡ್ ಸನ್ಸ್ ಗಣಿ ಕಂಪನಿ, ಶಾಸಕ ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆ 75 ಎಕರೆ ಭೂಮಿ ಅತಿಕ್ರಮಣ, ಮಾಜಿ ಸಚಿವ ಎಂ.ವೈ.ಘೋರ್ಪಡೆ 50 ಎಕರೆ ಒತ್ತವರಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಕುಟುಂಬ, ಎಂ.ವೈ.ಘೋರ್ಪಡೆ ಸೊಸೆ, ಅಂಬಿಕಾ ಘೋರ್ಪಡೆ 30-40 ಎಕರೆ ಅಕ್ರಮ ಪ್ರದೇಶದಲ್ಲಿ ಗಣಿಗಾರಿಕೆ. ಅಲ್ಲಂ ಪ್ರಸನ್ನ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್ ವಹಾಬ್‌ರಿಂದ 5 ಗಣಿಗಳ ಗುತ್ತಿಗೆ, ಮಾಜಿ ಶಾಸಕ ಎಚ್.ಜಿ.ಶ್ರೀರಾಮುಲು 63 ಎಕರೆ ಪ್ರದೇಶ ಭೂಮಿ ಒತ್ತವರಿ, ಮೈನ್ಸ್ ವೀರಪ್ಪನ್ ರಾಹುಲ್ ಬಲ್ಲೋಟಾ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಶಾಸಕರು ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಗಂಭೀರವಾಗಿ ಆರೋಪಿಸಿದರು.
ಆ ನಿಟ್ಟಿನಲ್ಲಿ ಭಾರತೀಯ ಜನತಾಪಕ್ಷದ ರಾಮರಾಜ್ಯದ ಕನಸನ್ನು ಅಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ ಅನ್ನು ಜನರು ಈಗಾಗಲೇ ತಿರಸ್ಕರಿಸಿದ್ದಾರೆ. ಹಾಗಾಗಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಯಾರನ್ನೇ ಕರೆ ತಂದು ಬೇಕಾದರೆ ಸಭೆ, ರಾಲಿ ನಡೆಸಲಿ, ಅದರಿಂದ ಏನೂ ಪ್ರಯೋಜನವಿಲ್ಲ ಎಂದು ವ್ಯಂಗ್ಯವಾಡಿದರು.