ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್ ವಕ್ರದೃಷ್ಟಿ,ಬಳ್ಳಾರಿ ಶುದ್ದಿಗಾಗಿ ಹೋಮ-ಹವನ: ಶ್ರೀರಾಮುಲು (Sri ramulu | BJP | Congress | JDS | Janardana Reddy | Siddaramaiah)
Bookmark and Share Feedback Print
 
PR
'ಇದು ಕಾಂಗ್ರೆಸ್ಸಿಗರ ಬೊಜ್ಜು ಕರಗಿಸುವ ಯಾತ್ರೆ, ಕಾಂಗ್ರೆಸ್ ಅನ್ನು ಜನರೇ ತಿರಸ್ಕರಿಸಿದ್ದಾರೆ ಎಂದು ತಿರುಗೇಟು ನೀಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಕಾಂಗ್ರೆಸ್ಸಿಗರ ಸಮಾವೇಶದಿಂದಾಗಿ ಬಳ್ಳಾರಿ ಅಪವಿತ್ರವಾಗಿದೆ. ಅದರ ಶುದ್ದಿಗಾಗಿ ಮಂಗಳವಾರ ಬೃಹತ್ ಹೋಮ-ಹವನ ಮಾಡುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಕಾಂಗ್ರೆಸ್ ಮುಖಂಡರ ಪಾದಯಾತ್ರೆಯ ಬೃಹತ್ ಸಮಾವೇಶದ ನಂತರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸಿಗರು ನೆರೆ ಪರಿಹಾರದ ಹಣ ತಿಂದು, ಅಕ್ರಮಗಣಿ ಹಣದಲ್ಲಿಯೇ ಪಾದಯಾತ್ರೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಮಜಾಯಿಷಿ ನೀಡಿದರು.

ಬಳ್ಳಾರಿಗರ ಮೇಲೆ ಕಾಂಗ್ರೆಸ್ಸಿಗರ ವಕ್ರ ದೃಷ್ಟಿ ಬಿದ್ದಿದೆ, ಅದರಿಂದ ನಮ್ಮ ಜಿಲ್ಲೆ ಅಪವಿತ್ರವಾಗಿ ಹೋಗಿದೆ. ಹಾಗಾಗಿ ನಾವು ನಾಳೆ ಬೃಹತ್ ಪ್ರಮಾಣದಲ್ಲಿ ಹೋಮ-ಹವನ ಮಾಡಿ ಶುದ್ದಿ ಮಾಡುವುದಾಗಿ ಹೇಳಿದರು.

ಬಳ್ಳಾರಿಯ ಜನರು ಶಾಂತಿ ಪ್ರಿಯರು ಎಂಬುದನ್ನು ಇಂದು ತೋರಿಸಿಕೊಟ್ಟಿದ್ದಾರೆ. ಆ ಕಾರಣಕ್ಕಾಗಿ ಬಳ್ಳಾರಿ ಜನತೆಯನ್ನು ತಾನು ಅಭಿನಂದಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು. ಇದು ನಾಡ ರಕ್ಷಣೆಯ ಯಾತ್ರೆಯಲ್ಲ, ಬೊಜ್ಜು ಕರಗಿಸಲು ಮಾಡಿದ ಯಾತ್ರೆಯಾಗಿದೆ. ಸಿದ್ದರಾಮಯ್ಯನವರಿಗೆ ವಿಪಕ್ಷ ನಾಯಕನ ಪಟ್ಟ ಉಳಿಸಿಕೊಳ್ಳಲು ಈ ರೀತಿ ಪಾದಯಾತ್ರೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಸರ್ಕಸ್ ಕಂಪನಿಯಲ್ಲಿರುವ ಜೋಕರ್ ಇದ್ದಂತೆ, ಬಾಯಿಗೆ ಬಂದಂತೆ ಮಾತನಾಡಿ ಜನರನ್ನು ನಗಿಸುವ ಕೆಲಸ ಆತನಿಗೆ ಅಷ್ಟೇ, ಚಲಾವಣೆಯಲ್ಲಿ ಇಲ್ಲದ ಇಬ್ರಾಹಿಂ ತಲೆಕೆಟ್ಟವರಂತೆ ಮಾತನಾಡುತ್ತಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ಸಿಗರು ಎಷ್ಟೇ ತಿಪ್ಪರಲಾಗ ಹಾಕಿದರು ಬಳ್ಳಾರಿಯಲ್ಲಿ ಮತ್ತೆ ಕಾಂಗ್ರೆಸ್ ಹುಟ್ಟಲ್ಲ, ಅದನ್ನು ಬೇರು ಸಹಿತ ಕಿತ್ತು ಹಾಕಿದ್ದೇವೆ. ನಾಡಿನ ಜನರು ಕಾಂಗ್ರೆಸ್ಸಿಗರ ದೊಂಬರಾಟ ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪಾದಯಾತ್ರೆಗೆ ಹಣ ಎಲ್ಲಿಂದ ಬಂತು?-ರೆಡ್ಡಿ: ಬೆಂಗಳೂರಿನಿಂದ ಬಳ್ಳಾರಿ ತನಕ ಕಾಂಗ್ರೆಸ್ ಮುಖಂಡರ ನಡೆಸಿರುವ ಪಾದಯಾತ್ರೆಗೆ ಹಣ ಎಲ್ಲಿಂದ ಬಂತು ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಈ ಸಂದರ್ಭದಲ್ಲಿ ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರಿಗೆ ಭಯ ಹುಟ್ಟಿಸಿ, ಅವರ ಬೀದಿಗಿಳಿಯುವಂತೆ ಮಾಡಿರುವುದಕ್ಕಾಗಿ ನನಗೆ ಸಾಕಷ್ಟು ಜನ ಅಭಿನಂದನೆ ತಿಳಿಸಿದ್ದಾರೆ ಎಂದರು.

ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರು ನಾವು ಹೇಳದೆ ಇದ್ದ ಮಾತನ್ನು ಹೇಳಿ ಜನರ ದಿಕ್ಕು ತಪ್ಪಿಸಿದ್ದಾರೆ. ನಾವು ಕರ್ನಾಟಕದವರಲ್ಲ ಎಂದು ಆರೋಪಿಸಿದ್ದಾರೆ. ನಾವೇನು ಹೊರಗಿನವರಲ್ಲ, ಬಳ್ಳಾರಿಯಲ್ಲಿಯೇ ಹುಟ್ಟಿ ಬೆಳೆದವರು, ಅದಕ್ಕೆ ಬಳ್ಳಾರಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲೆಗಳಿವೆ ಎಂದು ಸಿದ್ದು ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ಸಿಗರಿಂದಲೇ ಗಣಿ ಲೂಟಿ ಆಗುತ್ತಿದೆ. ಅಕ್ರಮ ಹಣದಿಂದಲೇ ಪಾದಯಾತ್ರೆ ಮಾಡಿದ್ದಾರೆ. ನಿಜಕ್ಕೂ ಸಿದ್ದರಾಮಯ್ಯ ಸಂತೋಷ್ ಲಾಡ್ ಮತ್ತು ಅನಿಲ್ ಲಾಡ್ ವಿರುದ್ಧ ಗುಡುಗಬೇಕಿತ್ತು. ಅದನ್ನು ಬಿಟ್ಟು ನಮ್ಮ ಬಗ್ಗೆಯೇ ಅನಾವಶ್ಯಕವಾಗಿ ವಾಗ್ದಾಳಿ ನಡೆಸಿದ್ದಾರೆ. ಅದಿರು ರಫ್ತು ನಿಷೇಧ ವಾಪಸ್ ಪಡೆಯದಿದ್ದರೆ, ಮುಖ್ಯಮಂತ್ರಿಗಳ ಕುರ್ಚಿಯನ್ನು ಅಲುಗಾಡಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆ ಕಾರಣಕ್ಕಾಗಿ ನಾಳೆ ಬೆಳಿಗ್ಗೆ ಕಾಂಗ್ರೆಸ್ ಮುಖಂಡರು ಕ್ಷಮೆ ಯಾಚಿಸಬೇಕು ಎಂದು ಈ ಸಂದರ್ಭದಲ್ಲಿ ರೆಡ್ಡಿ ಹೇಳಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು, ಎಂ.ಪಿ.ಪ್ರಕಾಶ್, ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.

ಬಳ್ಳಾರಿಗೆ ಉಳಿಗಾಲವಿಲ್ಲ-ರೆಡ್ಡಿಗಳನ್ನು ಕಿತ್ತೊಗೆಯಿರಿ:ಸಿದ್ದು
ಸಂಬಂಧಿತ ಮಾಹಿತಿ ಹುಡುಕಿ