ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶಿಕ್ಷಕರ ವೇತನ ವಿತರಣೆಯಲ್ಲಿ ಸರಕಾರದ ತಾರತಮ್ಯ: ಮರಿತಿಬ್ಬೇಗೌಡ (Hassan | Congress | Marithibbe gowda | English | Yeddyurappa)
Bookmark and Share Feedback Print
 
ಅಧ್ಯಾಪಕರ ವೇತನ ತಾರತಮ್ಯ ನೀತಿ ಹಾಗೂ ಸಮಸ್ಯೆ ನಿವಾರಣೆಗೆ ಸರಕಾರದ ನಿರ್ಲಕ್ಷ್ಯ ಖಂಡಿಸಿ ಅಕ್ಟೋಬರ್‌ನಲ್ಲಿ ರಾಜ್ಯಾದ್ಯಂತ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದ್ದಾರೆ.

ನಗರದ ಬಾಲಕಿಯರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವೇತನ ತಾರತಮ್ಯ ಅಧ್ಯಾಪಕರು ಮತ್ತು ಶಿಕ್ಷಕರನ್ನು ಮಾನಸಿಕ ತೊಳಲಾಟಕ್ಕೀಡು ಮಾಡಿದೆ. ಇದರ ನಿವಾರಣೆಗೆ ಸರಕಾರದ ಮಟ್ಟದಲ್ಲಿ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಾಪಕರಿಗೆ ವೇತನ ನೀಡಿಕೆಯಲ್ಲಿ ಸೂಕ್ತ ಮಾನದಂಡ ಹಾಗೂ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಇಲ್ಲವಾಗಿದೆ. ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು ಹಾಗೂ ಶಿಕ್ಷಕರಿಗೆ 3-4 ತಿಂಗಳಾದರೂ ವೇತನ ದೊರೆಯುತ್ತಿಲ್ಲ. ಈ ಎಲ್ಲ ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ಕರೆದು ಚರ್ಚಿಸಬೇಕೆಂದು ಮಾಡಿಕೊಂಡ ಮನವಿಗೆ ಸಿಎಂ ಸ್ಪಂದಿಸಿಲ್ಲ ಎಂದು ದೂರಿದರು.

ಇಂಗ್ಲಿಷ್ ಭಾಷೆ ಮೇಲೆ ಹಿಡಿತವಿಲ್ಲದ್ದರಿಂದ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಉದ್ಯೋಗ ವಂಚಿತರಾಗುತ್ತಿದ್ದಾರೆ. ಭವಿಷ್ಯದಲ್ಲಿ ಇಂಗ್ಲಿಷ್ ಪ್ರಮುಖ ಪಾತ್ರ ವಹಿಸಲಿದ್ದು ಸರಳವಾಗಿ ಆ ಭಾಷೆಯನ್ನು ಕಲಿಯುವ ಹಾಗೂ ಕಲಿಸುವ ನಿಟ್ಟಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಏರಿದಾಗ, ಇಂಗ್ಲಿಷ್ ಮತ್ತು ಗಣಿತದಲ್ಲಿ ಹೆಚ್ಚಾಗಿ ಅನುತ್ತೀರ್ಣರಾಗುವುದನ್ನು ನೋಡಿದ್ದೇವೆ. ಈ ತೊಂದರೆ ನಿವಾರಿಸಲು ಇಂಗ್ಲಿಷ್, ಗಣಿತ ಪಠ್ಯಗಳನ್ನು ಸರಳವಾಗಿ ಕಲಿಸುವ, ಆಸಕ್ತಿ ಮೂಡಿಸುವ ಶಿಕ್ಷಣ ದೊರೆಯುವಂತಾಗಬೇಕು. ಇದಕ್ಕೆ ಪೂರಕವಾಗಿ ಕಾಲೇಜು ಹಂತದಲ್ಲಿ ಕಾರ್ಯಾಗಾರ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಸಂಬಂಧಿತ ಮಾಹಿತಿ ಹುಡುಕಿ