ರಾಜೀನಾಮೆ ಕೇಳಿದ್ರೆ ಆತ್ಮಹತ್ಯೆ ಮಾಡಿಕೊಳ್ತೇನೆ: ಗೂಳಿಹಟ್ಟಿ
ಬೆಂಗಳೂರು, ಸೋಮವಾರ, 20 ಸೆಪ್ಟೆಂಬರ್ 2010( 11:21 IST )
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ದೆಹಲಿಯಲ್ಲಿ ಕಸರತ್ತು ನಡೆಯುತ್ತಿದ್ದರೆ, ಮತ್ತೊಂದೆಡೆ ನನ್ನ ಬೆಂಬಲದಿಂದಲೇ ಸರಕಾರ ರಚನೆ ಆಗಿದೆ ಎಂದು ಗುಟುರು ಹಾಕಿರುವ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಒಂದು ವೇಳೆ ನನ್ನ ರಾಜೀನಾಮೆ ಕೇಳಿದ್ರೆ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಪುಟ ಪುನಾರಚನೆ ಹಾಗೂ ಕೆಲ ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆಯಲ್ಲ ಎಂಬ ಕುರಿತು ಖಾಸಗಿ ಟಿವಿ ವಾಹಿನಿ ಟಿವಿ9 ಜೊತೆ ಮಾತನಾಡಿದ ಅವರು ಸಚಿವ ಸಂಪುಟದಿಂದ ನನ್ನನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು. ಆದರೆ ರಾಜಕೀಯ ಕಸರತ್ತಿನಲ್ಲಿ ನನ್ನನ್ನು ಸಂಪುಟದಿಂದ ಕೈಬಿಟ್ರೆ ಸುಮ್ಮನಿರಲ್ಲ ಎಂದು ಬಿಜೆಪಿ ನಾಯಕರಿಗೆ ಬಹಿರಂಗವಾಗಿ ತಿರುಗೇಟು ನೀಡುವ ಮೂಲಕ ಸಂಪುಟ ಪುನಾರಚನೆ ಮತ್ತಷ್ಟು ಕಗ್ಗಂಟಾಗತೊಡಗಿದೆ.
ರಾಜ್ಯದಲ್ಲಿ ಆರಂಭಿಕವಾಗಿ ಬಿಜೆಪಿ ಸರಕಾರ ರಚನೆ ಆಗಲು ನನ್ನ ಬೆಂಬಲವೇ ಪ್ರಧಾನವಾಗಿತ್ತು. ಹಾಗಾಗಿ ಸಚಿವ ಸಂಪುಟದಿಂದ ನನ್ನ ಕೈಬಿಡುವುದೇ ಆದರೆ ನನ್ನ ಶವದ ಮೇಲೆ ಬಿಜೆಪಿ ಬಾವುಟ ಹಾರಿಸಲಿ ಎಂಬುದಾಗಿ ಮುಖ್ಯಮಂತ್ರಿಗಳಿಗೆ ಬೆದರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಅದೇ ರೀತಿ ಬೇಳೂರು ಗೋಪಾಲಕೃಷ್ಣ, ಸಿ.ಟಿ.ರವಿ, ಅಪ್ಪಚ್ಚು ರಂಜನ್, ಆನೇಕಲ್ ನಾರಾಯಣಸ್ವಾಮಿ, ಸಿ.ಸಿ.ಪಾಟೀಲ್ ಸೇರಿದಂತೆ ಅನೇಕರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆ ನಿಟ್ಟಿನಲ್ಲಿ ಸಚಿವ ಸಂಪುಟ ಪುನಾರಚನೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ನಿರ್ಧಾರದ ಮೇಲೆ ದಿಟ್ಟ ಕ್ರಮ ಕೈಗೊಂಡರು ಕೂಡ ಬಂಡಾಯದ ಬಾವುಟ ಹಾರಿಸಲು ಅತೃಪ್ತ ಶಾಸಕರು ಮತ್ತೆ ರಹಸ್ಯ ಮಾತುಕತೆಯಲ್ಲಿ ತೊಡಗಿದ್ದಾರೆ.
ಮುಖ್ಯಮಂತ್ರಿ ನಿರ್ಧಾರವೇ ಅಂತಿಮ-ಈಶ್ವರಪ್ಪ: ಸಚಿವ ಸಂಪುಟದಲ್ಲಿ ಯಾರನ್ನು ಕೈಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕೆಂಬ ಪರಮಾಧಿಕಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು. ಅದನ್ನು ಬಿಟ್ಟು ಶಾಸಕರು ತಮ್ಮನ್ನೇ ಸಚಿವರನ್ನಾಗಿ ಮಾಡಬೇಕು, ತಮ್ಮನ್ನು ಕೈಬಿಡಬಾರದು ಎಂಬ ಉದ್ದಟತನ ತೋರಿದರೆ ಅದಕ್ಕೆ ಪಕ್ಷ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಸಚಿವ ಸಂಪುಟ ಪುನಾರಚನೆ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಈಶ್ವರಪ್ಪ, ಸಂಸದ ಅನಂತ್ ಕುಮಾರ್ ಅವರು ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಸಂಪುಟ ಪುನಾರಚನೆ ಮತ್ತಷ್ಟು ಕಗ್ಗಂಟು, ನನ್ನ ಬೆಂಬಲದಿಂದಲೇ ಸರಕಾರ ರಚನೆ ಆಗಿದೆ. ಸಂಪುಟದಿಂದ ಕೈಬಿಟ್ರೆ ಸುಮ್ಮನಿರಲ್ಲ, ಸಚಿವ ಗೂಳಿಹಟ್ಟಿ ಶೇಖರ್ ಗುಟುರು, ರಾಜೀನಾಮೆ ಕೇಳಿದ್ರೆ ಆತ್ಮಹತ್ಯೆ ಮಾಡಿಕೊಳ್ತೇನೆ. ಬೆಂಗಳೂರು. ಬಿಜೆಪಿ ಸರಕಾರ ರಚನೆಯಲ್ಲಿ ನನ್ನ ಪಾತ್ರ ಪ್ರಮುಖ. ರಾಜ್ಯಕ್ರೀಡಾ ಸಚಿವ, ಸಚಿವ ಸಂಪುಟದಿಂದ ನನ್ನನ್ನು ಕೈಬಿಡುವುದಿಲ್ಲ. ಎಚ್ಚರಿಕೆ. ನನ್ನ ಶವದ ಮೇಲೆ ಬಾವುಟ ಹಾರಿಸಲಿ.ಬಿಜೆಪಿ ನಾಯಕರಿಗೆ ಗೂಳಿಹಟ್ಟಿ ತಿರುಗೇಟು.