ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ಪುನಾರಚನೆ ಕಸರತ್ತು ನಡೆಸುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಮತ್ತೊಂದು ಕಂಟಕವನ್ನು ತಂದೊಡ್ಡಿದೆ. ಪಕ್ಷದಲ್ಲಿ ಇದ್ರೆ ಇರ್ತಾನೆ, ಇಲ್ಲಾಂದ್ರೆ ಹೋಗ್ತಾನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ತನ್ನನ್ನು ಏಕವಚನದಲ್ಲಿ ಬೈದು ಸಚಿವ ಸ್ಥಾನ ಕೊಡಿ ಎಂದು ಕೇಳಿದ ಈಡಿಗ ಸಮುದಾಯಕ್ಕೂ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಸುಮಾರು 20 ಮಂದಿ ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಬಾಂಬ್ ಸಿಡಿಸಿದ್ದಾರೆ!
ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಂಸದ ಅನಂತಕುಮಾರ್ ದೆಹಲಿಯಲ್ಲಿ ಪಕ್ಷದ ವರಿಷ್ಠ ನಿತಿನ್ ಗಡ್ಕರಿ ಅವರ ಜತೆ ಸಚಿವ ಸಂಪುಟ ಪುನಾರಚನೆ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ರಾಜ್ಯರಾಜಕಾರಣದಲ್ಲಿ ಸಚಿವಗಿರಿ ಮೇಲೆ ಕಣ್ಣಿಟ್ಟಿರುವ ಶಾಸಕರು ಬೆದರಿಕೆಯ ತಂತ್ರಕ್ಕೆ ಮುಂದಾಗಿದ್ದಾರೆ.
ತನ್ನ ಬೆಂಬಲದಿಂದಲೇ ಬಿಜೆಪಿ ಸರಕಾರ ರಚನೆ ಆಗಿರುವುದಾಗಿ ಹೇಳಿರುವ ಕ್ರೀಡಾಸಚಿವ ಗೂಳಿಹಟ್ಟಿ ಶೇಖರ್, ತನ್ನ ರಾಜೀನಾಮೆ ಕೇಳಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಏತನ್ಮಧ್ಯೆ ಸಚಿವ ಸಂಪುಟ ಪುನಾರಚನೆ ಕಸರತ್ತು ಸಾಕಷ್ಟು ಅಸಮಾಧಾನ ಹುಟ್ಟುಹಾಕಿದೆ. ತಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಒಂದು ವೇಳೆ ಸಂಪುಟದಲ್ಲಿ ಸಚಿವ ಸ್ಥಾನ ನೀಡದಿದ್ದಲ್ಲಿ ನಾಳೆ 20 ಮಂದಿ ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುವುದಾಗಿ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಆದರೆ ರಾಜೀನಾಮೆ ನೀಡುವ ಪಟ್ಟಿಯಲ್ಲಿ ಯಾವೆಲ್ಲ ಶಾಸಕರಿದ್ದಾರೆ ಎಂಬ ಗುಟ್ಟನ್ನು ಬೇಳೂರು ಬಿಟ್ಟುಕೊಟ್ಟಿಲ್ಲ. ಕಳೆದ ಬಾರಿಯೂ ರೆಡ್ಡಿ ಸಹೋದರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಶಾಸಕರನ್ನು ಹೈಜಾಕ್ ಮಾಡಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಸಂದರ್ಭದಲ್ಲಿಯೂ ಸಹ ರೇಣುಕಾಚಾರ್ಯ, ಬೇಳೂರು ಗೋಪಾಲಕೃಷ್ಣ ಪ್ರಮುಖ ಪಾತ್ರವಹಿಸಿದ್ದರು. ತದನಂತರ ಸಚಿವಸ್ಥಾನ ಗಿಟ್ಟಿಸಿಕೊಂಡ ನಂತರ ರೇಣುಕಾಚಾರ್ಯ ರೆಡ್ಡಿ ಸಹೋದರರ ವಿರುದ್ಧವೇ ತಿರುಗಿ ಬಿದ್ದಿದ್ದರು. ಇದೀಗ ಬೇಳೂರು ಕೂಡ ಬ್ಲ್ಯಾಕ್‌ಮೇಲ್ ಹಾದಿ ತುಳಿದಿದ್ದಾರೆ.
ಇತ್ತೀಚೆಗಷ್ಟೇ ಸಚಿವ ಸಂಪುಟದಲ್ಲಿ ತನಗೆ ಸ್ಥಾನ ನೀಡದಿದ್ದರೆ ತನ್ನ ದಾರಿಯನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಬೇಳೂರು ಬೆದರಿಕೆ ಹಾಕಿದ್ದರು. ಆದರೆ ಅದಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ, ಪಕ್ಷದಲ್ಲಿ ಇರುವುದಾದರೆ ಇರಲಿ, ಇಲ್ಲದಿದ್ದರೆ ಹೊರ ಹೋಗಲಿ ಎಂದು ತಿರುಗೇಟು ನೀಡಿದ್ದರು. ಅಧ್ಯಕ್ಷರ ತಿರುಗೇಟಿನಿಂದ ತೆಪ್ಪಗಾದ ಬೇಳೂರು ತಾನು ಹಾಗೇ ಹೇಳಿಯೇ ಇಲ್ಲ, ಮಾಧ್ಯಮಗಳು ತಿರುಚಿ ಬರೆದಿವೆ ಎಂದು ಉಲ್ಟಾ ಹೊಡೆದಿದ್ದರು. ಇದೀಗ ಮತ್ತೆ ತಿರುಗಿ ಬಿದ್ದಿರುವ ಬೇಳೂರು ಈಡಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡಿ ಎಂದು ಕೇಳಲು ಹೋದ ಸಮಾಜದ ಮುಖಂಡರಿಗೆ ಈಶ್ವರಪ್ಪ ಅವಮಾನ ಮಾಡಿದ್ದಾರೆ. ಅಷ್ಟೇ ಅಲ್ಲ ಇರುವುದಾದ್ರೆ ಇರ್ತಾನೆ ಇಲ್ಲದಿದ್ದರೆ ಪಕ್ಷ ಬಿಟ್ಟು ಹೋಗ್ತಾನೆ ಅಂತ ಏಕವಚನದಲ್ಲಿ ಮಾತನಾಡಿರುವುದು ತನಗೆ ತುಂಬಾ ನೋವು ತಂದಿದೆ. ಹಾಗಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಬೆದರಿಕೆ ಹಾಕಿದ್ದಾರೆ.
ಗೂಳಿಹಟ್ಟಿ ಶೇಖರ್, ಅರವಿಂದ ಲಿಂಬಾವಳಿ ಸೇರಿದಂತೆ ಪ್ರಮುಖರು ಸಚಿವ ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆನ್ನಲಾಗಿದೆ. ಅಲ್ಲದೇ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಿ.ಟಿ.ರವಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಹೈಕಮಾಂಡ್ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದ್ದಾರೆ. ಮತ್ತೊಂದೆಡೆ ಸಚಿವಗಿರಿ ಆಕಾಂಕ್ಷಿಯ ಶಾಸಕರು ಈ ಬಾರಿಯ ಸಚಿವ ಸಂಪುಟ ಪುನಾರಚನೆಯಲ್ಲಿ ತಮಗೆ ಸ್ಥಾನ ಸಿಗಬೇಕೆಂದು ವಿವಿಧ ಬೆದರಿಕೆಯ ತಂತ್ರ ಅನುಸರಿಸುತ್ತಿರುವುದು ಬಿಜೆಪಿ ಸರಕಾರವನ್ನು ಮತ್ತೊಂದು ಇಕ್ಕಟ್ಟಿಗೆ ಸಿಲುಕಿಸಿದೆ.