ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಲ್ಲೆಡೆ ಆರ್ಥಿಕ ಅವಿವೇಕ ತಾಂಡವವಾಡುತ್ತಿದೆ: ಬರಗೂರು (Baraguru Ramachandrappa | Bandaya sahithya | Chithradurga)
Bookmark and Share Feedback Print
 
ಇಪ್ಪತ್ತನೆಯ ಶತಮಾನ ಚಲನಶೀಲತೆಯ ಕಾಲವಾದರೆ, ಇಪ್ಪತ್ತೊಂದನೇ ಶತಮಾನ ಶರಣಾಗತಿಯ ಕಾಲ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಬಂಡಾಯ ಸಾಹಿತ್ಯ ಸಂಘಟನೆ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ 'ಬಂಡಾಯ ಸಾಹಿತ್ಯ ಮೂವತ್ತು ವರುಷ, ರಾಜ್ಯಮಟ್ಟದ ಜನಸಂಸ್ಕೃತಿ ಸಮಾವೇಶ'ವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

80ರ ದಶಕದ ಕಾಲ ಸೈದ್ದಾಂತಿಕ ಸಮರಕ್ಕೆ ವೇದಿಕೆ ಕಲ್ಪಿಸಿ ಅನೇಕ ಬದಲಾವಣೆಗಳಿಗೆ ಕಾರಣವಾಯಿತು. ಸಾಮಾಜಿಕ ವಿವೇಕ ಎಚ್ಚರ ಸ್ಥಿತಿಯಲ್ಲಿತ್ತು. ಸೆರೆಮನೆಯಲ್ಲಿದ್ದ ಶಿಕ್ಷಣಕ್ಕೆ ವಿಮುಕ್ತಿ ದೊರೆತು ಮಣ್ಣಿನ ಮನೆಗೆ ಬಂತು. ಅಸ್ಮಿತೆಯಿಲ್ಲದೆ ಸಮಾಜದ ಅಂಚಿಗೆ ಸರಿದಿದ್ದ ಅನೇಕ ಸಮುದಾಯಗಳಲ್ಲಿ ಆತ್ಮವಿಶ್ವಾಸ ಮೂಡಿ ಬರಹಗಾರರು, ಕಲಾವಿದರು ಹೊರಹೊಮ್ಮಿದರು ಎಂದರು.

ಆದರೆ ಇಂದು ಬಂಡವಾಳದ ಮುಂದೆ ಭಾರತ ಸೇರಿದಂತೆ ತೃತೀಯ ಜಗತ್ತಿನ ರಾಷ್ಟ್ರಗಳು ಮಂಡಿಯೂರಿ ಕುಳಿತಿವೆ. ಸಂವಿಧಾನ ಮೀರಿ ಒಪ್ಪಂದಗಳಾಗುತ್ತಿವೆ. ಉದ್ಯಮವೇ ಪ್ರಧಾನವಾಗಿ ವ್ಯಕ್ತಿ, ಸಂಸ್ಕೃತಿ ಸರಕಾಗುತ್ತಿವೆ. ಸಾಮಾಜಿಕ ವಿವೇಕದ ಬದಲಾಗಿ ಆರ್ಥಿಕ ಅವಿವೇಕ ತಾಂಡವವಾಡುತ್ತಿದೆ. ಜಾತಿ ವಿನಾಶದ ಬದಲಾಗಿ ಜಾತಿ ಪ್ರಜ್ಞೆ, ಮಾನವೀಯತೆ ಜಾಗದಲ್ಲಿ ಮತೀಯತೆ ವಿಜೃಂಭಿಸುತ್ತ ಪ್ರಧಾನಧಾರೆಯಾಗುತ್ತಿದೆ. ಆತ್ಮವಿಶ್ವಾಸ ಮರೆಯಾಗಿ ಅಸಹಾಯಕತೆ ಪ್ರವೇಶಿಸಿದೆ ಎಂದು ವಿಶ್ಲೇಷಿಸಿದರು.

ಬಂಡಾಯ ಸಂಘಟನೆ ಉದ್ಯಮ ವಿರೋಧಿಯಲ್ಲ. ಬಂಡವಾಳ ಭಕ್ತನಾಗಿ ಬರಬೇಕೇ ಹೊರತು ಭಗವಂತನಾಗಿ ಅಲ್ಲ. ಈ ದೇಶದ ಬಡವ ದೈವವಾಗಿ ಇವರ ಮುಂದೆ ಬಂಡವಾಳ ಭಕ್ತನಾಗಬೇಕು. ಹಾಗಾದಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ, ಜನಸಂಸ್ಕೃತಿ ಉಳಿಯುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ