ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಷ್ಟದಲ್ಲಿ ಕೈಹಿಡಿದವರನ್ನು ಪಕ್ಷ ಕೈಬಿಡಲ್ಲ: ರೆಡ್ಡಿ ಅಭಯ (Janardana Reddy | BJP | Yeddyurappa | Ishwarappa | Goolihatty Shekar)
ಬಿಜೆಪಿ ಪಕ್ಷ ಸರಕಾರ ರಚನೆ ಮಾಡುವ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದಾಗ ಪಕ್ಷಕ್ಕೆ ಬೆಂಬಲ ನೀಡಿದವರಿಗೆ ಅನ್ಯಾಯ ಮಾಡಬಾರದು ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ಸಂಪುಟ ಪುನಾರಚನೆಯ ಹಿನ್ನೆಲೆಯಲ್ಲಿ ಕೆಲವು ಶಾಸಕರನ್ನು ಕೈಬಿಡಲಾಗುತ್ತಿದೆ ಎಂಬ ಊಹಾಪೋಹದ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಕಷ್ಟದಲ್ಲಿದ್ದಾಗ ಕೈಹಿಡಿದವರನ್ನು ಬಿಜೆಪಿ ಕೈಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಪಕ್ಷೇತರರನ್ನೂ ಸಚಿವ ಸಂಪುಟದಿಂದ ಕೈಬಿಡಲ್ಲ ಎಂದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಪಕ್ಷೇತರರ ಸಹಾಯ ಅಪಾರವಾದದ್ದು, ಹಾಗಾಗಿ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಅವರನ್ನು ಕೈಬಿಡಬಾರದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಜತೆ ಮಾತನಾಡಿರುವುದಾಗಿಯೂ ರೆಡ್ಡಿ ಈ ಸಂದರ್ಭದಲ್ಲಿ ಹೇಳಿದರು.
ಶಿಸ್ತಿಗೆ ಹೆಸರಾಗಿರುವ ಭಾರತೀಯ ಜನತಾ ಪಕ್ಷ ಯಾರಿಗೂ ಅನ್ಯಾಯ ಮಾಡದು ಎಂದು ತಿಳಿಸಿದರು. ಅಲ್ಲದೆ, ಪಕ್ಷದ ಹಿರಿಯರು, ನಿಷ್ಠಾವಂತರಿಗೆ ಸಚಿವ ಸ್ಥಾನ ನೀಡುವಂತೆಯೂ ಒತ್ತಾಯಿಸಿದರು.
ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಹಾಗೂ ಶಿವನಗೌಡ ನಾಯಕ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗುತ್ತಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆ ನಿಟ್ಟಿನಲ್ಲಿ ತಮ್ಮ ರಾಜೀನಾಮೆ ಕೇಳಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೂಳಿಹಟ್ಟಿ ಬೆದರಿಕೆ ಹಾಕಿದ್ದರು. ಅದೇ ರೀತಿ ಸಂಪುಟದಿಂದ ಕೈಬಿಟ್ಟರೆ ತಾವು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಜನತಾ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ನಾಯಕ್ ಎಚ್ಚರಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆ ಬಗ್ಗೆ ರೆಡ್ಡಿ ಪ್ರತಿಕ್ರಿಯೆ ನೀಡಿದರು.
ಪಕ್ಷದಲ್ಲಿನ ಯಾವ ಸಚಿವರಿಗೂ ಅನ್ಯಾಯ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಂಪುಟ ಪುನಾರಚನೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ತವಾದ ನಿರ್ಧಾರವನ್ನೇ ಕೈಗೊಳ್ಳುತ್ತಾರೆ ಎಂದರು.