ಬೆಂಗಳೂರು, ಮಂಗಳವಾರ, 21 ಸೆಪ್ಟೆಂಬರ್ 2010( 11:24 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ಪುನಾರಚನೆಗೆ ಮುಂದಾದ ಬೆನ್ನಲ್ಲೇ ಒಬ್ಬರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎನ್ನುತ್ತಿದ್ದರೆ, ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುವ ಮೂಲಕ ಬಿಜೆಪಿಯ ಭಿನ್ನಮತ ಬೀದಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸಂಪುಟ ವಿಸ್ತರಣೆಗಾಗಿ ಬೆಂಗಳೂರು ದೆಹಲಿ ಸುತ್ತುತ್ತಾ ಮುಖ್ಯಮಂತ್ರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿಯ ಆಂತರಿಕ ಅಸಮಾಧಾನ ಈಗ ಹಾದಿ ಬೀದಿ ರಂಪವಾಗಿದೆ. ಇದು ಶಿಸ್ತಿನ ಪಕ್ಷದ ಮುಖವಾಡ ಬಯಲು ಮಾಡಿದಂತಾಗಿದೆ ಎಂದು ಚುಚ್ಚಿದರು.
ಭಿಕ್ಷುಕರ ಸಾವಿನ ಹಿನ್ನೆಲೆಯಲ್ಲಿ ಸಚಿವ ಸುಧಾಕರ್ ಅವರ ಖಾತೆ ಬದಲು ಮಾಡಿದ ರೀತಿಯಲ್ಲೇ ಮಡಿಕೇರಿಯಲ್ಲಿ ಚುಚ್ಚುಮದ್ದಿನ ವ್ಯತಿರಿಕ್ತ ಪರಿಣಾಮದಿಂದ ಮೂವರು ಸಾವನ್ನಪ್ಪಿರುವ ಪ್ರಕರಣದಲ್ಲೂ ಮುಖ್ಯಮಂತ್ರಿಗಳು ಧೈರ್ಯ ತೋರಿಸುತ್ತಾರೆಯೇ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು.
ಆರೋಗ್ಯ ಸಚಿವರು ಅಧಿಕಾರಿಗಳು ತಮ್ಮ ಮಾತನ್ನೇ ಕೇಳುತ್ತಿಲ್ಲ ಎಂದು ಅಸಹಾಯಕತೆ ತೋರುತ್ತಿದ್ದಾರೆ. ರಾಮಚಂದ್ರಗೌಡರಿಗಿಂತ ಹತ್ತು ಪಟ್ಟು ಹೆಚ್ಚು ಭ್ರಷ್ಟರು ಬಿಜೆಪಿಯಲ್ಲಿದ್ದಾರೆ. ಅವರ ರಾಜೀನಾಮೆ ಏಕೆ ಕೇಳಲಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶವ್ಯಕ್ತಪಡಿಸಿದರು.