ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮರಕ್ಕೂ ಮಠಕ್ಕೂ ವ್ಯತ್ಯಾಸ ಇಲ್ಲ: ರಾಘವೇಶ್ವರ ಸ್ವಾಮೀಜಿ (Gokarna | Raghaveshwara | Kumata | Dhareshwara)
Bookmark and Share Feedback Print
 
ಮರದಲ್ಲಿನ ಹೂ-ಹಣ್ಣನ್ನು ನೋಡಿ ಸಂತೋಷಪಡುವಾಗ ಅದರ ಜತೆಗೆ ಮರದಲ್ಲಿನ ಹೂ-ಹಣ್ಣುಗಳಿಗೆ ಕಾರಣವಾದ ಮರದ ಕಾಂಡ, ಬೇರುಗಳನ್ನೂ ಸ್ಮರಿಸುವುದು ಅವಶ್ಯ. ಬೆಳೆದು ನಿಂತು ನಳನಳಿಸುವ ಮರದ ಹಿನ್ನೆಲೆಯಲ್ಲಿ ಕಾಂಡದ ಬೇರುಗಳ ನಿರಂತರ ಶ್ರಮವಿದೆ ಎಂದು ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಉಪಮೆ ಮೂಲಕ ಮಠಗಳ ಕಾರ್ಯಚಟುವಟಿಕೆಗಳನ್ನು ಮರಕ್ಕೆ ಹೋಲಿಸಿದರು.

ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಕುಮಟಾ ಮಂಡಲದ ವಾಲಗಳ್ಳಿ ಕೆಕ್ಕಾರು ಹಾಗೂ ಧಾರೇಶ್ವರ ವಲಯಗಳ ಶಿಷ್ಯ ಸಮುದಾಯದ ಶ್ರೀ ಗುರುಭಿಕ್ಷಾ ಸೇವೆ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದ ಅವರು, ಬೇರುಗಳು ನೀರು ಸಾರಗಳನ್ನು ನೀಡುವುದರಿಂದಲೇ ಹೂ-ಹಣ್ಣುಗಳಾಗಿವೆ. ಇದನ್ನು ಮರೆತು ನಾವು ಕೇವಲ ಮರದ ಚಿಗುರುಗಳನ್ನು ಹೂ-ಹಣ್ಣುಗಳನ್ನು ಮಾತ್ರ ಆಧರಿಸಿದರೆ ಕೃತಘ್ನರಾಗುತ್ತೇವೆ ಎಂದರು.

ಮರಕ್ಕೂ ಮಠಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಮಠವೂ ಸಹ ಮರದಂತೆಯೇ ಎಲ್ಲ ರೀತಿಯಲ್ಲಿ ಸಮಾಜಕ್ಕೆ ಆಶ್ರಯ, ನೆರಳು ನೀಡುವ ಮಹಾವೃಕ್ಷ. ಈ ಮಠದ ಹಿನ್ನೆಲೆಯಲ್ಲಿ ಪೂರ್ವಾಚಾರ್ಯರ ದೀರ್ಘ ಪರಂಪರೆಯಿದೆ. ಅವರ ದಿವ್ಯತಪಃಶಕ್ತಿಯಿದೆ. ಆ ನೀರು ಹಾಗೂ ಸಾರದ ಬಲದಿಂದಲೇ ಇಂದು ಈ ಮಠವೆಂಬ ಮರ ಖ್ಯಾತವಾಗಿದೆ ಎಂದರು.

ಯಾವುದೇ ವಿಶೇಷ ಆರ್ಥಿಕ ಶಕ್ತಿ, ವೈಭವಗಳಿಲ್ಲದ ಕಾಲದಲ್ಲಿಯೂ ನಮ್ಮ ಹಿಂದಿನ ಎಲ್ಲ ಗುರುಗಳೂ ತಮ್ಮ ಕ್ಲೇಶವನ್ನು ಪರಿಗಣಿಸದೆ ಲೋಕಹಿತಕ್ಕಾಗಿ ಬದುಕಿನ ಗಂಧವನ್ನು ತೇಯ್ದಿದ್ದಾರೆ, ಕರ್ಪೂರದಂತೆ ಉರಿದು ಸಮಾಜಕ್ಕೆ ಬೆಳಕಿನ ಮಾರ್ಗ ತೋರಿದ್ದಾರೆ. ಶಿಷ್ಯರಾದವರು ಅನುದಿನವೂ ಇಂಥ ಗುರುಪರಂಪರೆಯ ಸ್ಮರಣೆ ಮಾಡಬೇಕು. ಇದು ಕೇವಲ ಸೂಚನೆ ಯಲ್ಲ, ಆದೇಶ ಎಂದು ಶ್ರೀಗಳು ಅಭಿಪ್ರಾಯ ಪಟ್ಟರು.

ಮರದ ಒಂದು ಕೊಂಬೆಯನ್ನು ಕತ್ತರಿಸಿದರೆ ಮರಕ್ಕೆ ಏನೂ ಆಗದು. ಆದರೆ ಬೇರನ್ನು ಕತ್ತರಿಸಿದರೆ ಮರವು ಉಳಿಯುವುದಿಲ್ಲ. ಆದ್ದರಿಂದ ಬೇರಿ ನಿಂದ ಬೇರಾಗುವ ಕಾರ್ಯ ಬೇಡ. ನಮ್ಮ ಅನೇಕ ಪೂರ್ವಾಚಾರ್ಯರ ಜನ್ಮಭೂಮಿ ಗೋಕರ್ಣ. ಇಂಥ ಪುಣ್ಯ ಸ್ಥಳದಲ್ಲಿ ಅವರೆಲ್ಲರ ಸ್ಮರಣೆ ಮಾಡುವುದು ನಮ್ಮ ಕರ್ತವ್ಯ ಎಂದರು.
ಸಂಬಂಧಿತ ಮಾಹಿತಿ ಹುಡುಕಿ