ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಾಹಿತ್ಯ ಸಮ್ಮೇಳನ; ಸಚಿವ-ಶಾಸಕರಿಂದ ವೇತನದ ದೇಣಿಗೆ (77th Akhila Bharata Kannada Sahithya Sammelan | Bangalore | Kannada | Nuditeru)
Bookmark and Share Feedback Print
 
ಉದ್ಯಾನಗರಿಯಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವರು, ಶಾಸಕರು ಮತ್ತು ಸರಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ದೇಣಿಗೆ ರೂಪದಲ್ಲಿ ನೀಡಲು ನಿರ್ಧರಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾಗತ ಸಮಿತಿ ಮಹಾಧ್ಯಕ್ಷರಾಗಿ ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ್ ಅವರನ್ನು ನೇಮಕಗೊಳಿಸಲಾಗಿದ್ದು, ಇದೇ ಸಂದರ್ಭದಲ್ಲಿ ಹಲವು ನಿರ್ಣಯಗಳನ್ನು ಕೂಡ ಅಂಗೀಕರಿಸಲಾಯಿತು.

ಡಿಸೆಂಬರ್ ಕೊನೆಯ ವಾರದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿರುವ ಕನ್ನಡ ಜಾತ್ರೆಯ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರಗಳನ್ನು ಕೂಡ ಸರಕಾರ ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣದ ಉಸ್ತುವಾರಿ ಸಚಿವರೂ ಆಗಿರುವ ಅಶೋಕ್ ಭರವಸೆ ನೀಡಿದರು.

40 ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೂ ಮೊದಲು ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದಲ್ಲಿ 'ನುಡಿತೇರು' ಜಾಗೃತಿ ಜಾಥಾವನ್ನು ಕೂಡ ನಡೆಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರ್ ಪ್ರಸಾದ್ ತಿಳಿಸಿದರು.

ಮಂತ್ರಿ-ಮಾಗಧರಿಂದ ದೇಣಿಗೆ...
ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಮೇಯರ್, ಕಸಾಪ ಪದಾಧಿಕಾರಿಗಳು ತಮ್ಮ ವೇತನದಿಂದಲೇ ದೇಣಿಗೆಯನ್ನು ನೀಡುವ ಮಹತ್ವದ ನಿರ್ಣಯವನ್ನು ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಸಮ್ಮೇಳನ ವೈಭವದಿಂದ ನಡೆಯಬೇಕೆಂಬ ನಿಟ್ಟಿನಲ್ಲಿ ಶಾಸಕರು, ಮೇಯರ್, ಸಂಸದರು, ಎಂಎಲ್‌ಸಿಗಳು, ಸರಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ದೇಣಿಗೆಯನ್ನಾಗಿ ನೀಡಲಿದ್ದರೆ, ಸಚಿವರುಗಳು ತಮ್ಮ ಒಂದು ತಿಂಗಳ ವೇತನವನ್ನೇ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ರೂಪದಲ್ಲಿ ಅರ್ಪಿಸಲಿದ್ದಾರೆ.

ಶೀಘ್ರದಲ್ಲೇ ಅಧ್ಯಕ್ಷರ ಆಯ್ಕೆ...
ಅಕ್ಟೋಬರ್ ತಿಂಗಳಾಂತ್ಯದಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಸಾಪ ಸಾಮಾನ್ಯ ಸಭೆಯಲ್ಲಿ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.

ಈ ಹಿಂದೆ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆದಿರುವುದು 40 ವರ್ಷಗಳ (1970) ಹಿಂದೆ. ಕೋಟೆ ಹೈಸ್ಕೂಲ್ ಮೈದಾನದಲ್ಲಿ ನಡೆದಿದ್ದ ಸಮ್ಮೇಳನಕ್ಕೆ ದೇಜಗೌ ಅಧ್ಯಕ್ಷರಾಗಿದ್ದರು.

ಈ ಬಾರಿಯ ಸಮ್ಮೇಳನದ ಅಧ್ಯಕ್ಷ ಗಾದಿಗೆ ಪ್ರೊ. ವೆಂಕಟಸುಬ್ಬಯ್ಯ, ಪ್ರೊ. ಚಿದಾನಂದ ಮೂರ್ತಿ, ಹಂಪ ನಾಗರಾಜಯ್ಯ, ಸಿ.ಪಿ. ಕೃಷ್ಣಕುಮಾರ್, ಎಂ.ಎಂ. ಕಲ್ಬುರ್ಗಿ ಸೇರಿದಂತೆ ಹಲವರ ಹೆಸರುಗಳು ತೇಲುತ್ತಿವೆಯಾದರೂ, ಯಾರ ಹೆಸರೂ ಅಂತಿಮಗೊಂಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ