ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾನು ಸಾಚಾ; ಆರ್‌ವಿ ಆದಾಯ ಮೂಲ ಯಾವುದು?: ಕಟ್ಟಾ (Desh pandy | Katta subramnaya naidu | KIADB | BJP)
Bookmark and Share Feedback Print
 
ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಿಸಿದಂತೆ ನಾನು ತಲೆ ತಗ್ಗಿಸುವಂಥ ಕೆಲಸ ಮಾಡಿಲ್ಲ. ಸರಕಾರದ ಬೊಕ್ಕಸಕ್ಕೆ ನಷ್ಟವಾಗುವ ಕೆಲಸವನ್ನೂ ಮಾಡಿಲ್ಲ. ಹಗರಣದಲ್ಲಿ ನನ್ನ ಪಾತ್ರವೇನೂ ಇಲ್ಲ. ಹಾಗಾಗಿ ಹುಸಿ ಆರೋಪ ಮಾಡುವುದು ಸರಿಯಲ್ಲ ಎಂದು ವಸತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸತ್ಯಾಸತ್ಯತೆಯನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಪ್ರತಿಪಕ್ಷಗಳು ಆರೋಪ ಮಾಡುವಂತೆ ಇಟಾಸ್ಕ್ ಕಂಪನಿಯಲ್ಲಿ ನಾನು ಪಾಲುದಾರನಲ್ಲ. ನನ್ನ ಮೇಲೆ ಷಡ್ಯಂತ್ರ ನಡೆಸಿ ಗೂಬೆ ಕೂರಿಸಲಾಗುತ್ತಿದೆ. ಅಷ್ಟೇ ಅಲ್ಲ ಹಗರಣದ ಕುರಿತಂತೆ ನ್ಯಾಯಾಲಯದ ತೀರ್ಪಿಗೆ ತಾನು ಬದ್ಧವಾಗಿರುವುದಾಗಿ ಕಟ್ಟಾ ಈ ಸಂದರ್ಭದಲ್ಲಿ ಹೇಳಿದರು.

ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಬರೇ ಆರೋಪಗಳ ಸುರಿಮಳೆ ಮಾಡುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಸೂಕ್ತ ದಾಖಲೆ ಇದ್ದರೆ ಒದಗಿಸಿ ಎಂದು ಅವರು ಸವಾಲು ಹಾಕಿದ್ದಾರೆ. ಹಗರಣದ ಸತ್ಯಾಸತ್ಯತೆಯನ್ನು ಕೋರ್ಟ್ ನಿರ್ಧರಿಸುತ್ತದೆ.

ಮೊದಲಿನಿಂದಲೂ ನಾನು ರಿಯಲ್ ಎಸ್ಟೇಟ್ ಉದ್ಯಮಿ. ನನ್ನ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಲಾಗಿದೆ. ನನ್ನ ಪುತ್ರ ಜಗದೀಶ್ ಕಟ್ಟಾ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.

ಶೀಘ್ರದಲ್ಲೇ ಎಲ್ಲದಕ್ಕೂ ಉತ್ತರ ನೀಡ್ತೇನೆ: ಹಗರಣದ ಕುರಿತು ಯಾರು ಷಡ್ಯಂತ್ರ ನಡೆಸಿದ್ದಾರೆಂಬ ಬಗ್ಗೆ ಸುದ್ದಿಗಾರರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರೂ ಕೂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ನಾನು ಶೀಘ್ರದಲ್ಲೇ ಎಲ್ಲದಕ್ಕೂ ಉತ್ತರ ನೀಡುತ್ತೇನೆ. ಅದಕ್ಕೆ ಬೇಕಾದ ದಾಖಲಾತಿಗಳನ್ನು ಸಂಗ್ರಹಿಸುತ್ತಿದ್ದೇನೆ. ಆ ನಂತರ ಎಲ್ಲವನ್ನೂ ಬಹಿರಂಗಗೊಳಿಸುತ್ತೇನೆ ಎಂದು ತಿಳಿಸಿದರು.

ದೇಶಪಾಂಡೆಗೆ ಕೋಟಿ, ಕೋಟಿ ಆಸ್ತಿ ಎಲ್ಲಿಂದ ಬಂತು?: ಕೆಐಎಡಿಬಿ ಭೂ ಹಗರಣದಲ್ಲಿ ಯಾವುದೇ ಸೂಕ್ತವಾದ ಪುರಾವೆ ಇಲ್ಲದಿದ್ದರೂ ಕೂಡ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆಯವರು, ನನ್ನ ರಾಜೀನಾಮೆ ಕೇಳಿದ್ದಾರೆ. ಹಾಗಾದರೆ ನೆರೆ ಸಂತ್ರಸ್ತರ ಹಣದಲ್ಲಿ ಗೋಲ್‌ಮಾಲ್ ನಡೆಯಿತಲ್ಲಾ ಅದಕ್ಕೆ ತಾವು ರಾಜೀನಾಮೆ ನೀಡಿದ್ದೀರಾ? ಎಂದು ನಾಯ್ಡು ಖಾರವಾಗಿ ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಹಗರಣಗಳ ರಾಜ. ಈಗಾಗಲೇ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ 200 ಸಚಿವರ ಹಗರಣಗಳ ಪಟ್ಟಿ ನನ್ನ ಬಳಿ ಇದೆ. ಆ ಸಂದರ್ಭದಲ್ಲಿ ನೀವು ಅವರ ರಾಜೀನಾಮೆ ಕೇಳಿದ್ದೀರಾ? ನನ್ನ ರಾಜೀನಾಮೆ ಕೇಳುವ ನೈತಿಕತೆ ದೇಶಪಾಂಡೆಗೆ ಇಲ್ಲ ಎಂದು ನಾಯ್ಡು ತಿರುಗೇಟು ನೀಡಿದರು.

ಬೆಂಗಳೂರಿನ ದೇವನಹಳ್ಳಿ ಸಮೀಪ ಮಗ, ಹೆಂಡತಿ ಹಾಗೂ ಸೊಸೆಯ ಹೆಸರಿನಲ್ಲಿ ಭೂಮಿ ಖರೀದಿ ಮಾಡಿದ್ದೀರಲ್ಲ ಅದು ಅಕ್ರಮವಲ್ಲವೇ ಎಂದು ದೇಶಪಾಂಡೆಯನ್ನು ನಾಯ್ಡು ತರಾಟೆಗೆ ತೆಗೆದುಕೊಂಡರು. ನಿಮ್ಮ ಪೂರ್ವಜರ ಆಸ್ತಿ ಮೌಲ್ಯ ಎಷ್ಟು, ನಿಮ್ಮ ಬೇನಾಮಿ ಆಸ್ತಿಯ ಮೌಲ್ಯ ಎಷ್ಟು ಎಂಬುದನ್ನು ಬಹಿರಂಗಪಡಿಸಿ. ನಾನು ಕೂಡ ನನ್ನ ಆದಾಯ, ಆಸ್ತಿಯನ್ನು ಬಹಿರಂಗಪಡಿಸುವೆ ಎಂದು ನಾಯ್ಡು ಬಹಿರಂಗವಾಗಿ ಸವಾಲು ಹಾಕಿದರು.
ಸಂಬಂಧಿತ ಮಾಹಿತಿ ಹುಡುಕಿ