ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಸರಕಾರ ಪತನ?; 20 ಶಾಸಕರ ಬೆಂಬಲ ವಾಪಸ್ (BJP | Yeddyurappa | Ishwarappa | Sri ramulu | Congress | Kumaraswamy)
Bookmark and Share Feedback Print
 
NRB
ಅತೃಪ್ತ ಶಾಸಕರು ಬಂಡಾಯದ ಕಹಳೆ ಮೊಳಗಿಸಿರುವುದು ಬಿಜೆಪಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೆ, ಅತೃಪ್ತ ಶಾಸಕರ ಮನವೊಲಿಸಲು ಚೆನ್ನೈನಲ್ಲಿ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲಿಯೇ ಬುಧವಾರ ಬೆಳಗ್ಗೆ ದಿಢೀರ್ ಬೆಳವಣಿಗೆ ಎಂಬಂತೆ 20 ಮಂದಿ ಬಿಜೆಪಿ ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಪತ್ರವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ಗೆ ಸಲ್ಲಿಸುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರ ಪತನದ ಅಂಚಿಗೆ ಬಂದು ತಲುಪಿದೆ.

20 ಮಂದಿ ಶಾಸಕರು ರಾಜೀನಾಮೆ: ಬಿಜೆಪಿ ಶಾಸಕರಾದ ಶಂಕರಲಿಂಗೇಗೌಡ, ಶಿವನಗೌಡ ನಾಯಕ್ ಮತ್ತು ಕುಮಾರಸ್ವಾಮಿ ಮಾತುಕತೆ ನಡೆಸಿದ ನಂತರ ಆರು ಪಕ್ಷೇತರ ಸೇರಿದಂತೆ ಒಟ್ಟು 20 ಮಂದಿ ಬಿಜೆಪಿ ಶಾಸಕರು ಪಕ್ಷೇತರ ಸಚಿವ ನರೇಂದ್ರ ಸ್ವಾಮಿ ಮೂಲಕ ಬೆಂಬಲ ವಾಪಸ್ ಪಡೆದ ಪತ್ರವನ್ನು ರಾಜ್ಯಪಾಲರಿಗೆ ತಲುಪಿಸಿದ್ದಾರೆ. ಕುಮಾರಸ್ವಾಮಿ ಕೂಡ ಶಾಸಕರಾದ ಶಂಕರಲಿಂಗೇಗೌಡ, ಶಿವನಗೌಡ ನಾಯಕ್ ಜೊತೆಗೆ ದಿಢೀರನೆ ರಾಜಭವನಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಏತನ್ಮಧ್ಯೆ ಏಳು ಮಂದಿ ಸಚಿವರು ರಾಜೀನಾಮೆ ಕೊಡಲು ನಿರ್ಧರಿಸಿದ್ದು, ಸಂಜೆಯೊಳಗೆ ಸುಮಾರು 35 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಬಾಂಬ್‌ವೊಂದನ್ನು ಸಿಡಿಸಿದ್ದಾರೆ!

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ವರ್ತೂರು ಪ್ರಕಾಶ್ ರಾಜಭನಕ್ಕೆ ಭೇಟಿ: ಏತನ್ಮಧ್ಯೆ ಕೋಲಾರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಕೂಡ ಇಬ್ಬರು ಶಾಸಕರ ಜೊತೆ ರಾಜಭವನದತ್ತ ಹೆಜ್ಜೆ ಹಾಕಿದ್ದಾರೆ. ಆದರೆ ವರ್ತೂರು ಜತೆ ಕಾರಿನಲ್ಲಿ ಆಗಮಿಸಿದ್ದ ಇಬ್ಬರು ಶಾಸಕರು ಯಾರೆಂಬುದು ಮಾತ್ರ ಗುರುತಿಸಲಾಗಿಲ್ಲ.

ಈಶ್ವರಪ್ಪ ವಿರುದ್ಧ ಕಿಡಿ: ಬಂಡಾಯ ಶಾಸಕರ ಪೈಕಿ ಹೆಚ್ಚಿನವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿಂತ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕಳೆದ ಬಾರಿ ಉದ್ಭವಿಸಿದ್ದ ಭಿನ್ನಮತ ಸಂದರ್ಭ ಹೈದರಾಬಾದ್‌ಗೆ ತೆರಳಿದ್ದ ಶಾಸಕರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂಬರ್ಥದ ಈಶ್ವರಪ್ಪ ಹೇಳಿಕೆ ಅವರಲ್ಲಿ ಆಕ್ರೋಶ ಮೂಡಿಸಲು ಕಾರಣವಾಗಿದೆ.

ಅತೃಪ್ತರ ಡಿಮ್ಯಾಂಡ್ ಏನು?: ಗೂಳಿಹಟ್ಟಿ ಶೇಖರ್ ಅವರನ್ನು ಸಂಪುಟಕ್ಕೆ ವಾಪಸ್ ತೆಗೆದುಕೊಳ್ಳಬೇಕು, ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೇಡು ಬಿಟ್ಟು ಪಕ್ಷದಿಂದ ಟಿಕೆಟ್ ನೀಡುವ ಗ್ಯಾರಂಟಿ ನೀಡಬೇಕು, ತಮ್ಮ ಗುಂಪಿನ ಶಾಸಕರಿಗೆ ಪ್ರಮುಖ ನಿಗಮ ಮಂಡಳಿಗಳಿಗೆ ನೇಮಕ ಮಾಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ಈಶ್ವರಪ್ಪ ಶಾಸಕರನ್ನು ಗೌರವದಿಂದ ಕಾಣಬೇಕು. ತಮ್ಮ ಗುಂಪಿನ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸಬಾರದು.

NRB
ಚೆನ್ನೈನಲ್ಲಿ ಬಿರುಸಿನ ಚಟುವಟಿಕೆ-ರಾಜಿಗಾಗಿ ಕಸರತ್ತು: ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಶಾಸಕರು ಚೆನ್ನೈನ ಫಾರ್ಚೂನ್ ಫಾರ್ಮ್ ಹೋಟೆಲ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಮತ್ತೊಂದೆಡೆ ಸಂಧಾನಕ್ಕಾಗಿ ಆಗಮಿಸಿದ್ದ ಸಚಿವ ಶ್ರೀರಾಮುಲು, ಆರ್.ಅಶೋಕ್, ಸಂಸದ ಸಿದ್ದೇಶ್ ಕೂಡ ಇದೇ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿ ಮಾತುಕತೆ ನಡೆಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.

ತಾವು ರಾಜೀನಾಮೆ ಕೊಡಲು ಮುಂದಾಗಿದ್ದು, ಯಾವುದೇ ಸಂಧಾನದ ಅಗತ್ಯ ಇಲ್ಲ ಎಂದು ಅತೃಪ್ತ ಶಾಸಕರು, ಸಚಿವರು ಖಡಕ್ ಆಗಿ ತಿರುಗೇಟು ನೀಡಿದ್ದಾರೆನ್ನಲಾಗಿದೆ. ಆದರೂ ಅತೃಪ್ತ ಶಾಸಕರ ಜೊತೆ ಎರಡನೇ ಸುತ್ತಿನ ಮಾತುಕತೆಗೆ ಮುಂದಾಗಿದ್ದಾರೆ.

ಚೆನ್ನೈಗೆ ಜೆಡಿಎಸ್ ಮುಖಂಡರ ಭೇಟಿ: ಕುತೂಹಲಕಾರಿ ಅಂಶ ಎಂಬಂತೆ ಬಿಜೆಪಿ ಅತೃಪ್ತ ಶಾಸಕರನ್ನು ಜೆಡಿಎಸ್ ಮುಖಂಡರಾದ ಜಮೀರ್ ಅಹ್ಮದ್ ಖಾನ್ ಮತ್ತು ಉಪ ಸಭಾಪತಿ ಪುಟ್ಟಣ್ಣ ಅವರು ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು ಮುಂದಿನ ರಾಜಕೀಯ ನಡೆಯ ಬಗ್ಗೆ ಚರ್ಚಿಸಿ, 14 ಶಾಸಕರು ಸಹಿ ಹಾಕಿದ ಪತ್ರವನ್ನು ಅವರಿಗೆ ನೀಡಿದ್ದಾರೆನ್ನಲಾಗಿದೆ. ಮಾತುಕತೆ ನಂತರ ಖಾನ್ ಮತ್ತು ಪುಟ್ಟಣ್ಣ ಬುಧವಾರ ಬೆಳಿಗ್ಗೆಯೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ರಾಜ್ಯರಾಜಕೀಯದಲ್ಲಿ ಜೆಡಿಎಸ್ ಕಿಂಗ್‌ಪಿನ್: ಆಡಳಿತಾರೂಢ ಬಿಜೆಪಿ ಶಾಸಕರು, ಸಚಿವರು ಅತೃಪ್ತಿಗೊಂಡು ಬಂಡಾಯ ಮೊಳಗಿಸಿದ್ದ ಬೆನ್ನಲ್ಲೇ, ಅತೃಪ್ತರೆಲ್ಲರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ಮೂಲಕ ರಹಸ್ಯ ಮಾತುಕತೆ ನಡೆಸಿದ್ದಾರೆ. ಒಟ್ಟಾರೆ ಈ ಹಿಂದೆ ಮಹತ್ವದ ರಾಜಕೀಯ ಬೆಳವಣಿಗೆ ಕಾರಣವಾಗಿದ್ದ ಜೆಡಿಎಸ್, ಈ ಬಾರಿಯೂ ಕೇಂದ್ರ ಬಿಂದುವಾಗಿರುವುದು ಸ್ಪಷ್ಟವಾಗಿದೆ. ಪ್ರಸಕ್ತ ಬೆಳವಣಿಗೆಯಲ್ಲಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರು, ಅತೃಪ್ತ ಬಿಜೆಪಿ ಶಾಸಕರ ನಡುವೆ ಬಿರುಸಿನ ಮಾತುಕತೆ ಮುಂದುವರಿದಿದೆ. ಆ ನಿಟ್ಟಿನಲ್ಲಿ ರಾಜ್ಯರಾಜಕಾರಣದಲ್ಲಿನ ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ